ಕೊಪ್ಪಳ: ಗಂಗಾವತಿ ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪತಿ-ಪತ್ನಿ ನಡುವೆ ಬಂದ ಕಿರಾತಕರ ಗುಂಪೊಂದು ಮದ್ಯದ ನಶೆಯಲ್ಲಿ ಕಿರಿಕ್ (Physical Abuse) ಮಾಡಿದ್ದಾರೆ. ಪತಿಗೆ ಥಳಿಸಿ ನಂತರ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.
ಅವರಿಬ್ಬರು ಪ್ರೀತಿಸಿ ಮದುವೆ ಆಗಿ ಬೆಂಗಳೂರಲ್ಲಿ ವಾಸವಿದ್ದರು. ಯಾವುದೋ ವಿಚಾರಕ್ಕೆ ಕಲಹ ಉಂಟಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಮುನಿಸಿಕೊಂಡಿದ್ದ ಪತ್ನಿಯನ್ನು ಹುಡುಕಿಕೊಂಡು ಬೆಂಗಳೂರಿಂದ ಗಂಗಾವತಿಗೆ ಪತಿ ಬಂದಿದ್ದ. ಫೆ.9ರ ರಾತ್ರಿ 9 ಗಂಟೆ ಸುಮಾರಿಗೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಕೂತು ಇಬ್ಬರು ಏರು ಧ್ವನಿಯಲ್ಲಿ ಜಗಳವಾಡುತ್ತಿದ್ದರು.
ದಂಪತಿಯ ಕಲಹವನ್ನೇ ಬಂಡವಾಳ ಮಾಡಿಕೊಂಡು ಅಲ್ಲಿಗೆ ಬಂದ ಕಿರಾತಕರ ಗುಂಪೊಂದು, ಪತಿ ಮಂಜುನಾಥ್‌ನನ್ನು ಥಳಿಸಲು ಮುಂದಾಗಿದ್ದರು. ಯುವತಿಯನ್ನು ಚುಡಾಯಿಸುತ್ತಿದ್ದೀಯಾ ಎಂದು ಕ್ಯಾತೆ ತೆಗೆದಿದ್ದರು. ಈ ವೇಳೆ ಸಂತ್ರಸ್ತೆ ನಾವಿಬ್ಬರು ಗಂಡ-ಹೆಂಡತಿ ಎಂದರೂ ಬಿಡದೇ, ಎಲ್ಲರೂ ಸೇರಿಕೊಂಡು ಮಂಜುನಾಥ್‌ಗೆ ಥಳಿಸಿದ್ದಾರೆ. ಈ ವೇಳೆ ಮಂಜುನಾಥ್ ಪತ್ನಿಯ ಮೈ-ಕೈ ಮುಟ್ಟಿ ಬಟ್ಟೆ ಹಿಡಿದು ಎಳೆದಾಡಿದ್ದಾರೆ.
ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಗಲಾಟೆಯಾಗಿದ್ದು, ಇದರಿಂದ ಗಾಬರಿಗೊಂಡ ಸಂತ್ರಸ್ತೆ ರಕ್ಷಣೆಗಾಗಿ ಸಮೀಪದ ನೆಹರೂ ಪಾರ್ಕ್ ಕಡೆ ಓಡಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಹಿಂಬಾಲಿಸಿ ಬಂದ ಲಿಂಗರಾಜ ಎಂಬಾತ ಬಲಾತ್ಕಾರ ಮಾಡಿದ್ದಾನೆ. ಹಲ್ಲೆ ಮಾಡಿದ ಉಳಿದ ಆರೋಪಿಗಳನ್ನು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂದು ಗುರುತಿಸಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಪ್ರೀತ್ಸೆ ಅಂತ ಅಪ್ರಾಪ್ತೆಯನ್ನು ಕೊಂದಿದ್ದ ಕಿರಾತಕ 2ನೇ ಬಾರಿ ಆತ್ಮಹತ್ಯೆ ಯತ್ನ
ಕೋಲಾರ: ಪ್ರೀತ್ಸೆ.. ಪ್ರೀತ್ಸೆ ಎಂದು ಪೀಡಿಸಿ ಅಪ್ರಾಪ್ತೆಯ ಕೊಂದಿದ್ದ ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಡ್ರಾಮಾ (Self Harming) ಮಾಡಿದ್ದ. ಹೀಗಾಗಿ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೊಲೆ ಆರೋಪಿ ನಿತಿನ್ ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕಾಣೆಯಾಗಿದ್ದ 15 ವರ್ಷದ ಬಾಲಕಿ ಬೆಂಗಳೂರು ಗ್ರಾಮಾಂತರದ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಸಿಕ್ಕಿದ್ದಳು. ಕೋಲಾರದ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಂದಿತಾಳನ್ನು (15) ಬರಗೂರು ಗ್ರಾಮದ ನಿವಾಸಿ ನಿತಿನ್ (23) ಪ್ರೀತಿಸುವಂತೆ ಪೀಡಿಸುತ್ತಿದ್ದ.
ಆದರೆ ನಂದಿತಾ ನಿರಾಕರಿಸಿದ್ದಳು. ಈ ವೇಳೆ ಶಾಲೆ ಮುಗಿಸಿ ಮನೆಗೆ ಬರುವಾಗ ನಂದಿತಾಳನ್ನು ಅಪಹರಿಸಿದ್ದ. ಆಗಲೂ ಆಕೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಚಾಕುವಿನಿಂದ ತಿವಿದು ಕೊಲೆಗೈದಿದ್ದ. ಕೊಲೆ ನಂತರ ಆರೋಪಿ ನಿತಿನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದ.
ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಿತಿನ್‌ನನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡಲು ಬಂದಾಗ ಎರಡನೇ ಮಹಡಿಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ನಿತಿನ್‌ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ