Site icon Vistara News

KRS Dam | ಟ್ರಯಲ್‌ ಬ್ಲಾಸ್ಟಿಂಗ್‌ ವಿರೋಧದ ದನಿಗೆ ಮಂಡ್ಯ ಸಂಸದೆ ಸುಮಲತಾ ಸಾಥ್‌

ಸುಮಲತಾ ಅಂಬರೀಶ್‌

ಮಂಡ್ಯ: ರೈತರ ವಿರೋಧದ ನಡುವೆಯೂ ನಡೆಯುತ್ತಿರುವ ಟ್ರಯಲ್‌ ಬ್ಲಾಸ್ಟಿಂಗ್‌ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಟ್ಟ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ (KRS Dam) ಅಪಾಯ ಇದೆಯೋ ಇಲ್ಲವೋ ಎಂಬುದನ್ನು ಅರಿಯಲು 7 ದಿನಗಳ ಟ್ರಯಲ್ ಬ್ಲಾಸ್ಟಿಂಗ್‌ ಸೋಮವಾರದಿಂದ ಶುರುವಾಗಿದೆ.

ಕೆಆರ್‌ಎಸ್ ಅಣೆಕಟ್ಟೆಗೆ ಆಗುವ ಅಪಾಯದ ಬಗ್ಗೆ ಮುಖ್ಯಮಂತ್ರಿ, ಗಣಿ ಮತ್ತು ಭೂವಿಜ್ಞಾನ ಸಚಿವರು, ಜಿಲ್ಲಾಧಿಕಾರಿಗೂ ಪತ್ರ ಬರೆದಿರುವ ಸಂಸದೆ ಸುಮಲತಾ ಗಣಿಗಾರಿಕೆ ನಿಷೇಧಿತ ಪ್ರದೇಶವನ್ನು ಯಥಾಸ್ಥಿತಿಯಾಗಿಯೇ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | KRS Dam | ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗೆ ಸಿದ್ಧತೆ; ರೈತರಿಂದ ತೀವ್ರ ವಿರೋಧ

ಪತ್ರದಲ್ಲಿ ಏನಿದೆ?

ಕೃಷ್ಣರಾಜಸಾಗರ ಅಣೆಕಟ್ಟೆಯ (KRS Dam) ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ ನಡೆಸುತ್ತಿರುವ ಅನಧಿಕೃತ ಹಾಗೂ ಅಧಿಕೃತ ಗಣಿಗಾರಿಕೆಗಳಲ್ಲಿ ಬೋರ್‌ ಬ್ಲಾಸ್ಟ್‌, ಸೈಲೆಂಟ್‌ ಬ್ಲಾಸ್ಟ್‌ ಮತ್ತು ರಿಗ್‌ ಬ್ಲಾಸ್ಟ್‌ (Bore Blast, Silent Blast, Rig Blast) ಬಳಸಿ ಗಣಿಗಾರಿಕೆ ನಡೆಸಿರುವುದರಿಂದ ಕೃಷ್ಣರಾಜಸಾಗರ ಅಣೆಕಟ್ಟೆಯ ವ್ಯಾಪ್ತಿಯ ಭೂ ಪ್ರದೇಶ ಕಂಪನಗೊಂಡಿರುವ ಬಗ್ಗೆ ಈಗಾಗಲೇ ವರದಿಯಾಗಿದೆ.

ಸಿಎಸ್‌ಐಆರ್‌ (CSIR) ಮತ್ತು ಸಿಐಎಂಎಫ್‌ಆರ್ (CIMFR) ಸಂಸ್ಥೆಯ ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಟ್ರೋಲ್‌ ಬ್ಲಾಸ್ಟ್ (Control Blast) ಬಳಸಿ ನಡೆಸುವ ಸಂಶೋಧನೆಯು 200 ಮೀಟರ್ ವ್ಯಾಪ್ತಿಗಷ್ಟೇ ವರದಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂಟ್ರೋಲ್ ‌ಬ್ಲಾಸ್ಟ್ (Control Blast) ವರದಿ ಆಧಾರದ ಮೇಲೆ ಗಣಿಗಾರಿಕೆಗೆ ಅನುಮತಿ ನೀಡಿದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ಸುತ್ತಮುತ್ತಲ ಸಾರ್ವಜನಿಕರಿಗೆ ಉಂಟಾಗುವ ದುಷ್ಪರಿಣಾಮಗಳಿಗೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಕೃಷ್ಣರಾಜಸಾಗರ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು ಎಂದಿದ್ದಾರೆ.

ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯು ಹೊರಡಿಸಿರುವ ಆದೇಶದಂತೆ ಕೃಷ್ಣರಾಜಸಾಗರ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶವನ್ನು ಗಣಿಗಾರಿಕೆ ನಿಷೇಧಿತ ಪ್ರದೇಶವಾಗಿ ಕ್ರಮಕೈಗೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ.

ರೈತ ಹೋರಾಟಕ್ಕೆ ಬೆಂಬಲ

ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ | KRS Dam | ಜಾರ್ಖಂಡ್ ವಿಜ್ಞಾನಿಗಳ ತಂಡದಿಂದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಆರಂಭ, ರೈತರ ವಿರೋಧ

Exit mobile version