ಕೊಪ್ಪಳ: ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಕಾಸನಕಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹಾರಿದ ಸವಾರ ಟಿಪ್ಪರ್ ವಾಹನದ ವ್ಹೀಲ್‌ಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬಸ್ ಹಿಂಬದಿಗೆ ಗುದ್ದಿದ ಬೊಲೆರೋ
ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಮೈಸೂರಿನ ಆಲನಹಳ್ಳಿ ರಿಂಗ್ ರೋಡ್ ಬಳಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದ್ದು, ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!
ಅಡ್ಡ ಬಂದ ಜಾನುವಾರು; ಹೈವೇಯಲ್ಲಿ ಸರಣಿ ಅಪಘಾತ
ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಏಕಾಏಕಿ ಜಾನುವಾರು ಅಡ್ಡ ಬಂದಿದೆ. ಜಾನುವಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಎರಡು ಕಾರು, ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಂಕೋಲಾ ಭಾಗದಿಂದ ಕಾರವಾರದತ್ತ ಆಗಮಿಸುತ್ತಿದ್ದ ಸ್ಕಾರ್ಪಿಯೋ ಕಾರಿಗೆ ದನ ಎದುರಾಗಿದ್ದರಿಂದ ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ.
ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಡಿಸೈರ್ ಕಾರು ಚಾಲಕ ಸಹ ಬ್ರೇಕ್ ಹಾಕಿ ನಿಲ್ಲಿಸಿದ್ದ. ಆದರೆ ಹಿಂದಿನಿಂದ ಬಂದ ಸರ್ಕಾರಿ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ಪರಿಣಾಮ ಮುಂದಿದ್ದ ಸ್ಕಾರ್ಪಿಯೋಗೆ ಗುದ್ದಿ ಕಾರು ಜಖಂಗೊಂಡಿದೆ. ಇತ್ತ ಬಸ್ ಡಿಕ್ಕಿಯಾದ ಪರಿಣಾಮ ಕಾರೊಂದು ದನಕ್ಕೆ ಗುದ್ದಿದೆ. ಡಿಸೈರ್ ಕಾರಿನಲ್ಲಿದ್ದ ವೃದ್ಧೆಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ ಸ್ಥಳೀಯರು ಗಾಯಾಳುಗಳು ಕಾರವಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯಾರ್ಥಿ ತಲೆ ಮೇಲೆ ಕುಸಿದು ಬಿದ್ದ ಚಾವಣಿ
ರಾಯಚೂರಿನ ಅನ್ವರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಕುಸಿದಿದೆ. ಚಾವಣಿ ಕುಸಿದ ಪರಿಣಾಮ ಓರ್ವ ವಿದ್ಯಾರ್ಥಿ ತಲೆಗೆ ಗಾಯವಾಗಿದೆ. 1ನೇ ತರಗತಿ ವಿದ್ಯಾರ್ಥಿ ಅರುಣ್ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾನೆ. ಇತರೆ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ವರ್ಷಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಶಾಲೆಯು ಕಳಪೆ ಕಾಮಗಾರಿಯಿಂದ ಈ ದುಸ್ಥಿತಿಗೆ ತಲುಪಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ