ವಿಜಯನಗರ: ದೇಶದಲ್ಲೆ ಅತಿ ಎತ್ತರದ ಧ್ವಜಸ್ಥಂಭದ ಮೇಲೆ ಧ್ವಜ ಹಾರಿಸಬೇಕು, ಈ ಧ್ವಜಸ್ಥಂಭ ಸ್ಥಾಪಿಸಿದ ಸಂಪೂರ್ಣ ಕ್ರೆಡಿಟ್ ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ರಾಜ್ಯ ಸರ್ಕಾರ ಬದಲಾವಣೆ ಮಾಡಿದೆ. ಆಗಸ್ಟ್ 15ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 405 ಎತ್ತರದ ಸ್ಥಂಭದ ಮೇಲೆ ಧ್ವಜ ಹಾರಿಸಲು ಸಿಎಂ ಅವಕಾಶ ನೀಡಿ ಆದೇಶಿಸಿದ್ದಾರೆ.
ಬಳ್ಳಾರಿಯಿಂದ ಪ್ರತ್ಯೇಕವಾಗಿ ರಚನೆಯಾಗಿರುವುದು ವಿಜಯನಗರ ಜಿಲ್ಲೆ. ಈ ಜಿಲ್ಲೆಯ ಸೃಜನೆಗೆ ತಾವೇ ಕಾರಣವಾಗಿದ್ದು, ಅದರ ರಾಜಕೀಯ ಶ್ರೇಯವೂ ತಮಗೇ ಸೇರಬೇಕು ಎಂದು ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಸತತ ಪ್ರಯತ್ನ ನಡೆಸುತ್ತಿದ್ದಾರೆ. ತಾವು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದರೂ ಅದರ ಸಂಪೂರ್ಣ ಲಾಭವನ್ನು ಪಡೆಯಲು ಆಗುತ್ತಿಲ್ಲ ಎಂಬ ಕೊರಗು ಆನಂದ್ ಸಿಂಗ್ ಅವರದ್ದು. ಅದರಲ್ಲೂ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ತಮ್ಮ ಹಣವನ್ನೂ ಬಳಸಿ ಹೊಸಪೇಟೆಯಲ್ಲಿ 405 ಅಡಿ ಎತ್ತರದ ಧ್ವಜಸ್ಥಂಭವನ್ನು ನಿರ್ಮಾಣ ಮಾಡಲಾಗುತ್ತಿದೆ.
ಧ್ವಜಸ್ತಂಭದ ಕಾಮಗಾರಿ ಭರದಿಂದ ಸಾಗಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ದೇಶದಲ್ಲೇ ಅತಿ ಎತ್ತರದ ಸ್ಥಂಭದ ಮೇಲೆ ರಾಷ್ಟ್ರ ಧ್ವಜವನ್ನು ತಾವೇ ಹಾರಿಸಬೇಕು ಎನ್ನುವುದು ಆನಂದಸಿಂಗ್ ಆಸೆ. ಆಗಸ್ಟ್ 15 ಹಾಗೂ ಗಣರಾಜ್ಯ ದಿನದಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಧ್ವಜಾರೋಹಣ ನೆರವೇರಿಸುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬದಲಿಗೆ ನೂತನ ಜಿಲ್ಲೆಗೆ ಕಾರಣನಾದ ತಾವೇ ಧ್ವಜವನ್ನೂ ಹಾರಿಸಿ ಕ್ರೆಡಿಟ್ ಪಡೆಯಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿ ಉಸ್ತುವಾರಿ ಸಚಿವ ಸ್ಥಾನವನ್ನು 30ರಂದು ಅದಲು ಬದಲು ಮಾಡಿಸಿಕೊಂಡಿದ್ದರು.
ಇದನ್ನೂ ಓದಿ | CM Tour | ಆ.1ಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಭೇಟಿ; ಹನುಮ ಜನ್ಮಭೂಮಿ ಬಗ್ಗೆ ಚರ್ಚೆ
ಸಂಜೆ ವೇಳೆಗೆ ಆದೇಶ ವಾಪಸ್
ವಿಜಯನಗರ ಉಸ್ತುವಾರಿಯಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ತಾವು ಉಸ್ತುವಾರಿಯಾಗಿದ್ದ ಕೊಪ್ಪಳಕ್ಕೆ ವರ್ಗಾವಣೆ ಮಾಡಿಸುವಲ್ಲಿ ಸಫಲರಾದರು. ಆದರೆ ತಾವು ಅಂದುಕೊಂಡಷ್ಟು ಈ ವಿಚಾರ ಸರಳವಾಗಿಲ್ಲ ಎನ್ನುವುದು ಆನಂದ ಸಿಂಗ್ ಹಾಗೂ ಸ್ವತಂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಅರಿವಾಗಿತ್ತು.
ರಾಜ್ಯದ ಅನೇಕ ಜಿಲ್ಲೆಗಳಿಂದಲೂ ಉಸ್ತುವಾರಿ ಸಚಿವರುಗಳು ಸಿಎಂ ಬೊಮ್ಮಾಯಿ ಅವರನ್ನು ಸಂಪರ್ಕಿಸಿದ್ದರು. ಚುನಾವಣೆ ವರ್ಷದಲ್ಲಿ ತವರು ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡಲು ನಮಗೂ ಅವಕಾಶ ಮಾಡಿಕೊಡಿ. ಇದರಿಂದ ನಮಗೂ ಹಾಗೂ ಪಕ್ಷಕ್ಕೂ ಅನುಕೂಲವಾಗುತ್ತದೆ ಎಂದು ದುಂಬಾಲು ಬಿದ್ದಿದ್ದರು. ಆದರೆ ಜಿಲ್ಲೆಯೊಂದರಲ್ಲಿ ಬಿಜೆಪಿಯ ಮೂರ್ನಾಲು ಶಾಸಕರಿರುತ್ತಾರೆ, ಕೆಲವು ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿದ್ದಾರೆ. ಹೀಗೆ ಒಬ್ಬ ಶಾಸಕರಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡಿದರೆ ಉಳಿದ ಶಾಸಕರು ಮುನಿಸಿಕೊಳ್ಳುತ್ತಾರೆ. ಸ್ಥಳೀಯ ಮಟ್ಟದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತದೆ ಎಂದು ಮನವರಿಕೆಯಾಗಿತ್ತು. ಇದರ ನಂತರ ಸಂಜೆಯೊಳಗೆ ಈ ಆದೇಶವನ್ನು ಸರ್ಕಾರ ಹಿಂಪಡೆದಿತ್ತು.
ಈ ಬಾರಿ ಸಫಲ
ಉಸ್ತುವಾರಿ ಸಚಿವ ಸ್ಥಾನವನ್ನು ಬದಲಾಯಿಸಿ ಮತ್ತೆ ಹಿಂಪಡೆಯುವಂತೆ ಆಗಿದ್ದರೂ ಆನಂದ್ ಸಿಂಗ್ ಹಠ ಬಿಡಲಿಲ್ಲ. ಮತ್ತೆ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಈ ಬಾರಿ ಸಚಿವರ ಒತ್ತಾಯಕ್ಕೆ ಮಣಿದರೂ ತಾಂತ್ರಿಕವಾಗಿ ತೊಂದರೆ ಆಗಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ. ಆನಂದ ಸಿಂಗ್ ಅವರನ್ನು ವಿಜಯನಗರಕ್ಕೆ ಹಾಗೂ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಗೆ ಆಗಸ್ಟ್ 15 ರ ಧ್ವಜಾರೋಹಣಕ್ಕೆ ಮಾತ್ರ ಬದಲಾವಣೆ ಮಾಡಿದ್ದಾರೆ. ಇಬ್ಬರ ಉಸ್ತುವಾರಿ ಹಾಗೆಯೇ ಉಳಿಯಲಿದೆ, 405 ಅಡಿ ಎತ್ತರದ ಧ್ವಜ ಹಾರಿಸುವ ಆನಂದ ಸಿಂಗ್ ಕನಸೂ ಈಡೇರುತ್ತದೆ.
ಇವರಿಬ್ಬರ ಜತೆಗೆ, ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ನಿಯೋಜನೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ. ಗೋಪಾಲಯ್ಯ ಅವರು ಹಾಸನ ಜಿಲ್ಲೆಗೂ ಉಸ್ತುವಾರಿ ಸಚಿವರಾಗಿದ್ದಾರೆ. ಹಾಗಾಗಿ ಗೋಪಾಲಯ್ಯ ಅವರನ್ನು ಹಾಸನ ಜಿಲ್ಲೆಗೆ ನಿಯೋಜನೆ ಮಾಡಿ, ಮಂಡ್ಯದಲ್ಲಿ ಆರ್. ಅಶೊಕ್ ಧ್ವಜಾರೋಹಣಕ್ಕೆ ನಿಯುಕ್ತಿ ಮಾಡಲಾಗಿದೆ.
ಒಂದೇ ದಿನದಲ್ಲಿ ಉಸ್ತುವಾರಿ ಸಚಿವರಿಬ್ಬರ ಅದಲು-ಬದಲು; ಮತ್ತೆ ಅದಲು-ಬದಲು!