Site icon Vistara News

ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಸೋನಿಯಾ ಗಾಂಧಿ: ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ

DK shivakumar ambedkar bhavan

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅನೇಕ ವರ್ಷಗಳ ನಂತರ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಅಂಬೇಡ್ಕರ್‌ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ, ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ನೀಡಲಾಯಿತು.

ಡಿ.ಕೆ. ಶಿವಕುಮಾರ್‌ ಅವರು ಎರಡೂವರೆ ವರ್ಷದಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆದು ಅನೇಕ ವರ್ಷಗಳೇ ಕಳೆದಿದ್ದವು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಕ್ರಿಯೆ ನಡೆಸಲಾಗುತ್ತಿದೆ.

ಚುನಾವಣೆಗೆ ಕೇಂದ್ರದಿಂದ ಚುನಾವಣಾಧಿಕಾರಿಯನ್ನಾಗಿ ನಾಚಿಯಪ್ಪನ್‌ ಅವರನ್ನು ನೇಮಕ ಮಾಡಲಾಗಿತ್ತು. ಅವರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್‌ ಮಾತನಾಡಿದರು. ಇದೊಂದು ಐತಿಹಾಸಿಕ ದಿನ. ಬಹಳ ವರ್ಷಗಳ ನಂತರ ಸೋನಿಯಾ ಗಾಂಧಿ ಅವರು ಸದಸ್ಯತ್ವ ಪುನರ್ ಆರಂಭ ಮಾಡಿದರು. ಮೊದಲ ಬಾರಿ ಡಿಜಿಟಲ್ ಮೆಂಬರ್‌ಷಿಪ್‌ ಮಾಡಲು ಆದೇಶ ಕೊಟ್ಟರು. ಸದಸ್ಯತ್ವ ಮಾಡಿಸುವ ಕೆಲಸವನ್ನು ನಾವು ಮಾಡಿದೆವು.

ಕೆಲವರು ಆಸಕ್ತಿ ವಹಿಸಿದರು, ಇನ್ನು ಕೆಲವರು ಆಸಕ್ತಿ ತೋರಲಿಲ್ಲ. ನಾನು ಅನೇಕ ಕಡೆಗಳಲ್ಲಿ ಪ್ರವಾಸ ಮಾಡಿದೆ, ನಾಚಿಯಪ್ಪನ್ 21 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಈ ಮೂಲಕ 78 ಲಕ್ಷ ಸದಸ್ಯತ್ವ ಮಾಡಿಸಿದ್ದೇವೆ. ಲಕ್ಷದಷ್ಟು ಸದಸ್ಯರನ್ನು ಮಾಡಿಸುವ ಮೂಲಕ ರಾಷ್ಟ್ರದಲ್ಲಿ ಸ್ಪೂರ್ತಿ ನೀಡುವಂತಹ ಕಾರ್ಯವನ್ನು ಕೆಲ ಶಾಸಕರು ಮಾಡಿದ್ದಾರೆ, ಕೆಲವುರು ಹತ್ತು ಸಾವಿರ ‌ಮಾಡಿದ್ದಾರೆ. ಪಕ್ಷಕ್ಕೆ ಸದಸ್ಯತ್ವವೇ ದೊಡ್ಡ ಶಕ್ತಿ ಎಂದರು,

ಸೋನಿಯಾ ಗಾಂಧಿಯವರು ಕರೆ ಮಾಡಿ, ನಿನ್ನ ಮೇಲೆ ವಿಶ್ವಾಸವಿದೆ ಎಂದು ಹೇಳಿ ಅಧ್ಯಕ್ಷನನ್ನಾಗಿ ಮಾಡಿದ್ದರು. ನಾನು ಕೆಲವರಿಗೆ ಬೈದಿರಬಹುದು, ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಸಂಘಟನೆ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಹಗಲು ರಾತ್ರಿ ಮಲಗಿಲ್ಲ, ನಿಮ್ಮನ್ನೂ ಮಲಗಲು ಬಿಟ್ಟಿಲ್ಲ. ಯಾರು ಸಹಕಾರ ಕೊಟ್ಟರು, ಬಿಟ್ಟರು ಎನ್ನುವುದೆಲ್ಲವನ್ನೂ ಇಲ್ಲಿ ಹೇಳುವುದಿಲ್ಲ. ಕೆಲವರು ಸಹಕಾರ ಕೊಡುತ್ತಾರೆ, ಕೆಲವರು ಕೊಡುತ್ತಿಲ್ಲ. ನಾನು ಅಂದುಕೊಂಡದ್ದರಲ್ಲಿ 20% ಮಾತ್ರ ಕೆಲಸ ಆಗಿದೆ. ಇನ್ನೂ 80% ಕೆಲಸ ಆಗುವುದು ಬಾಕಿಯಿದೆ. ಆದರೂ ರಾಜ್ಯದಲ್ಲಿ ಉತ್ತಮ ಸಂಘಟನೆ ಆಗಿದೆ ಎಂಬ ಅಭಿಪ್ರಾಯ ಇದೆ ಎಂದರು.

ಡಿ.ಕೆ. ಶಿವಕುಮಾರ್‌ ಪ್ರಸ್ತಾವನೆ ಮಂಡನೆ

ಸಾಂಸ್ಥಿಕ ಚುನಾವಣೆ ಪ್ರಕ್ರಿಯೆಯಂತೆ ಚುನಾವಣೆ ನಡೆಯಬೇಕಿತ್ತು. ಆದರೆ ಕರ್ನಾಟಕದಲ್ಲಿ ಚುನಾವಣೆ ಬದಲಿಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು. ಮುಂದಿನ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸೋನಿಯಾ ಗಾಂಧಿ ಅವರಿಗೆ ನೀಡುವ ನಿರ್ಣಯವನ್ನು ಡಿ.ಕೆ. ಶಿವಕುಮಾರ್‌ ಮಂಡಿಸಿದರು.

ಶಿವಕುಮಾರ್‌ ಪ್ರಸ್ತಾವನೆಯನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅನುಮೋದಿಸಿದರು. ಸಭೆಯಲ್ಲಿದ್ದವರೆಲ್ಲರೂ ಸರ್ವಾನುಮತದಿಂದ ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.

ಇದೀಗ ಸೋನಿಯಾ ಗಾಂಧಿಯವರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಆದರೆ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಹುತೇಕ ಅಸಾಧ್ಯ. ಡಿ.ಕೆ. ಶಿವಕುಮಾರ್‌ ಅವರ ಹೆಸರನ್ನೇ ಆಯ್ಕೆ ಮಾಡಿ ಸೋನಿಯಾ ಗಾಂಧಿಯವರು ಔಪಚಾರಿಕತೆಯನ್ನಷ್ಟೆ ಪೂರೈಸುತ್ತಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ED ಸಂಕಷ್ಟ | ವಾರದಲ್ಲಿ ಹಾಜರಾಗಲು ಸಮನ್ಸ್‌: ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ

Exit mobile version