ಮಂಡ್ಯ: ಬೇಬಿ ಬೆಟ್ಟದ ದಾಖಲೆ ನೋಡುವಾಗ ಆ ಜಾಗ ಅರಮನೆ ಆಸ್ತಿಗೆ ಸೇರಿದ್ದು ಎಂದು ತಿಳಿದು ಬಂದಿರುವುದಾಗಿ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿದ್ದಾರೆ.
ಇಲ್ಲಿನ ಬೇಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ಬೇಬಿ ಬೆಟ್ಟದ ಜಾಗ ವಿಚಾರದ ಬಗ್ಗೆ ಅರಮನೆ ಆಡಳಿತ ಮಂಡಳಿಯವರೇ ಉತ್ತರ ಕೊಡಬೇಕು. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಇದರ ಬಗ್ಗೆ ರಾಜಮಾತೆಯವರ ಆಡಳಿತ ಕಚೇರಿಯಿಂದ ಅಧಿಕೃತ ಹೇಳಿಕೆಯನ್ನು ಪಡೆದುಕೊಳ್ಳಬಹುದು. ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೇಬಿಬೆಟ್ಟದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ (KRS Dam) ಅಪಾಯ ಎಂದು ಹೇಳುತ್ತಿರುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾಡಿನ ಜನತೆಯ ಆಶಯ ನಮಗೆ ಬಹಳ ಮುಖ್ಯವಾಗುತ್ತದೆ. ಎಲ್ಲರ ಆಶಯದಂತೆ ಕೆಆರ್‌ಎಸ್ ಸಂರಕ್ಷಣೆ ಮಾಡಬೇಕು. ಹೀಗಾಗಿ ಅಧಿಕಾರಿಗಳು ನೋಡಿಕೊಂಡು ಕೆಲಸ ಮಾಡಬೇಕಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದರು.
ಈಗಂತೂ ಚುನಾವಣೆಗೆ ಸ್ಪರ್ಧಿಸಲ್ಲ
ಪ್ರಧಾನಿ ನರೇಂದ್ರ ಮೋದಿಯವರು ಅರಮನೆಗೆ ಭೇಟಿ ನೀಡಿದ್ದು, ಕೇವಲ ಔಪಚಾರಿಕವಷ್ಟೇ. ಯೋಗ ಕಾರ್ಯಕ್ರಮ ನಿಮಿತ್ತ ಅವರು ಮೈಸೂರಿಗೆ ಬಂದಿದ್ದರು. ಹೀಗಾಗಿ ಅವರು ಅರಮನೆಗೆ ಭೇಟಿ ನೀಡಿ, ಉಭಯ ಕುಶಲೋಪರಿಯಲ್ಲಿ ಭಾಗಿಯಾಗಿದ್ದರು. ಆದರೆ ನಮ್ಮ ಮಧ್ಯೆ ರಾಜಕೀಯ ಚರ್ಚೆ ನಡೆದಿಲ್ಲ. ಪ್ರಸುತ್ತ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ರಾಜಕೀಯ ಸೇರ್ಪಡೆ ಬಗ್ಗೆ ಇದ್ದ ಊಹಾಪೋಹಕ್ಕೆ ಯದುವೀರ್ ತೆರೆ ಎಳೆದರು.
ಟ್ರಯಲ್ ಬ್ಲಾಸ್ಟ್ ನಿಂತರೂ ನಿಲ್ಲದ ರೈತ ಪ್ರತಿಭಟನೆ
ಕೆಆರ್‌ಎಸ್ ಮತ್ತು ಬೇಬಿ ಬೆಟ್ಟದ ನಡುವೆ ಇರುವ ಪಾಂಡವಪುರ ತಾಲೂಕಿನಲ್ಲಿರುವ ಕಟ್ಟೇರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ರೈತರು ಆಗ್ರಹಿಸಿದರು. ಈಗ ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡಿರುವುದಾಗಿ ಮಂಡ್ಯ ಡಿಸಿ ತಿಳಿಸಿದ್ದಾರೆ.
ಆದರೆ, ಕೆಆರ್‌ಎಸ್‌ನ ಗೆಸ್ಟ್‌ಹೌಸ್‌ನಲ್ಲಿ ಜಾರ್ಖಂಡ್ ವಿಜ್ಞಾನಿಗಳ ತಂಡ ಇನ್ನೂ ಉಳಿದುಕೊಂಡಿದ್ದು, ಜಿಲ್ಲಾಡಳಿತದ ನಡೆಗೆ ರೈತ ಸಂಘದ ಕಾರ್ಯಕರ್ತರು ಅಸಮಾಧಾನವನ್ನು ಹೊರಹಾಕಿದ್ದಾರೆ. ವಿಜ್ಞಾನಿಗಳ ತಂಡವನ್ನು ವಾಪಸ್ ಕಳುಹಿಸಬೇಕು, ಜತೆಗೆ ಬೇಬಿ ಬೆಟ್ಟದ ಬಗ್ಗೆ ಸಂಪೂರ್ಣ ದಾಖಲೆ ನೀಡುವಂತೆ ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ | KRS Dam | ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ತಾತ್ಕಾಲಿಕ ಮುಂದೂಡಿಕೆ? ಇನ್ನೂ ಗೆಸ್ಟ್‌ಹೌಸ್‌ನಲ್ಲೇ ಇದ್ದಾರೆ ವಿಜ್ಞಾನಿಗಳು!