Site icon Vistara News

Murder Case: ಶಿಕ್ಷಕಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ, ಹಂತಕರಿಂದ ಪುತ್ರಿ ಪಾರು

teacher murder case

ಕೋಲಾರ: ಮನೆಯೊಳಗೆ ನುಗ್ಗಿದ ಮೂವರು ಹಂತಕರು (Killers) ಚಾಕುವಿನಿಂದ ಶಿಕ್ಷಕಿಯೊಬ್ಬರ (Teacher) ಕುತ್ತಿಗೆ ಕೊಯ್ದು (slitting throat) ಕೊಲೆ (Murder Case) ಮಾಡಿರುವ ಘಟನೆ ಮುಳಬಾಗಿಲು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ (Kolar news) ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಶ್ರೀ (46) ಕೊಲೆಯಾದ ಶಿಕ್ಷಕಿ. ಮನೆಯ ಮೇಲ್ಮಾಳಿಗೆಯಲ್ಲಿದ್ದ ಪುತ್ರಿ ಕೊಲೆಗಡುಕರ ದೃಷ್ಟಿಗೆ ಬೀಳದೆ ಪಾರಾಗಿದ್ದಾಳೆ.

ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.

ನಿಶಾ ನಿನ್ನೆ ಸಂಜೆ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಮೂವರು ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯೊಳಗೆ ಏನೋ ಗಲಾಟೆಯಾಗುತ್ತಿದೆ ಎಂದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.

ಎಸ್‌‍ಪಿ ನಿಖಿಲ್‌, ತಹಸೀಲ್ದಾರ್‌ ವೆಂಕಟಚಲಪತಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರವಿಶಂಕರ್‌, ಜಗದೀಶ್‌, ಡಿವೈಎಸ್‌‍ಪಿ ನಂದಕುಮಾರ್‌, ನಗರ ಠಾಣೆ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ಗ್ರಾಮಾಂತರ ಠಾಣೆ ಸಿ.ಪಿ.ಐ ಸತೀಶ್‌, ಪಿಎಸ್‌‍ಐಗಳಾದ ವಿಠಲ್‌ ವೈ ತಳವಾರ್‌, ಮಮತಾ, ನಂಗ್ಲಿ ಠಾಣೆಯ ಪಿಎಸ್‌‍ಐ ಅರ್ಜುನ್‌ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಈ ಕೊಲೆ ಪೂರ್ವ ಯೋಜಿತವೇ ಅಥವಾ ಮನೆ ಕಳವಿಗೆ ಬಂದ ಕಳ್ಳರು ಈ ಕೃತ್ಯವೆಸಗಿದ್ದಾರೆಯೇ ಅಥವಾ ಬೇರೆ ಯಾವ ದುರುದ್ದೇಶದಿಂದ ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯೆಂದಷ್ಟೇ ಹೊರ ಬರಬೇಕಿದೆ. ಸ್ಥಳಕ್ಕೆ ಕೋಲಾರದಿಂದ ಬೆರಳಚ್ಚು ತಜ್ಞರು, ಎಫ್‌ಎಸ್‌‍ಎಲ್‌ ತಂಡ ಆಗಮಿಸಿ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್‌

Exit mobile version