ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೋಲಾರ ಭೇಟಿ ಸಂದರ್ಭದಲ್ಲಿ ಭಾರತೀಯ ಮೆಥಡಿಸ್ಟ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ.
ನಾನು ಕೋಲಾರಕ್ಕೆ ನಾಮಿನೇಷನ್ ಸಲ್ಲಿಸಲು ಬರುತ್ತೇನೆ ಎನ್ನುವ ಮೂಲಕ ಇಲ್ಲಿವರೆಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅಸಮಾಧಾನಕ್ಕಿಲ್ಲ ಬ್ರೇಕ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೂ ಮುನ್ನ ಕಣ ಪರೀಕ್ಷೆಗೆ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸಿದರೂ ಕಾಂಗ್ರೆಸ್‌ನ ಬಣ ರಾಜಕೀಯಕ್ಕೆ ಬ್ರೇಕ್ ಬೀಳುವ ಲಕ್ಷಣ ಕಾಣುತ್ತಿಲ್ಲ.
ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಕುರಿತು ಸ್ಥಳೀಯ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ವಿಶ್ವಾಸ ಹೊಂದಿಲ್ಲ ಎನ್ನುವುದು ಅನೇಕ ಬಾರಿ ಜಗಜ್ಜಾಹೀರಾಗಿದೆ. ಇದೀಗ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸುವ ಮುನ್ನವೇ ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಾ ಶಶಿಧರ್ ಕೋಲಾರದಿಂದ ಹೊರಗಿದ್ದಾರೆ.
ಯಾತ್ರೆಗೆಂದೇ ವಿಶೇಷವಾಗಿ ಸಿದ್ಧಪಡಿಸಿಕೊಂಡಿರುವ ಬಸ್‌ನಲ್ಲಿ ಸಿದ್ದರಾಮಯ್ಯ ಅವರು ಆಪ್ತರ ಜತೆಗೆ ಕೋಲಾರ ಪ್ರವೇಶಿಸಿದರು. ಕೋಲಾರ ಗಡಿ ರಾಮಸಂದ್ರದಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ, ಶಾಸಕ ಕೆ. ವೈ. ನಂಜೇಗೌಡ, ಎಸ್.ಎನ್ ನಾರಾಯಣಸ್ವಾಮಿ ಸೇರಿ ಅನೇಕರು ಅದ್ಧೂರಿ ಸ್ವಾಗತ ನೀಡಿದರು. ಜೆಡಿಎಸ್ ತೊರೆದಿರುವ ಶಾಸಕ ಶ್ರೀನಿವಾಸಗೌಡ ಸಹ ಭಾಗಿಯಾದರು. ಶರತ್ ಬಚ್ಚೇಗೌಡ, ನಜೀರ್ ಅಹ್ಮದ್ ಸೇರಿ ಅನೇಕರು ಸಿದ್ದರಾಮಯ್ಯಗೆ ಸಾಥ್ ನೀಡಿದರು.
ಪ್ರಾರಂಭದಲ್ಲಿ ನರಸಾಪುರ ಕೆರೆಯನ್ನು ಸಿದ್ದರಾಮಯ್ಯ ವೀಕ್ಷಣೆ ಮಾಡಿದರು. ಕೆಸಿ ವ್ಯಾಲಿ ನೀರು ಬಿಟ್ಟಿದ್ದರಿಂದ ಅಂತರ್ಜಲ ಹೆಚ್ಚಿದೆ. ಅದಕ್ಕಾಗಿ ದೇವರಿಗೆ ಹೊಟ್ಟೆ ಕಿಚ್ಚು ಬಂದು ಮಳೆ ಸುರಿಸಿದ್ದಾನೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆಂದು ಆಪ್ತರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.
ಕೋಲಾರ ನಗರದಲ್ಲಿ ಬಸ್ ಸಂಚಾರಕ್ಕಿಂತ ಕಾರು ಉತ್ತಮ ಎಂದು ಕಾರನ್ನು ಏರಿದ ಸಿದ್ದರಾಮಯ್ಯ, ಕೋಲಾರಮ್ಮದ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಭಾರತೀಯ ಮೆಥೋಡಿಸ್ಟ್ ಚರ್ಚ್ ಗೆ ಭೇಟಿ ನೀಡಿದರು. ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸೇರಿ ಅನೇಕರು ಸಾಥ್ ನೀಡಿದರು.
ಸಿದ್ದರಾಮಯ್ಯ ಆಗಮನದ ವೇಳೆ ಕೋಲಾರದಲ್ಲೇ ಇರುವಂತೆ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ರೂಪಾ ಶಶಿಧರ್ ಅವರಿಗೆ ಹೈಕಮಾಂಡ್ ತಿಳಿಸಿತ್ತು. ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನಿಮ್ಮ ಬೆಂಬಲ ಬೇಕು ಎಂದು ಮುನಿಯಪ್ಪ ಅವರಲ್ಲಿ ಸಿದ್ದರಾಮಯ್ಯ ಕೇಳಿದ್ದರು. ಆದರೆ ಸಿದ್ದರಾಮಯ್ಯ ಪ್ರವೇಶಿಸುವ ಮುನ್ನವೇ ನಗರದಿಂದ ಹೊರಗುಳಿದಿದ್ದಾರೆ.
ಗುಜರಾತ್‌ನಲ್ಲಿದ್ದೇನೆ ಎಂದ ಮುನಿಯಪ್ಪ
ಸಿದ್ದರಾಮಯ್ಯ ಕೋಲಾರ ಪ್ರವೇಶ ಸಂದರ್ಭದಲ್ಲಿ ಹೊರಗೆ ನಡೆದಿರುವ ಕುರಿತು ವಿಸ್ತಾರ ನ್ಯೂಸ್‌ಗೆ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗುಜರಾತ್ ಚುನಾವಣೆ ಕೆಲಸದ ನಿಮಿತ್ತ ಆಗಮಿಸಿದ್ದೇನೆ ಎಂದು ಅಲ್ಲಿನ ಫೋಟೊಗಳನ್ನೂ ನೀಡಿದ್ದಾರೆ.
ಇದನ್ನೂ ಓದಿ | Siddaramaiah in Kolar | ನಾನೇನೂ ನಾಮಿನೇಷನ್ ಹಾಕ್ಲಿಕೆ ಹೋಗ್ತಿಲ್ಲ, ಚರ್ಚೆಗೆ ಹೋಗ್ತಿದೇನೆ ಅಷ್ಟೆ ಎಂದ ಸಿದ್ದರಾಮಯ್ಯ