ಮಂಡ್ಯ: ಕೆಆರ್‌ಎಸ್ ಜಲಾಶಯಕ್ಕೆ (KRS Dam) ಅಪಾಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರೈತರ ವಿರೋಧದ ನಡುವೆಯೂ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಜುಲೈ 31ರವರೆಗೂ ಜಾರ್ಖಂಡ್‌ನ ವಿಜ್ಞಾನಿಗಳ ತಂಡದಿಂದ ಬ್ಲಾಸ್ಟಿಂಗ್ ಮೂಲಕ ಪರೀಕ್ಷೆ ನಡೆಯಲಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದೆ. ಟ್ರಯಲ್ ಬ್ಲಾಸ್ಟ್‌ನಲ್ಲಿ ಅಪಾಯವಿಲ್ಲ ಎಂಬ ವರದಿ ಬಂದರೆ, ಮತ್ತೆ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಟ್ರಯಲ್ ಬ್ಲಾಸ್ಟ್ ನಡೆಸದಂತೆ ಸ್ಥಳೀಯರು ವಿರೋಧವನ್ನು ವ್ಯಕ್ತಪಡಿಸಿದ್ದು, ಇದರ ನಡುವೆಯು ಸೋಮವಾರದಿಂದ ಬ್ಲಾಸ್ಟಿಂಗ್ ಪ್ರಕ್ರಿಯೆ ಶುರುವಾಗಿದೆ.
ಇದನ್ನೂ ಓದಿ | ಕೆಆರ್‌ಎಸ್ ಭರ್ತಿಗೆ ಒಂದೇ ಅಡಿ ಬಾಕಿ; ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ
ಮೂರು ವರ್ಷದಿಂದ ಗಣಿಗಾರಿಕೆ ನಿಷೇಧ
ಐತಿಹಾಸಿಕ ಕೆಆರ್‌ಎಸ್ ಡ್ಯಾಂಗೆ ಹಾನಿಯಾಗುವ ಭೀತಿಯಿಂದ ಬೇಬಿ ಬೆಟ್ಟದಲ್ಲಿ 3 ವರ್ಷದಿಂದ ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು. ಮತ್ತೆ ಗಣಿಗಾರಿಕೆ ನಡೆಸಲು ಅವಕಾಶ ನೀಡುವಂತೆ ಗಣಿ ಮಾಲೀಕರು ಟ್ರಯಲ್ ಬ್ಲಾಸ್ಟಿಂಗ್ ಮಾಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ನಿರಂತರ ಒತ್ತಡ ಹಾಕಿದ್ದಾರೆ. ಇವರ ಒತ್ತಡಕ್ಕೆ ಮಣಿದು ಪರಿಕ್ಷಾರ್ಥ ಬ್ಲಾಸ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ವಿಜ್ಞಾನಿಗಳು ಅಲ್ಪ ಪ್ರಮಾಣದ ಸ್ಫೋಟಕ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡುತ್ತಾರೆ. ಆದರೆ, ಗಣಿ ಮಾಲೀಕರು ಅತ್ಯಧಿಕ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡುತ್ತಾರೆ. ಒಮ್ಮೆ ಬ್ಲಾಸ್ಟ್ ಮಾಡಿದರೆ 50 ಲೋಡ್ ಕಲ್ಲು ಬರುತ್ತದೆ. ಬೇಬಿ ಬೆಟ್ಟದಲ್ಲಿ 80 ಕ್ವಾರಿಗಳಿದ್ದು, ಪ್ರತಿನಿತ್ಯ 50ರಿಂದ 60 ಬ್ಲಾಸ್ಟಿಂಗ್ ಮಾಡುತ್ತಾರೆ. ಇದರಿಂದ ನಿಶ್ಚಿತವಾಗಿ ಕೆಆರ್‌ಎಸ್ ಡ್ಯಾಂಗೆ ಅಪಾಯವಿದೆ. ಹೀಗಾಗಿ ಟ್ರಯಲ್ ಬ್ಲಾಸ್ಟ್ ಬೇಡ ಎಂದು ರೈತರು ಒತ್ತಾಯಿಸಿದ್ದಾರೆ.
ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ 2018ರಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿತ್ತು. ಕೆಆರ್‌ಎಸ್ ಡ್ಯಾಂನ 10.5 ಕಿಮೀ ದೂರದಲ್ಲಿ ಕಂಪನವಾಗಿದ್ದರಿಂದ ಜಲಾಶಯಕ್ಕೆ ಹಾನಿಯಾಗುವ ಆತಂಕ ಮೂಡಿತ್ತು. ಅಧಿಕ ಪ್ರಮಾಣದ ಸ್ಫೋಟಕ ಬಳಕೆಯಿಂದ ಭಾರಿ ಶಬ್ದದೊಂದಿಗೆ ಕಂಪನ ಎಂದು ವರದಿಯಾಗಿತ್ತು. ಆನಂತರ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ | ಕೆಆರ್‌ಎಸ್ ಡ್ಯಾಂ | ಬದಲಾಯಿಸುವ 80 ವರ್ಷದ ಹಳೇ ಗೇಟ್‌ಗಳು ಮ್ಯೂಸಿಯಂಗೆ: ಸಚಿವ ಗೋವಿಂದ ಕಾರಜೋಳ