Site icon Vistara News

ಹೌದು, ನನಗೆ ಅಸಮಾಧಾನ ಇದೆ, ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಕೆ.ಎಸ್.‌ ಈಶ್ವರಪ್ಪ ಬಹಿರಂಗ ಹೇಳಿಕೆ

ಈಶ್ವರಪ್ಪ terror attack ಉಗ್ರರಿಗೆ ಗುಂಡು ಶಿವಮೊಗ್ಗ

ಬೆಂಗಳೂರು: ಹೌದು ನನಗೆ ಅಸಮಾಧಾನ ಇದೆ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್‌ ಚಿಟ್‌ ಸಿಕ್ಕಿದ್ದರೂ ನನಗೆ ಮಂತ್ರಿ ಸ್ಥಾನ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ನನಗೆ ಅತೃಪ್ತಿ ಇದೆ. ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಹೀಗೆ ನೇರವಾಗಿಯೇ ಹೇಳಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಈಶ್ವರಪ್ಪ ಅವರ ಮೇಲೆ ನೇರ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಪೊಲೀಸರ ವರದಿಯಲ್ಲಿ ಕ್ಲೀನ್‌ ಚಿಟ್‌ ನೀಡಲಾಗಿರುವುದರಿಂದ ತನ್ನನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಈಶ್ವರಪ್ಪ ಅವರ ಆಗ್ರಹವಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಲೀ, ಹೈಕಮಾಂಡ್‌ ಆಗಲೀ ಇದರ ಬಗ್ಗೆ ಯಾವುದೇ ಚಿಂತನೆ ನಡೆಸುತ್ತಿರುವುದು ಅವರನ್ನು ಕೆರಳಿಸಿದೆ.

ಈಶ್ವರಪ್ಪ ಅವರು ಕಳೆದ ಸೆಪ್ಟೆಂಬರ್‌ ೧೨ರಿಂದ ಆರಂಭವಾದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದಕ್ಕಿಂತ ಮೊದಲು ಸೆಪ್ಟೆಂಬರ್‌ ೧೦ರಂದು ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸರಕಾರದ ಜನಸ್ಪಂದನ ಸಮಾವೇಶಕ್ಕೂ ಅವರು ಬಂದಿರಲಿಲ್ಲ. ಹೀಗೆ ಪಕ್ಷ ಮತ್ತು ಸರಕಾರದ ವಲಯದ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸದಿರುವ ಮೂಲಕ ಅವರು ತಮ್ಮ ಅತೃಪ್ತಿಯನ್ನು ನೇರವಾಗಿ ತೋರಿಸಿದ್ದಾರೆ. ಈ ನಡುವೆ, ಸೆ. ೯ರಂದು ನಡೆದ ಶಿವಮೊಗ್ಗದ ಗಣೇಶೋತ್ಸವ ಮೆರವಣಿಗೆಯಲ್ಲಿ ಹಗಲು ರಾತ್ರಿ ಓಡಾಡಿದ ಕಾರಣ ಕಾಲು ನೋವಾಗಿದೆ ಎಂಬ ಕಾರಣಕ್ಕೆ ಜನಸ್ಪಂದನ ಮತ್ತು ಅಧಿವೇಶನದ ಆರಂಭದ ದಿನಗಳಲ್ಲಿ ಹಾಜರಾಗಿರಲಿಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಅವರೇ ತಮ್ಮ ಗೈರುಹಾಜರಿಯ ಕಾರಣ ತೆರೆದಿಟ್ಟಿದ್ದಾರೆ.

ʻʻಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ನನಗೆ ಅಸಮಧಾನ ಇದೆ, ಅದಕ್ಕೆ ಸದನಕ್ಕೆ ಹೋಗ್ತಿಲ್ಲʼʼ ಎಂದು ಹೇಳಿದರು. ʻʻಮಂತ್ರಿ ಆಗಿಯೇ ಸದನಕ್ಕೆ ಹೋಗೋದು ಅಂತ ತೀರ್ಮಾನ ಮಾಡಿದ್ದೀರಾ?ʼʼ ಎಂದು ಕೇಳಿದಾಗ, ʻʻಅದರ ಬಗ್ಗೆ ಚರ್ಚೆ ಬೇಡʼʼ ಎಂದರು.

ʻʻನನ್ನ ಮೇಲೆ ಬಂದ ಆಪಾದನೆಯಿಂದ ನನಗೇ ಬೇಸರ ಇದೆ. ಹೀಗಾಗಿ ಆರೋಪ ಮುಕ್ತನಾಗಿ ಸದನಕ್ಕೆ ಹೋಗ್ತೀನಿʼʼ ಎಂದು ಹೇಳಿದರು. ಈ ಮೂಲಕ ಹೋಗಬೇಕಾದರೆ ಮಂತ್ರಿಯಾಗಿಯೇ ಹೋಗಬೇಕು ಎಂಬರ್ಥದಲ್ಲಿ ಮಾತನಾಡಿದರು.

ಡಿಕ್ಟೇಟರ್‌ ಡಿಕೆಶಿ ಎಂದ ಈಶ್ವರಪ್ಪ
ʻʻಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್ʼʼ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಡಿಕೆಶಿ ಡಿಕ್ಟೇಟರ್‌ಶಿಪ್ ಪ್ರದರ್ಶನ ಮಾಡ್ತಿದ್ದಾರೆ. ಇಷ್ಟು ದಿನ ಕೇಡಿ ಡಿಕೆಶಿ ಆಗಿದ್ದರು. ಈಗ ಡಿಕ್ಟೇಟರ್ ಡಿಕೆಶಿ ಆಗಲು ಹೊರಟಿದ್ದಾರೆ. ಡಿಕೆಶಿ ಹೇಳಿಕೆಯನ್ನು ಸ್ವಾಭಿಮಾನ ಇರುವ ಕಾಂಗ್ರೆಸಿಗರು ಯಾರೂ ಒಪ್ಪುವುದಿಲ್.‌ ಕಾಂಗ್ರೆಸ್‌ನವರು ಅಂತಲ್ಲ, ಯಾವ ಪಕ್ಷದವರೂ ಒಪ್ಪಲ್ಲʼʼ ಎಂದು ಹೇಳಿದರು.

ʻʻಡಿಕೆಶಿ ಏನು ಕಾಂಗ್ರೆಸ್ ಪಕ್ಷವನ್ನು ಕೊಂಡುಕೊಂಡಿದ್ದಾರಾ? ದೇಶಪಾಂಡೆ ಸಿದ್ದರಾಮೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಅದಕ್ಕಾಗಿ ಅವರಿಗೆ ಭಾರತ್ ಜೋಡೋದಲ್ಲಿ ಡಿಕೆಶಿ ಜವಾಬ್ದಾರಿ ನೀಡಿಲ್ಲ. ಆದರೆ, ಇದೆಲ್ಲ ಅವರ ಆಂತರಿಕ ವಿಚಾರ. ಆದರೂ ಡಿಕೆಶಿಯ ನಿರ್ಧಾರ ಸರಿಯಲ್ಲʼʼ ಎಂದು ಹೇಳಿದರು ಈಶ್ವರಪ್ಪ.

ʻʻಏನು ಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ?ʼʼ ಎಂದು ಹೇಳಿದ ಅವರು, ಡಿಕೆಶಿಯ ಸಂಸ್ಕೃತಿ ಇದೇ ತಾನೇ ಎಂದು ಕೆಣಕಿದರು.

ಹಿಂದಿನ ಸುದ್ದಿ| ಎಲ್ಲಿದ್ದಾರೆ ಕೆ.ಎಸ್ ಈಶ್ವರಪ್ಪ? ಜನಸ್ಪಂದನ ಸಮಾವೇಶಕ್ಕೂ ಬಂದಿಲ್ಲ,‌ ವಿಧಾನಮಂಡಲ ಅಧಿವೇಶನಕ್ಕೂ ಬರ್ತಾ ಇಲ್ಲ!

Exit mobile version