Site icon Vistara News

Self Harming: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಇನ್ಫೋಸಿಸ್‌ ಉದ್ಯೋಗಿ ಆತ್ಮಹತ್ಯೆ; ರೈಲಿಗೆ ತಲೆಕೊಟ್ಟ ಫ್ಲಿಪ್‌ಕಾರ್ಟ್‌ ಉದ್ಯೋಗಿ

Self Harming

ಕೋಲಾರ: ಇನ್ಫೋಸಿಸ್‌ ಉದ್ಯೋಗಿಯೊಬ್ಬ (Infosys employee) ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ಹರೀಶ್ (28) ಮೃತ ದುರ್ದೈವಿ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಹರೀಶ್‌ ಕಳೆದ ಒಂದು ತಿಂಗಳ ಹಿಂದಷ್ಟೇ ದೇವನಹಳ್ಳಿ ಮೂಲದ‌ ಯುವತಿಯೊಂದಿಗೆ ವಿವಾಹವಾಗಿತ್ತು. ಮಂಗಳವಾರ ಬೆಳಗಿನ ಜಾವ ಕೆಲಸ ಮುಗಿಸಿ ಮನೆಗೆ ಹೋದವನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ‌ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.

ಕೋಲಾರದಲ್ಲಿ ರೈಲಿಗೆ ಸಿಕ್ಕಿ ಯುವತಿ ಸಾವು

ರೈಲಿಗೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ. ಕೋಲಾರದ ಮಾಲೂರು ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ. ಅರಳೇರಿ ಗ್ರಾಮದ ಸಂಧ್ಯಾ (22) ಮೃತ ದುರ್ದೈವಿ. ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಸಂಧ್ಯಾ, ಬೆಳಗ್ಗೆ ಗ್ರಾಮದಿಂದ ಕೆಲಸಕ್ಕೆ ಎಂದು ಹೊರಟವಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಮಾಲೂರು ರೈಲ್ವೆ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Udupi Gang War : ಉಡುಪಿಯಲ್ಲಿ ನಿಲ್ಲದ ಗ್ಯಾಂಗ್ ವಾರ್; ಇಬ್ಬರು ಪುಂಡರು ಅಂದರ್‌

ವ್ಹೀಲ್ ಆಕ್ಸೆಲ್‌ ಕಟ್‌; ಜಮೀನಿಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌

ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ ವ್ಹೀಲ್ ಆಕ್ಸೆಲ್ ಕಟ್ ಆಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಬೇಗೂರಿನಿಂದ ಹೆಚ್.ಡಿ ಕೋಟೆಗೆ ತೆರಳುತ್ತಿದ್ದ ಬಸ್‌ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಸವಾರ ಸಾವು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಯಳಗೊಂಡಹಳ್ಳಿ ಬಳಿ ಘಟನೆ ನಡೆದಿದೆ. ಯಳಗೊಂಡಹಳ್ಳಿ ಗ್ರಾಮದ ಶಶಿ ರಾಮ್ (37) ಮೃತ ದುರ್ದೈವಿ.

ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಶಶಿರಾಮ್‌ಗೆ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ತಲೆಗೆ ಪೆಟ್ಟಾದ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಶಶಿರಾಮ್‌ ಇತ್ತೀಚೆಗೆ ಕಿರು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಎನ್ನಲಾಗಿದೆ. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಬಸ್‌

ತುಮಕೂರು: ಖಾಸಗಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ಘಟನೆ ನಡೆದಿದೆ. ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದೆ. 8 ಮಂದಿ ಕೂಲಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.

ಖಾಸಗಿ ಬಸ್‌ವೊಂದು ರೊದ್ದಂ ಕಡೆಯಿಂದ ದೊಮ್ಮತಮರಿ ಮಾರ್ಗವಾಗಿ ಹಿಂದೂಪುರ ಕಡೆಗೆ ತೆರಳುತ್ತಿತ್ತು. ಈ ವೇಳೆ ಮುಂದೆ ಹೋಗುತ್ತಿದ್ದ ಆಟೋಗೆ ಗುದ್ದಿದೆ. ಪರಿಣಾಮ ಆಟೋದಲ್ಲಿದ್ದ 8 ಮಂದಿ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಕೂಲಿ ಕಾರ್ಮಿಕರಿಗೆ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಬಸ್‌ ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version