ವಿಜಯನಗರ: ರಾಜ್ಯ ಸರ್ಕಾರದ ಆದೇಶಗಳು ಎಂದರೆ ಗಂಭೀರವಾಗಿ ಪರಿಗಣಿಸುವ ಕಾಲ ಈಗ ಉಳಿದಿಲ್ಲ. ಏಕೆಂದರೆ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಬೆಳಗ್ಗೆ ಹೊರಡಿಸಿದ ಆದೇಶಗಳು ಸಂಜೆಯ ಹೊತ್ತಿಗೆ, ಮದ್ಯ ರಾತ್ರಿ ವೇಳೆಗೆ ಬದಲಾಗುತ್ತಿರುತ್ತವೆ. ಈಗ ಅಂತಹದ್ದೇ ಒಂದು ಆದೇಶ ಆದೇಶ ಹಿಂಪಡೆಯುವ ಪ್ರಕ್ರಿಯೆಗೆ, ಆಗಸ್ಟ್ 15ರಂದು ಧ್ವಜಾರೋಹಣದ ಫೋಟೊ ತೆಗೆಸಿಕೊಳ್ಳಬೇಕು ಎಂಬುದೇ ಕಾರಣ ಎಂಬ ಚರ್ಚೆ ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತಿದೆ.
ಬಳ್ಳಾರಿಯಿಂದ ಪ್ರತ್ಯೇಕವಾಗಿ ರಚನೆಯಾಗಿರುವುದು ವಿಜಯನಗರ ಜಿಲ್ಲೆ. ಈ ಜಿಲ್ಲೆಯ ಸೃಜನೆಗೆ ತಾವೇ ಕಾರಣವಾಗಿದ್ದು, ಅದರ ರಾಜಕೀಯ ಶ್ರೇಯವೂ ತಮಗೇ ಸೇರಬೇಕು ಎಂದು ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಸತತ ಪ್ರಯತ್ನ ನಡೆಸುತ್ತಿದ್ದಾರೆ.
2022ರ ಏಪ್ರಿಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಅಕ್ಷರಶಃ ವಿಜಯನಗರ ಸಾಮ್ರಾಜ್ಯದಂತೆಯೇ ನಡೆಸಲು ಪ್ರಯತ್ನಿಸಿದರು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ರಾಜ್ಯದ ಇತರೆಡೆಯ ಬಿಜೆಪಿ ಪದಾಧಿಕಾರಿಗಳು ಸವಿಯಬೇಕು ಎಂದು ಅದ್ಧೂರಿ ಸೆಟ್‌ಗಳನ್ನು ಹಾಕಿಸಿದ್ದರು. ರಾಜ್ಯದ ಮುಖಂಡರ ಜತೆಗೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಈ ಅದ್ಧೂರಿ ವ್ಯವಸ್ಥೆಗೆ ಶಹಬ್ಬಾಸ್‌ಗಿರಿ ನೀಡಿದ್ದರು.
ವಿಜಯನಗರ ಜಿಲ್ಲೆಗೇ ಸೇರುವ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಿ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮೂರ್ನಾಲ್ಕು ಸಭೆಗಳನ್ನು ನಡೆಸಿ ನೂರಾರು ಕೋಟಿ ರೂ. ಅನುಮೋದನೆಯನ್ನೂ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸಹಕಾರವನ್ನೂ ಪಡೆದು, ಹನುಮನ ಜನ್ಮಸ್ಥಾನದ ಅಭಿವೃದ್ಧಿ ಶ್ರೇಯವನ್ನೂ ಪಡೆಯುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 1 ರಂದು ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಭಿವೃದ್ಧಿ ಕಾರಮಗಾರಿಗಳನ್ನು ವೀಕ್ಷಣೆ ಮಾಡಿ, ಚುನಾವಣಾ ವರ್ಷದಲ್ಲಿ ಹಿಂದುತ್ವ ಅಲೆಯ ಲಾಭವನ್ನೂ ಪಡೆಯಲು ಯೋಜನೆ ರೂಪಿಸಿದ್ದಾರೆ.
ಒಂದೇ ದಿನದಲ್ಲಿ ಎರಡು ಬಾರಿ ಅದಲು ಬದಲು
ತಾವು ಜಿಲ್ಲೆಯಲ್ಲಿ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದರೂ ಅದರ ಸಂಪೂರ್ಣ ಲಾಭವನ್ನು ಪಡೆಯಲು ಆಗುತ್ತಿಲ್ಲ ಎಂಬ ಕೊರಗು ಆನಂದ್ ಸಿಂಗ್ ಅವರದ್ದು. ಅದರಲ್ಲೂ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ತಮ್ಮ ಹಣವನ್ನೂ ಬಳಸಿ ಹೊಸಪೇಟೆಯಲ್ಲಿ 408 ಅಡಿ ಎತ್ತರದ ಧ್ವಜಸ್ಥಂಭವನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ | CM Tour | ಆ.1ಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಭೇಟಿ; ಹನುಮ ಜನ್ಮಭೂಮಿ ಬಗ್ಗೆ ಚರ್ಚೆ
ಧ್ವಜಸ್ತಂಭದ ಕಾಮಗಾರಿ ಭರದಿಂದ ಸಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ದೇಶದಲ್ಲೇ ಅತಿ ಎತ್ತರದ ಸ್ಥಂಭದ ಮೇಲೆ ರಾಷ್ಟ್ರ ಧ್ವಜವನ್ನು ತಾವೇ ಹಾರಿಸಬೇಕು ಎನ್ನುವುದು ಆನಂದಸಿಂಗ್ ಆಸೆ. ಆಗಸ್ಟ್ 15 ಹಾಗೂ ಗಣರಾಜ್ಯ ದಿನದಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಧ್ವಜಾರೋಹಣ ನೆರವೇರಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬದಲಿಗೆ ನೂತನ ಜಿಲ್ಲೆಗೆ ಕಾರಣನಾದ ನಾನೇ ಧ್ವಜವನ್ನೂ ಹಾರಿಸಿ ಕ್ರೆಡಿಟ್ ಪಡೆಯಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿ ಉಸ್ತುವಾರಿ ಸಚಿವ ಸ್ಥಾನವನ್ನು ಶನಿವಾರ ಅದಲು ಬದಲು ಮಾಡಿಸಿಕೊಂಡರು. ದೇಶದಲ್ಲೇ ಅತಿ ದೊಡ್ಡ ಸ್ಥಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಫೋಟೊ ಹಾಗೂ ಅದರ ಕ್ರೆಡಿಟ್ ಆನಂದ ಸಿಂಗ್ ಅವರಿಗೆ ಬೇಕಿತ್ತು ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಂಜೆ ವೇಳೆಗೆ ಆದೇಶ ವಾಪಸ್
ವಿಜಯನಗರ ಉಸ್ತುವಾರಿಯಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ತಾವು ಉಸ್ತುವಾರಿಯಾಗಿದ್ದ ಕೊಪ್ಪಳಕ್ಕೆ ವರ್ಗಾವಣೆ ಮಾಡಿಸುವಲ್ಲಿ ಸಫಲರಾದರು. ಆದರೆ ತಾವು ಅಂದುಕೊಂಡಷ್ಟು ಈ ವಿಚಾರ ಸರಳವಾಗಿಲ್ಲ ಎನ್ನುವುದು ಆನಂದ ಸಿಂಗ್ ಹಾಗೂ ಸ್ವತಂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಅರಿವಾಯಿತು.
ರಾಜ್ಯದ ಅನೇಕ ಜಿಲ್ಲೆಗಳಿಂದಲೂ ಉಸ್ತುವಾರಿ ಸಚಿವರುಗಳು ಸಿಎಂ ಬೊಮ್ಮಾಯಿ ಅವರನ್ನು ಸಂಪರ್ಕಿಸಿದ್ದಾರೆ. ಚುನಾವಣೆ ವರ್ಷದಲ್ಲಿ ತವರು ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡಲು ನಮಗೂ ಅವಕಾಶ ಮಾಡಿಕೊಡಿ. ಇದರಿಂದ ನಮಗೂ ಹಾಗೂ ಪಕ್ಷಕ್ಕೂ ಅನುಕೂಲವಾಗುತ್ತದೆ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಜಿಲ್ಲೆಯೊಂದರಲ್ಲಿ ಬಿಜೆಪಿಯ ಮೂರ್ನಾಲು ಶಾಸಕರಿರುತ್ತಾರೆ, ಕೆಲವು ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿದ್ದಾರೆ. ಹೀಗೆ ಒಬ್ಬ ಶಾಸಕರಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡಿದರೆ ಉಳಿದ ಶಾಸಕರು ಮುನಿಸಿಕೊಳ್ಳುತ್ತಾರೆ. ಸ್ಥಳೀಯ ಮಟ್ಟದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತದೆ ಎಂದು ಮನವರಿಕೆಯಾಗಿದೆ.
ಇದನ್ನೂ ಓದಿ | ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸಿಗಲಿದೆ ಚಾಲನೆ: ಸಚಿವ ಆನಂದ್ ಸಿಂಗ್
ಇದೇ ವೇಳೆ ಶಶಿಕಲಾ ಜೊಲ್ಲೆ ಅವರೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಂಪರ್ಕಿಸಿದ್ದಾರೆ. ಅತ್ತ ರಾಷ್ಟ್ರೀಯ ಬಿಜೆಪಿ ಮುಖಂಡರಿಗೂ ಮಾಹಿತಿ ನೀಡಿದ್ದಾರೆ. ಒಬ್ಬ ಸಚಿವರ ವೈಯಕ್ತಿಕ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ರಾಜ್ಯದಲ್ಲಿ ಎಲ್ಲೂ ಇಲ್ಲದ ನೀತಿಯನ್ನು ಅನುಸರಿಸಲಾಗುತ್ತಿದೆ. ಇದರಿಂದ ವೈಯಕ್ತಿಕವಾಗಿ ತಮ್ಮ ಘನತೆಗೂ ಕುಂದು ಬರುತ್ತದೆ ಎಂದು ಅಲವತ್ತುಕೊಂಡಿದ್ದಾರೆ. ಈ ಕುರಿತು ರಾಷ್ಟ್ರೀಯ ಬಿಜೆಪಿಯಿಂದಲೂ ಬೊಮ್ಮಾಯಿ ಅವರನ್ನು ಪ್ರಶ್ನಿಸಲಾಗಿದೆ. ಅದೇಕೊ ವಿಚಾರ ಕೈಮೀರಿ ಹೋಗುತ್ತಿರುವುದನ್ನು ಕಂಡ ಸಿಎಂ, ಕೂಡಲೆ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಗೆ, ಒಂದೇ ದಿನದಲ್ಲಿ ಆದೇಶವನ್ನು ಹಿಂಪಡೆಯಲಾಯಿತು. ಆಗಸ್ಟ್ 15ರಂದು ತವರು ಜಿಲ್ಲೆಯಲ್ಲೆ ಧ್ವಜಾರೋಹಣ ನೆರವೇರಿಸಿ ಸಲ್ಯೂಟ್ ಮಾಡುತ್ತಿರುವ ಫೋಟೊ ಪಡೆಯಬೇಕೆಂಬ ಆನಂದ ಸಿಂಗ್ ಕನಸು ಸದ್ಯಕ್ಕೆ ಈಡೇರುವುದು ತಪ್ಪಿತು ಎಂಬ ಚರ್ಚೆಗಳು ಜಿಲ್ಲೆಯ ಜನರಲ್ಲಿ ನಡೆಯುತ್ತಿವೆ.
ಒಂದೇ ದಿನದಲ್ಲಿ ಉಸ್ತುವಾರಿ ಸಚಿವರಿಬ್ಬರ ಅದಲು-ಬದಲು; ಮತ್ತೆ ಅದಲು-ಬದಲು!