ನವದೆಹಲಿ: ಕೃಷ್ಣಾ ನ್ಯಾಯಾಧಿಕರಣ ಐತೀರ್ಪು ಅಧಿಸೂಚನೆಗೆ (Krishna Water Dispute) ಕರ್ನಾಟಕದ ಜತೆಗೆ ಮಹಾರಾಷ್ಟ್ರ ಕೂಡ ಒತ್ತಾಯ ಮಾಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರದ ಪರವಾಗಿ ವಾದ ಮಂಡಿಸಿದ ಮಹಾರಾಷ್ಟ್ರದ ಹಿರಿಯ ವಕೀಲ ಶೇಖರ್ ನಾಫ್ಡೆ, ಐತೀರ್ಪು ಕುರಿತು ಅಧಿಸೂಚನೆ ಹೊರಡಿಸುವ ಬಗ್ಗೆ ಅಂತಾ ರಾಜ್ಯ ಜಲ ವಿವಾದ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು. ವಾದ-ಪ್ರತಿ ವಾದಗಳನ್ನು ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ (ಜ.12) ಮುಂದೂಡಿತು.
ಕೃಷ್ಣಾ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಪ್ರಕಟಿಸುವ ಕುರಿತು ಕರ್ನಾಟಕ ಹಾಗೂ ಮಹಾರಾಷ್ಟ್ರಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದುವರಿಸಿತು. ಈ ವೇಳೆ, ಕರ್ನಾಟಕದ ಪರವಾಗಿ ವಕೀಲ ಶ್ಯಾಮ್ ದಿವಾನ್ ಅವರು ವಾದ ಮಂಡಿಸಿದರು.
ಸುಪ್ರೀಂ ಕೋರ್ಟ್‌ನ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ರಾಮಸುಬ್ರಹ್ಮಣ್ಯಂ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಕರ್ನಾಟಕದ ವಾದವನ್ನು ಬೆಂಬಲಿಸುವ ರೀತಿಯಲ್ಲಿ ವಾದ ಮಂಡಿಸಿದ ಮಹಾರಾಷ್ಟ್ರವು, ನ್ಯಾಯಾಧಿಕರಣ ಕೊಟ್ಟ ಐತೀರ್ಪಿನ ಅಧಿಸೂಚನೆ ಪ್ರಕಟಿಸಬೇಕು ಎಂದು ಅಂತಾರಾಜ್ಯ ಜಲವಿವಾದ ಕಾಯ್ದೆಯಲ್ಲೇ ಹೇಳಲಾಗಿದೆ. ಅಲ್ಲದೇ ಸಂವಿಧಾನ ಕೂಡ ಇದನ್ನೇ ಹೇಳಿದೆ ಎಂದು ತಿಳಿಸಿತು.
ಅಧಿಸೂಚನೆ ಹೊರಡಿಸದಿದ್ದರೆ ನ್ಯಾಯಾಧಿಕರಣದ ಐತೀರ್ಪಿನ ಜಾರಿ ಪ್ರಕ್ರಿಯೆಗೆ ವಿನಾಕಾರಣ ತಡೆ ಹಿಡಿದಂತಾಗುತ್ತದೆ ಎಂದು ವಾದಿಸಿದ ಮಹಾರಾಷ್ಟ್ರ ರಾಜ್ಯವು, ಕರ್ನಾಟಕದ ನಿಲುವಿಗೆ ಬೆಂಬಲ ನೀಡಿದೆ. ಕೃಷ್ಣಾ ನದಿಯ ಹೆಚ್ಚುವರಿ ನೀರನ್ನು ಈ ಹಿಂದಿನಿಂದಲೂ ಸಹ ಆಂಧ್ರ ಬಳಸಿಕೊಳ್ಳುತ್ತಲೇ ಬಂದಿದೆ. ಈ ಕೇಸಿನಲ್ಲಿ ಆಂಧ್ರ ಸೋತಿದ್ದರೂ ಅದಕ್ಕೆ ಅನುಕೂಲ ಆಗುತ್ತಲೇ ಇದೆ. ಕೃಷ್ಣಾ ನದಿಯಲ್ಲಿ ತನ್ನ ಪಾಲಿಗಾಗಿ ಹೋರಾಟ ಮಾಡಿದ ರಾಜ್ಯಗಳು ನೀರಿಗಾಗಿ ಕಾದು ಕುಳಿತಿವೆ. ಆಂಧ್ರ ಪ್ರದೇಶದ ಕಾರಣದಿಂದಾಗಿ ನಮಗೆ ಅನ್ಯಾಯ ಆಗುತ್ತಿದೆ. ಇದರ ಮುಂದುವರಿಕೆಗೆ ಇನ್ನು ಅವಕಾಶ ಇರಬಾರದು ಎಂದು ನಾಫ್ಡೆ ಹೇಳಿದರು.
ಆಂಧ್ರ ವಿರೋಧ
ಆಂಧ್ರ ಪರ ವಾದ ಮಂಡಿಸಿದ ಸಿ ಎಸ್ ವೈದ್ಯನಾಥನ್ ಅವರು ಅಧಿಸೂಚನೆ ಹೊರಡಿಸಲು ವಿರೋಧವನ್ನು ವ್ಯಕ್ತಪಡಿಸಿದರು. ಕರ್ನಾಟಕ ನೀರಾವರಿ ಯೋಜನೆಗೆ ಕಾಮಗಾರಿ ಪೂರ್ಣಗೊಳಿಸಿದ್ದರೆ ಅದಕ್ಕೆ ನಾವೇನು ಮಾಡಬೇಕು? ವಿಚಾರಣೆ ವಿಳಂಬಕ್ಕೆ ಕರ್ನಾಟಕವೇ ಕಾರಣ. ಕೊರೊನಾ ಸಮಯದಲ್ಲಿ ವಿಚಾರಣೆ ನಡೆಸಿ ಎಂದಾಗ ಬೇಡ ಎಂದಿತ್ತು. ನಾವು ಆನ್ಲೈನ್ ವಿಚಾರಣೆಗೆ ಸಿದ್ಧರಿದ್ದೆವು ಎದು ವೈದ್ಯನಾಥ ತಮ್ಮ ವಾದ ಮಂಡಿಸಿದರು.
ಕರ್ನಾಟಕದ ವಾದವೇನಾಗಿತ್ತು?
ಕಾವೇರಿ ಜಲವಿವಾದದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡುವ ಮುನ್ನವೇ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು. ಅದೇ ಮಾದರಿಯಲ್ಲಿ ಕೃಷ್ಣಾ ಐತೀರ್ಪಿನ ಅಧಿಸೂಚನೆಯನ್ನು ಪ್ರಕಟಿಸಬೇಕು ಎಂದ ಕರ್ನಾಟಕ ವಾದ ಮಂಡಿಸಿತು.
ಮಂಗಳವಾರದ ವಿಚಾರಣೆಯ ವೇಳೆಯೂ ಕರ್ನಾಟಕದ ಪರ ವಕೀಲರ ತಂಡವು ಸುದೀರ್ಘವಾಗಿ, 1.10 ಗಂಟೆಗಳ ಕಾಲ ವಾದ ಮಂಡಿಸಿತ್ತು. ಹಂಚಿಕೆಯಾದ ನೀರಿನ ಸದ್ಭಳಕೆ ಮಾಡಲು ಕರ್ನಾಟಕವು ಈಗಾಗಲೇ 14,955 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲವೆ ಜಾಗ ನಿರ್ಮಾಣ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ 130 ಟಿಎಂಸಿ ನೀರಿನ ಬಳಕೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಲಾಗಿದೆ. ಈ ಸೌಕರ್ಯವು ವ್ಯರ್ಥವಾಗಬಾರದು ಎಂದು ಕೋರ್ಟ್‌ಗೆ ವಕೀಲ ಶ್ಯಾಮ್ ದಿವಾನ್ ಅವರು ಮನವಿ ಮಾಡಿದರು.
ಕಾವೇರಿ ಜಲವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ಇದ್ದಾಗ್ಯೂ, ನ್ಯಾಯಾಲಯವೇ ಅಂತಾರಾಜ್ಯ ಜಲ ಹಂಚಿಕೆ ಕಾಯ್ದೆಯ ಅನ್ವಯ ಗೆಜೆಟ್ ಪ್ರಕಟಣೆಗೆ ಅವಕಾಶ ನೀಡಿತ್ತು. ಅದೇ ಪರಿಸ್ಥಿತಿಯು ಈಗ ಕೃಷ್ಣಾ ಜಲ ವಿವಾದದಲ್ಲಿ ಇದೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ | Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್ ಜೋಷಿ ಮಾಹಿತಿ