Site icon Vistara News

ಎಲೆಕ್ಷನ್‌ ಹವಾ | ಗಂಗಾವತಿ | ಪರಣ್ಣ ವಿರೋಧಿ ಅಲೆಯ ಲಾಭ ಪಡೆಯುವ ಸೆಣೆಸಾಟದಲ್ಲಿ ಅನ್ಸಾರಿ

ELection Hawa Political scenario in gangavathi constituency in koppala district

ಮೌನೇಶ್‌ ಬಡಿಗೇರ್‌, ಕೊಪ್ಪಳ
ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಗಂಗಾವತಿ ವಿಧಾನಸಭಾ ಕ್ಷೇತ್ರವೂ ಒಂದು . ಸಾಮಾನ್ಯ ಕ್ಷೇತ್ರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರತಿ ಬಾರಿಯೂ ರಂಗು ಪಡೆದುಕೊಳ್ಳುತ್ತದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಾವೇ ಅಭ್ಯರ್ಥಿ ಎಂದು ಚುನಾವಣೆ ತಯಾರಿಯೂ ನಡೆಸಿದ್ದಾರೆ. ಪ್ರಸ್ತುತ ಶಾಸಕರಾಗಿರುವ ಬಿಜೆಪಿಯ ಪರಣ್ಣ ಮುನವಳ್ಳಿಯವರನ್ನು ಸೋಲಿಸಲು ಬೇಕಾದ ರಣತಂತ್ರವನ್ನು ರೂಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪ್ರವೇಶವು ಹೊಸ ಕುತೂಹಲ ಮೂಡಿಸಿದೆ.

ಭತ್ತದ ಕಣಜ ಎಂದೇ ಪ್ರಸಿದ್ದಿ ಪಡೆದಿರುವ ಕ್ಷೇತ್ರ ಗಂಗಾವತಿ ವಿಧಾನಸಭಾ ಕ್ಷೇತ್ರ. ಗಂಗಾವತಿ ತಾಲೂಕು ತುಂಗಭದ್ರಾ ಜಲಾಶಯದ ಎಡದಂಡೆ ನಾಲೆ ಮೂಲಕ ನೀರಾವರಿ ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತ ದೇಶದ ನಾನಾ ಮೂಲೆಗಳಿಗೆ ರಫ್ತಾಗುತ್ತದೆ. ಆಂಜನೇಯನ ಜನ್ಮಸ್ಥಳವಾಗಿರುವ ಐತಿಹಾಸಿಕ ಅಂಜನಾದ್ರಿ, ಪಂಪಾಸರೋವರ, ವಾಲಿಕಿಲ್ಲಾ ಸೇರಿದಂತೆ ಅನೇಕ ಮಹತ್ವದ ಸ್ಥಳಗಳನ್ನು ಹೊಂದಿರುವ ಕಿಷ್ಕಿಂಧೆ ನಾಡು ಈ ಗಂಗಾವತಿ. ಕೊಪ್ಪಳ ತಾಲೂಕಿನ ಇರಕಲ್ ಗಡಾ ಹೋಬಳಿಯ ಒಂದಿಷ್ಟು ಗ್ರಾಮಗಳು ಹಾಗೂ ಬೂದಗುಂಪಾ ಸೇರಿದಂತೆ ಹಲವು ಗ್ರಾಮಗಳು ಈ ಕ್ಷೇತ್ರದಲ್ಲಿವೆ.

ಚುನಾವಣಾ ಇತಿಹಾಸ
1957 ರಲ್ಲಿ ರಚನೆಯಾದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಬಾರಿ ಕಾಂಗ್ರೆಸ್‍ನ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾ ಬಂದಿದ್ದಾರೆ. 2004 ರಿಂದ  ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಎಂಎಲ್‍ಎ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರ ಧರ್ಮಾಧಾರಿತ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ.  1957 ರಲ್ಲಿ ಕಾಂಗ್ರೆಸ್‌ನ ದೇಸಾಯಿ ಭೀಮಸೇನರಾವ್, 1962ರಲ್ಲಿ ಕಾಂಗ್ರೆಸ್‌ನ ತಿರುಮಲ ದೇವರಾಯಲು, 1967ರಲ್ಲಿ ತಿರುಮಲ ರಾವ್ ಕಾಂಗ್ರೆಸ್‌ನಿಂದ ಪುನಾರಾಯ್ಕೆ, 1972 ರಲ್ಲಿ ಕಾಂಗ್ರೆಸ್‌ನ ಎಚ್.ಆರ್.  ಶ್ರೀರಾಮುಲು, 1974ರಲ್ಲಿ ಉಪಚುನಾವಣೆ( ಶ್ರೀರಾಮುಲು ನಿಧನರಾದ ಹಿನ್ನೆಲೆ) ಕಾಂಗ್ರೆಸ್‌ನ ಎಚ್.ಜಿ ರಾಮುಲು, 1978ರಲ್ಲಿ ಯಾದವರಾವ್ ಶೇಷರಾವ್, 1983ರಲ್ಲಿ ಪಕ್ಷೇತರ ಅಭ್ಯರ್ಥಿ ಹೆಚ್.ಎಸ್ ಮುರುಳೀಧರ, 1985ರಲ್ಲಿ ಜನತಾ ಪಕ್ಷದಿಂದ ಗೌಳಿ ಮಹಾದೇವಪ್ಪ, 1989ರಲ್ಲಿ ಕಾಂಗ್ರೆಸ್‌ನ ಶ್ರೀರಂಗದೇವರಾಯಲು, 1994ರಲ್ಲಿ ಕಾಂಗ್ರೆಸ್‌ನಿಂದ ಶ್ರೀರಂಗದೇವರಾಯಲು ಪುನಾರಾಯ್ಕೆ, 1999ರಲ್ಲಿ ಕಾಂಗ್ರೆಸ್‌ನಿಂದ ಶ್ರೀರಂಗದೇವರಾಯಲು ಪುನಾರಾಯ್ಕೆ. 2004ರಲ್ಲಿ ಜೆಡಿಎಸ್‌ನಿಂದ ಇಕ್ಬಾಲ್ ಅನ್ಸಾರಿ, 2008ರಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ ಹಾಗೂ 2013ರಲ್ಲಿ ಜೆಡಿಎಸ್ ಪಕ್ಷದಿಂದ ಇಕ್ಬಾಲ್ ಅನ್ಸಾರಿ  ಹಾಗೂ 2018ರಲ್ಲಿ ಪರಣ್ಣ ಮುನವಳ್ಳಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.

ಮುನವಳ್ಳಿ ವರ್ಸಸ್ ಅನ್ಸಾರಿ
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಮೂಲಕ ಕಾಂಗ್ರೆಸ್ಸೇತರರು ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿತು. 2004 ರಲ್ಲಿ ಮೊದಲ ಬಾರಿಗೆ ಜೆಡಿಎಸ್‍ ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಗೆಲುವು ಸಾಧಿಸಿ ಕಾಂಗ್ರೆಸ್‍ಗೆ ಕ್ಷೇತ್ರ ಕಳೆದುಕೊಳ್ಳುವಂತೆ ಮಾಡಿದ್ದರು. 2008 ರಿಂದ ಪರಣ್ಣ ಮುನವಳ್ಳಿ ಹಾಗೂ ಇಕ್ಬಾಲ್ ಅನ್ಸಾರಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ಸದ್ಯ ಕಾಂಗ್ರೆಸ್‍ ಪಕ್ಷದಲ್ಲಿರುವ ಇಕ್ಬಾಲ್ ಅನ್ಸಾರಿ ಕಣಕ್ಕಿಳಿಯಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 2008 ರಿಂದ 2018 ರವರೆಗಿನ ಮೂರು ಅವಧಿಯಲ್ಲಿ ಎರಡು ಬಾರಿ ಬಿಜೆಪಿಯ ಪರಣ್ಣ ಗೆಲುವು ಸಾಧಿಸಿದ್ದರೆ ಒಂದು ಬಾರಿ ಇಕ್ಬಾಲ್ ಅನ್ಸಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಜಯಗಳಿಸಿ ಮಂತ್ರಿಯೂ ಆಗಿದ್ದಾರೆ. ಎರಡು ಬಾರಿ ಸೋಲುಂಡಿದ್ದಾರೆ. ಈ ಸೋಲಿನ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದ್ದು 2023 ರ ಚುನಾವಣೆಯಲ್ಲಿ ಚುನಾವಣಾ ಕಣದಲ್ಲಿ ಪರಣ್ಣ ಹಾಗೂ ಇಕ್ಬಾಲ್ ಅನ್ಸಾರಿ ಮುಖಾಮುಖಿಯಾಗಲಿದೆ. ಹೀಗಾಗಿ ಪರಣ್ಣ ಮುನವಳ್ಳಿ ವರ್ಸಸ್ ಇಕ್ಬಾಲ್ ಅನ್ಸಾರಿ ಎನ್ನುವಂತಾಗಿದೆ.

ಪ್ರಸ್ತುತ ಶಾಸಕರಾಗಿರುವ ಪರಣ್ಣ ಮುನವಳ್ಳಿ ಅವರಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ಇದೆ. ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಅಸಮಧಾನವಿದೆ. ಅಂಗನವಾಡಿಗಳ ಮೊಟ್ಟೆ ಖರೀದಿಯ ಕಮಿಷನ್ ಆರೋಪದ ಡ್ಯಾಮೇಜ್ ಇದೆ. ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿರುವ ಪರಣ್ಣ ಮುನವಳ್ಳಿ ಲಿಂಗಾಯತ ಮತಗಳ ಜತೆಗೆ ಎಸ್‌ಟಿ, ಕಟ್ಟಾ ಬಿಜೆಪಿ ಮತಗಳು ಹಾಗೂ ಆಂಧ್ರ ವಲಸಿಗ ಮತಗಳನ್ನು ನಂಬಿದ್ದಾರೆ. ಆಡಳಿತ ವಿಚಾರದಲ್ಲಿ ಹಿಡಿತವಿರುವ ಕಾಂಗ್ರೆಸ್‍ನ ಇಕ್ಬಾಲ್ ಅನ್ಸಾರಿಗೆ ಮುಸ್ಲಿಂ ಸಮುದಾಯದ 41 ಸಾವಿರ ಮತಗಳು ಎಲ್ಲೂ ಚದುರುವುದಿಲ್ಲ. ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು, ಕುರುಬ ಸಮುದಾಯದ ಹಾಗೂ ಎಸ್‌ಟಿ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅನ್ಸಾರಿ ಸಕ್ಸಸ್ ಆಗುವ ಸಾಧ್ಯತೆ ಹೆಚ್ಚು. ಪರಣ್ಣ ವಿರುದ್ಧದ ಅಸಮಧಾನ ಇಕ್ಬಾಲ್ ಅನ್ಸಾರಿಗೆ ಪ್ಲಸ್ ಆಗಲಿದೆ. ಬದ್ದ ವೈರಿಯಂತಿದ್ದ ಮಾಜಿ ಎಂಎಲ್‍ಸಿ ಎಚ್.ಆರ್. ಶ್ರೀನಾಥ್ ಅವರು ಮರಳಿ ಕಾಂಗ್ರೆಸ್‍ಗೆ ಬಂದಿರುವುದರಿಂದ ನಾನೂ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಇದನ್ನು ಅಷ್ಟೊಂದು ಪರಿಣಾಮಕಾರಿಯಾಗಿ ತೆಗೆದುಕೊಳ್ಳದಿದ್ದರೂ ಒಳಗೊಳಗೆ ಅನ್ಸಾರಿ ಸೋಲಿಗೆ ಕಾರಣವೂ ಆಗಬಹುದು.

ಜನಾರ್ದನ ರೆಡ್ಡಿ ಎಂಟ್ರಿ ಕುತೂಹಲ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಚಟುವಟಿಕೆಗಳು ಈಗ ಗಂಗಾವತಿಯಲ್ಲಿ ಕಾಣಬರುತ್ತಿವೆ. ಈಗಾಗಲೆ ಮನೆಯನ್ನೂ ಮಾಡಿದ್ದಾರೆ. ಆದರೆ ಸ್ವತಃ ರೆಡ್ಡಿ ಅವರೇ ಸ್ಪರ್ಧೆ ಮಾಡುತ್ತಾರೆಯೇ ಅವರ ಪತ್ನಿ ಸ್ಪರ್ಧೆ ಮಾಡುತ್ತಾರೆಯೇ, ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರೆಯೇ, ಹೊಸ ಪಕ್ಷ ಕಟ್ಟುತ್ತಾರೆಯೇ ಎಂಬ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ರೆಡ್ಡಿ ಅವರು ಸ್ಪರ್ಧೆ ಮಾಡಿದರೆ ಹಾಲಿ ಶಾಸಕರಿಗೇ ಹೆಚ್ಚು ಸಂಕಷ್ಟ ಎದುರಾಗಬಹುದು ಎಂಬ ಮುನ್ಸೂಚನೆಗಳಿವೆ. ರೆಡ್ಡಿ ಅವರ ಮುಂದಿನ ನಡೆಯನ್ನು ಆಧರಿಸಿ ಕ್ಷೇತ್ರದ ಫಲಿತಾಂಶ ಪ್ರಭಾವ ಬೀರಲಿದೆ ಎಂಬುದಂತೂ ಸ್ಪಷ್ಟ.

2023 ಕ್ಕೆ ಸಂಭಾವ್ಯರು
1. ಪರಣ್ಣ ಮುನವಳ್ಳಿ (ಬಿಜೆಪಿ)
2. ಇಕ್ಬಾಲ್ ಅನ್ಸಾರಿ, ಎಚ್.ಆರ್. ಶ್ರೀನಾಥ್ (ಕಾಂಗ್ರೆಸ್)

ಚುನಾವಣಾ ಇತಿಹಾಸ

ಮತದಾರರ ಮಾಹಿತಿ

ಜಾತಿವಾರು ಅಂಕಿಅಂಶ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಸುಳ್ಯ | ಬಿಜೆಪಿಗೇ ʼಮೀಸಲುʼ ಆಗಿರುವ ಕ್ಷೇತ್ರದಲ್ಲಿ 7ನೇ ಗೆಲುವಿನ ನಗೆ ಬೀರುವರೇ ಅಂಗಾರ?

Exit mobile version