ಮಂಡ್ಯ: ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಸರಿಸುಮಾರು ೨೭ ದಿನಗಳ ಕಾಲ ಬಂದ್ ಆಗಿದ್ದ ಕೆಆರ್‌ಎಸ್ ಬೃಂದಾವನವು (KRS Brindavan) ಈಗ ಪ್ರವಾಸಿಗರಿಗೆ ಮುಕ್ತವಾಗಿದ್ದು, ಬುಧವಾರದಿಂದ (ನ. ೩೦) ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಅರಣ್ಯ ಇಲಾಖೆಯು ಕೆಆರ್‌ಎಸ್ ಬೃಂದಾವನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅನುಮತಿ ಮೇರೆಗೆ ಬುಧವಾರದಿಂದ ಮತ್ತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.
ಕೆಆರ್‌ಎಸ್ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಂಡು ಆತಂಕವನ್ನು ಹುಟ್ಟುಹಾಕಿತ್ತು. ಅಲ್ಲದೆ, ಬೃಂದಾವನ ಆವರಣದಲ್ಲಿಯೇ ನಾಯಿ ಹಿಡಿಯಲು ಸೇರಿದಂತೆ ಒಂದೆರೆಡು ಬಾರಿ ಚಿರತೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಲ್ಕೈದು ದಿನಕ್ಕೆ ಮುಂಚಿತವಾಗಿ ಕೆಆರ್‌ಎಸ್ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರೊಬ್ಬರ ಮೊಬೈಲ್‌ನಲ್ಲಿ ಚಿತ್ರೀಕರಣಗೊಂಡಿತ್ತು.
ಇದನ್ನೂ ಓದಿ | Muslim college | ರಾಜ್ಯದಲ್ಲಿ 10 ಮುಸ್ಲಿಂ ಕಾಲೇಜು ಸ್ಥಾಪನೆಗೆ ವಿರೋಧ: ಬಲಿದಾನವಾದ್ರೂ ಸರಿ ತಡೀತೀವಿ ಎಂದ ಮುತಾಲಿಕ್
ಅರಣ್ಯ ಇಲಾಖೆ ಸಹ ಚಿರತೆ ಸಂಚರಿಸಿದ ಹಾಗೂ ಕೆಆರ್‌ಎಸ್ ಬೃಂದಾವನದ ಕೆಲವು ಕಡೆ ಬೋನ್‌ಗಳನ್ನು ಇಟ್ಟು ಚಿರತೆ ಸೆರೆಗೆ ಪ್ರಯತ್ನಪಟ್ಟಿದ್ದರು. ಅಲ್ಲದೆ, ಹುಡುಕಾಟವೂ ನಡೆದಿತ್ತು. ಕೆಲವು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಲಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಚಿರತೆಯನ್ನು ಸೆರೆಹಿಡಿಯಲು ಕಷ್ಟವಾಗಿತ್ತು. ಅ. 21ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ ನಾಲ್ಕು ಬಾರಿ ಬೃಂದಾವನದಲ್ಲಿನ ಸಿಸಿ ಟಿವಿಯಲ್ಲಿ ಚಿರತೆ ಸಂಚರಿಸಿರುವುದು ಸೆರೆಯಾಗಿತ್ತು.
ಕೋಟಿ ರೂಪಾಯಿಗೂ ಹೆಚ್ಚು ಆದಾಯ ನಷ್ಟ
ಬೃಂದಾವನಕ್ಕೆ ಮುಕ್ತ ಪ್ರವೇಶ ಇದ್ದರೆ ವಾರದ ಮಾಮೂಲಿ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯವಾಗಿದ್ದರೆ ಇಲ್ಲವೇ ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡ್ತಿದ್ದರು. ಒಬ್ಬರಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ೨೭ ದಿನಗಳಿಂದ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ.
ವ್ಯಾಪಾರಿಗಳಿಗೂ ಆರ್ಥಿಕ ನಷ್ಟ
ಕಾವೇರಿ ನೀರಾವರಿ ನಿಗಮಕ್ಕಷ್ಟೇ ಅಲ್ಲದೆ ಅಲ್ಲಿನ ವ್ಯಾಪಾರಸ್ಥರಿಗೂ ನಷ್ಟ ಉಂಟಾಗಿತ್ತು. ಕೆಆರ್‌ಎಸ್‌ನ ಬೃಂದಾವನದಲ್ಲಿ ಪ್ರವಾಸಿಗರನ್ನೇ ನೆಚ್ಚಿಕೊಂಡು ನೂರಾರು ಜನ ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ವಿವಿಧ ವ್ಯಾಪಾರ- ವಹಿವಾಟುಗಳು ನಡೆಯುತ್ತಿದ್ದವು. ಜತೆಗೆ ಬೃಂದಾವನದ ಒಳಭಾಗದಲ್ಲಿರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳಿಗೂ ಪ್ರವಾಸಿಗರಿಲ್ಲದೆ ನಷ್ಟ ಉಂಟಾಗಿದೆ.
ಪಿಐಪಿ ತಂತ್ರಕ್ಕೆ ಮೊರೆ
ಚಿರತೆ ಸೆರೆಗೆ 8 ಕಡೆ ಬೋನ್ ಇರಿಸಿದ್ದರೂ ಸಿಕ್ಕಿಬೀಳದ ಹಿನ್ನೆಲೆಯಲ್ಲಿ ಚಿರತೆಯ ಜಾಡು ಪತ್ತೆಗೆ ಪಗ್ ಇಂಪ್ರೆಷನ್ ಪ್ಯಾಡ್ (ಪಿಐಪಿ) ತಂತ್ರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮೊರೆ ಹೋಗಿದ್ದಾರೆ. ಕೃಷಿ ಜಮೀನು ಮತ್ತು ಬೋನು ಇರಿಸಿರುವ ಕಡೆ ಪಿಐಪಿ ಟೆಕ್ನಾಲಜಿಯ ಮರಳು ಹಾಸಿಗೆಯನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ | Voter data | ವೋಟರ್ ಐಡಿ ಮಾತ್ರವಲ್ಲ ನಾಗರಿಕರ ಖಾಸಗಿ ಮಾಹಿತಿ ಲೂಟಿ ಆಗ್ತಿದೆ ಎಂದ ಪ್ರಿಯಾಂಕ್ ಖರ್ಗೆ