ಬೆಂಗಳೂರು: ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಹುಡುಕಾಟ 2023ರ ಜನವರಿವರೆಗೂ ನಡೆಯುತ್ತದೆ ಎಂಬ ಸುಳಿವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ್ದಾರೆ.
2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಚರ್ಚೆ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದಾರೆ. ಆದರೆ ವಯಸ್ಸಿನ ಕಾರಣಕ್ಕೆ ಬಾದಾಮಿಗೆ ಓಡಾಡಲು ಕಷ್ಟವಾಗುತ್ತದೆ, ಹಾಗಾಗಿ ಬೆಂಗಳೂರಿನ ಸುತ್ತಮುತ್ತ ಸ್ಪರ್ಧಿಸಬಹುದು ಎಂದು ವರುಣ ಕ್ಷೇತ್ರದ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಹೇಳಿದ್ದರು. ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯೂ ಇದ್ದು, ಈ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಎಲ್ಲಿ ಸ್ಪರ್ಧೆ ಮಾಡುತ್ತೇವೆ ಎಂಬ ಕುರಿತು ಸಿದ್ದರಾಮಯ್ಯ ಅವರೇ ಸ್ಪಷ್ಟೀಕರಣ ಕೊಡಬೇಕು. ಅಲ್ಲಿ ಸ್ಪರ್ಧಿಸುತ್ತಾರೆ, ಇಲ್ಲಿ ಸ್ಪರ್ಧಿಸುತ್ತಾರೆ ಎಂಬುದೆಲ್ಲ ಊಹಾಪೋಹಗಳು ಅಷ್ಟೆ. ಅಂತಿಮವಾಗಿ ಸಿದ್ದರಾಮಯ್ಯ ಅವರೇ ಇದಕ್ಕೆಲ್ಲ ತೆರೆ ಎಳೆಯಬೇಕು. ಅಲ್ಲಿಯವರೆಗೂ ಚಾಮರಾಜನಗರದಿಂದ ಬೀದರ್‌ವರೆಗೆ ಹೆಸರು ಓಡಾಡುತ್ತಲೇ ಇರುತ್ತದೆ. ಸವದತ್ತಿಯಿಂದ ಸ್ಪರ್ಧೆ ಮಾಡುತ್ತೇವೆ ಎಂದು ನಿರ್ಧಾರ ಮಾಡಿದರೆ ಸ್ಥಳೀಯ ಆಕಾಂಕ್ಷಿಗಳು ಅದನ್ನು ಒಪ್ಪಲೇಬೇಕು. ಅಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಈಗಾಗಲೆ ಕ್ರಿಯಾಶೀಲರಾಗಿದ್ದಾರೆ. ನೀವುಗಳೇ ಚರ್ಚಿಸಿಕೊಂಡು ಒಮ್ಮತಕ್ಕೆ ಬರುವಂತೆ ಅವರಿಗೆ ಹೇಳಿದ್ದೇವೆ. ಜನವರಿವರೆಗೂ ನಾವು ಕಾದು ನೋಡುತ್ತೇವೆ. ಸಿದ್ದರಾಮಯ್ಯ ಅವರ ನಿರ್ಧಾರ ನೋಡಿಕೊಂಡು ಅಂತಿಮವಾಗಿ ಜನವರಿಯಲ್ಲಿ ಅಭ್ಯರ್ಥಿ ಯಾರು ಎಂದು ನಿಶ್ಚಿಯಿಸುತ್ತೇವೆ ಎಂದು ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ | Assembly 2023 | ಬಾದಾಮಿಯಿಂದ ಕೋಲಾರಕ್ಕೆ ಸಿದ್ದರಾಮಯ್ಯ ಶಿಫ್ಟ್?
ಕೋಲಾರದಲ್ಲಿ ಸ್ಪರ್ಧೆಗೆ ಒತ್ತಾಯ
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕ್ಷೇತ್ರದ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿ ಮಾಡಿತು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ನಗರಸಭೆ ಅಧ್ಯಕ್ಷೆ ಶ್ವೇತಾ ಅಂಬರೀಷ್, ಉಪಾಧ್ಯಕ್ಷ ಅಸ್ಲಂ, ಮಾಜಿ ಅಧ್ಯಕ್ಷ ಮುಬಾರಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭೇಟಿ ಮಾಡಿದರು.
ಮುಂದಿನ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದರು. ನೀವು ಸ್ಪರ್ಧಿಸುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕ್ಷೇತ್ರಗಳಿಗೆ ಅನುಕೂಲ ಆಗುತ್ತದೆ ಎಂದು ಕೇಳಿದರು. ಸಾಕಷ್ಟು ಹೊತ್ತು ಮಾತನಾಡಿದ ಸಿದ್ದರಾಮಯ್ಯ, ಯೋಚನೆ ಮಾಡಿ ತಿಳಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ (ಜುಲೈ 5) ಭೇಟಿ ಮಾಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕೋಲಾರದಿಂದ ಸ್ಪರ್ಧೆ ಮಾಡಿದರೆ ಎರಡು ಜಿಲ್ಲೆಗಳಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದರು. ಶಾಸಕ ಕೆ.ಆರ್. ರಮೇಶ್ ಕುಮಾರ್ ನೇತೃತ್ವದಲ್ಲಿ ಆಗಮಿಸಿದ್ದ ನಾಯಕರು, ಸಾಕಷ್ಟು ಹೊತ್ತು ಚರ್ಚಿಸಿದ್ದರು. ನಜೀರ್ ಅಹಮದ್, ಕೃಷ್ಣಭೈರೇಗೌಡ, ನಂಜೇಗೌಡ, ನಾರಾಯಣ ಸ್ವಾಮಿ, ಶ್ರೀನಿವಾಸ ಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದ ಸಭೆಗೆ, ಈ ಭಾಗದ ಪ್ರಭಾವಿ ಕಾಂಗ್ರೆಸಿಗ ಹಾಗೂ ಕೋಲಾರ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನು ಮಾತ್ರ ಹೊರಗಿಡಲಾಗಿತ್ತು.
ಇದನ್ನೂ ಓದಿ | ಸಿದ್ದರಾಮಯ್ಯರಿಂದ ʼಮುನಿʼದವರ ಸಮಾಧಾನಕ್ಕೆ ಡಿ.ಕೆ. ಶಿವಕುಮಾರ್ ಪ್ರಯತ್ನ