ರಾಯಚೂರು: ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್ 16ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮಾತ್ರ ರಾಜ್ಯದ ಅಧ್ಯಕ್ಷ ಸ್ಥಾನದ ಸ್ಪರ್ಧೆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ನಾಯಕತ್ವ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲಾರೆ. ರಾಜ್ಯದ ವಿಚಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲರಿಗೂ ಸ್ಪರ್ಧೆ ಮಾಡುವ ಅವಕಾಶ ಇದೆ. ಅಕ್ಟೋಬರ್ 16ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಡೆಯಲಿದೆ. ಬೆಂಗಳೂರು ಅಂಬೇಡ್ಕರ್ ಭವನದಲ್ಲಿ ಚುನಾವಣೆಗೆ ಏರ್ಪಾಟು ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ | ಗುಲಾಂ ನಬಿ ಆಜಾದ್ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅಕ್ಟೋಬರ್ 22 ಹಾಗೂ 23ಕ್ಕೆ ರಾಯಚೂರಿಗೆ ಬರುತ್ತಾರೆ. ಈ ವೇಳೆ ಎಲ್ಲ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಎರಡು ದಿನ ಕಾಲ ರಾಯಚೂರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಿದ್ದು, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ ಭಾಗದ ಜನರು ಭಾಗವಹಿಸಲು ವ್ಯವಸ್ಥೆ ಮಾಡುತ್ತೇವೆ. ಡಿಜಿಟಲ್ ನೋಂದಣಿ, ಡಿಜಿಟಲ್ ಭಾಗವಹಿಸುವಿಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಫೋಟೊ ಮಿಸ್
ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ವೇಳೆ ಭಾರತ ಐಕ್ಯತಾ ಯಾತ್ರೆಯ ವಿಚಾರವಾಗಿ ಬ್ಯಾನರ್ ಅಳವಡಿಸಲಾಗಿದ್ದು, ಗಣ್ಯರ ಪೋಟೊವನ್ನು ಹಾಕಲಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಫೋಟೊವನ್ನು ಮಾತ್ರ ಅದರಲ್ಲಿ ಹಾಕಲಾಗಿಲ್ಲ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿತ್ತು.
ಬಿಜೆಪಿ ವಿರುದ್ಧ ವಾಗ್ದಾಳಿ
ಈ ರಾಜ್ಯ ಸರ್ಕಾರ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಚುನಾವಣೆ ವೇಳೆ 600 ಭರವಸೆಯನ್ನು ಕೊಟ್ಟಿದ್ದರು. ಇದರಲ್ಲಿ ಎಷ್ಟು ಈಡೇರಿಸಿದ್ದಾರೆ? ಶೇಕಡಾ 10ರಷ್ಟನ್ನೂ ಈಡೇರಿಸಿಲ್ಲ. ಇದು ವಚನ ಭ್ರಷ್ಟ ಸರ್ಕಾರ ಎಂದು ಗುಡುಗಿದ ಡಿ.ಕೆ.ಶಿವಕುಮಾರ್, ಜನೋತ್ಸವ ಮಾಡುತ್ತೀವೆ ಅಂದರು, ಈಗ ಜನ ಸ್ಪಂದನ ಎಂದು ಮಾಡಿದ್ದಾರೆ. ಇಷ್ಟು ದಿನ ಬಿಜೆಪಿಯವರು ಜನ ಸ್ಪಂದನ ಮಾಡಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್: ನಂಜಾವಧೂತ ಸ್ವಾಮೀಜಿ