ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Pateel) ಆತ್ಮಹತ್ಯೆ ಪ್ರಕರಣದಲ್ಲಿ (Contractor suicide case) ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜನಪ್ರತಿನಿಧಿ ನ್ಯಾಯಾಲಯವು (Peoples representative court) ಈ ಆತ್ಮಹತ್ಯೆಯಲ್ಲಿ ಈಶ್ವರಪ್ಪ ಅವರು ಯಾವುದೇ ರೀತಿಯಲ್ಲೂ ಶಾಮೀಲಾಗಿದ್ದಾರೆ ಎಂಬುದಕ್ಕೆ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿ ಉಡುಪಿ ಪೊಲೀಸರು (Udupi police) ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ಅಂಗೀಕರಿಸಿದೆ (B report accepted). ಈ ಮೂಲಕ ಬಿ ರಿಪೋರ್ಟ್ ಬಗ್ಗೆ ಸಂತೋಷ್ ಪಾಟೀಲ್ ಕುಟುಂಬ ಎತ್ತಿದ್ದ ಆಕ್ಷೇಪವನ್ನು ಕೋರ್ಟ್ ತಳ್ಳಿ ಹಾಕಿದಂತಾಗಿದೆ.
2022ರ ಏಪ್ರಿಲ್ 12ರಂದು ಬೆಳಗಾವಿ ಮೂಲದ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನಿಬ್ಬರು ಗೆಳೆಯರೊಂದಿಗೆ ಉಡುಪಿಗೆ ಬಂದಿದ್ದ ಅವರು ಉಳಿದಿಬ್ಬರನ್ನು ಬೇರೆ ರೂಮಿಗೆ ಕಳುಹಿಸಿ ತಾವೊಬ್ಬರೇ ಒಂದು ಕೋಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂತೋಷ್ ಪಾಟೀಲ್ ಅವರು ಅದಕ್ಕೆ ಮುನ್ನ ಆಗ ರಾಜ್ಯದ ಗ್ರಾಮೀಣ ಮತ್ತು ಪಂಚಾಯಿತಿ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಕಮಿಷನ್ ಆರೋಪ ಮಾಡಿದ್ದರು. ತನಗೆ ಬರಬೇಕಾಗಿರುವ ಕಾಮಗಾರಿ ಹಣದಲ್ಲಿ 40% ಹಣ ಕೇಳಲಾಗುತ್ತಿದೆ. ಇದರಲ್ಲಿ ಈಶ್ವರಪ್ಪ ಅವರೂ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗೆ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಈಶ್ವರಪ್ಪ ಅವರ ಕಡೆಗೆ ಬೆಟ್ಟು ಮಾಡುವಂತೆ ಮಾಡಿತ್ತು. ಜತೆಗೆ ಆವತ್ತು ಆತ್ಮಹತ್ಯೆಗೆ ಮುನ್ನ ಸಂತೋಷ್ ಪಾಟೀಲ್ ತಮ್ಮ ಕೆಲವು ಆತ್ಮೀಯರಿಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಅದರಲ್ಲಿ ಕಾಮಗಾರಿ ಹಣ ಬಿಡುಗಡೆ ಆಗುತ್ತಿರುವ ತೊಂದರೆಯನ್ನು ಎದುರಿಸಲಾಗದೆ ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರ ಆಪ್ತ ಸಹಾಯಕರಿಗೆ ಲಂಚ ಕೊಟ್ಟಿರುವ ಮಾಹಿತಿಯೂ ಅದರಲ್ಲಿತ್ತು.
ಇದೆಲ್ಲ ಆಧಾರದಲ್ಲಿ ಎಫ್‌ಐಆರ್‌ನಲ್ಲಿ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ಸೇರಿಸಲಾಗಿತ್ತು. ಇದರ ಆಧಾರದಲ್ಲಿ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಸಚಿವ ಖಾತೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಈಶ್ವರಪ್ಪಗೆ ವರವಾದ ಬಿ ರಿಪೋರ್ಟ್
ಇದೆಲ್ಲದರ ನಡುವೆ, 2022ರ ಜುಲೈ 20ರಂದು ಉಡುಪಿ ಪೊಲೀಸರು ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಯಾವುದೇ ಪಾತ್ರವಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖಾಧಿಕಾರಿ, ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಅವರು ಸಲ್ಲಿಸಿದ ವರದಿಯಲ್ಲಿ ಈಶ್ವರಪ್ಪ ಅವರು ಸಾವಿಗೆ ಕಾರಣರಾಗಿರುವ ಆರೋಪ ಸಾಬೀತುಪಡಿಸಲು ಯಾವುದೇ ಪೂರಕ ಅಂಶಗಳು ದೊರೆಯುವುದಿಲ್ಲ ಎಂದು ಹೇಳಿದ್ದರು. ಸಂತೋಷ್ ಪಾಟೀಲ್ ಪತ್ನಿ ಮತ್ತು ಗೆಳೆಯರ ಹೇಳಿಕೆ ಹೊರತುಪಡಿಸಿದರೆ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಜತೆಗೆ ಸಂತೋಷ್ ತನ್ನ ಸಬ್ ಕಾಂಟ್ರಾಕ್ಟರ್‌ಗಳಿಗೆ ಕೋಟ್ಯಂತರ ರೂ. ಬಾಕಿ ಇಟ್ಟಿದ್ದ ಮತ್ತು ಈಶ್ವರಪ್ಪ ಅವರು ಹಾಕಿದ ಮಾನನಷ್ಟ ಮೊಕದ್ದಮೆಯಿಂದ ಒತ್ತಡಕ್ಕೆ ಒಳಗಾಗಿದ್ದ. ಸಾಲಗಾರರ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಲಾಗಿತ್ತು. ಪೊಲೀಸರ ಈ ಬಿ ರಿಪೋರ್ಟ್ ವರದಿಯನ್ನು ರಾಜ್ಯದ ಜನಪ್ರತಿನಿಧಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಬಿ ರಿಪೋರ್ಟ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ
ಪೊಲೀಸರ ಬಿ ರಿಪೋರ್ಟ್ ಸಲ್ಲಿಕೆ ಬೆನ್ನಿಗೇ ಪೊಲೀಸರು ಸಲ್ಲಿಸಿದ ಬೆನ್ನಿಗೇ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಅವರು ಈ ವರದಿಯನ್ನು ಅಂಗೀಕರಿಸದಂತೆ ಮನವಿ ಮಾಡಿದ್ದರು. ತನಿಖೆ ವೇಳೆ ಅಸಲಿ ಸಾಕ್ಷ್ಯಗಳನ್ನ ಮರೆಮಾಚಿದ್ದಾರೆ. ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಪೊಲೀಸರ ಬಳಿ ಇರುವ ಸಾಕ್ಷಿಗಳನ್ನು ಹಾಜರುಪಡಿಸಿದರೆ ಎಲ್ಲವೂ ಬಯಲಾಗುತ್ತದೆ ಎಂದು ಹೇಳಿದ್ದರು. ಜತೆಗೆ ಈ ಪ್ರಕರಣದಲ್ಲಿ ಈಶ್ವರಪ್ಪ ಅವರ ವಿಚಾರಣೆಯನ್ನೇ ನಡೆಸಿಲ್ಲ ಎಂದು ಆಕ್ಷೇಪಿಸಿದ್ದರು.
ಈ ಮೇಲ್ಮನವಿಯ ಆಧಾರದಲ್ಲಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ 42ನೇ ವಿಶೇಷ ನ್ಯಾಯಾಲಯ 2023ರ ಜನವರಿ 31ರೊಳಗೆ ಎಲ್ಲ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತ್ತು. ಪ್ರಮುಖವಾಗಿ ಸಂತೋಷ್ ಬಳಸುತ್ತಿದ್ದ ಎರಡು ಮೊಬೈಲ್‌ಗಳಲ್ಲಿದ್ದ ಡೇಟಾ, ಎಫ್ಎಸ್ಎಲ್ನಿಂದ ಪಡೆದ ಎಲ್ಲಾ ತಾಂತ್ರಿಕ ಸಾಕ್ಷ್ಯ, ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ಫೂಟೇಜ್ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಪೊಲೀಸರು ಮಾಡಿದ ಎಲ್ಲ ವಿಡಿಯೊಗಳ ಅನ್ ಎಡಿಟೆಡ್ ವರ್ಷನ್‌ಗಳನ್ನು ನೀಡಲು ಆದೇಶಿಸಿತ್ತು.
ಅಂತಿಮ ವಿಚಾರಣೆ ನಡೆದು ವರದಿ ಅಂಗೀಕಾರ
ಈ ಎಲ್ಲ ಹಂತಗಳನ್ನು ದಾಟಿ ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಬಿ ರಿಪೋರ್ಟನ್ನು ಅಂಗೀಕರಿಸಿದೆ. ಇದರೊಂದಿಗೆ ಈಶ್ವರಪ್ಪ ಅವರು ತಮ್ಮ ಮೇಲಿನ ಆರೋಪದಿಂದ ತಾಂತ್ರಿಕವಾಗಿ ಮುಕ್ತಿ ಹೊಂದಿದಂತಾಗಿದೆ.
ಈಶ್ವರಪ್ಪ ಅವರು ಪೊಲೀಸರ ಬಿ ರಿಪೋರ್ಟ್ ಸಲ್ಲಿಕೆ ಬೆನ್ನಿಗೇ ಮರಳಿ ಮಂತ್ರಿಯಾಗುವ ಪ್ರಯತ್ನ ಮಾಡಿದ್ದರು. ಅದರೆ, ಮೇಲ್ಮನವಿ ಮತ್ತಿತರ ತಾಂತ್ರಿಕ ವಿಚಾರಗಳು, ರಾಜಕೀಯ ಕಾರಣಗಳು ಅಡ್ಡಿಯಾಗಿದ್ದವು. ಈಗ ಅವರು ಪೂರ್ಣವಾಗಿ ಕ್ಲೀನ್ ಚಿಟ್ ಪಡೆದ ಹೊತ್ತಿನಲ್ಲಿ ಸರ್ಕಾರವೇ ಬದಲಾಗಿದೆ.
ಹಿಂದಿನ ವರದಿ : KS Eshwarappa | ಗುತ್ತಿಗೆದಾರನ ಸಾವಿನ ಪ್ರಕರಣಕ್ಕೆ ಮರುಜೀವ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ?