ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಕಂಡ ಕಂಡ ನಾಯಕರು ಕಂಡ ಕಂಡಂತೆ ಪರಾಭವದ ವಿಶ್ಲೇಷಣೆ ಮಾಡುತ್ತಿದ್ದಾರೆ. ಪಕ್ಷದೊಳಗೆ ನಡೆಯಬೇಕಾಗಿದ್ದ ಆಂತರಿಕ ಅವಲೋಕನ ಹಾದಿ ಬೀದಿಯಲ್ಲಿ ನಡೆಯುವ ಮೂಲಕ ಶಿಸ್ತಿನ ಪಕ್ಷದ ಅಶಿಸ್ತು (BJP Politics) ಬೀದಿ ಚರ್ಚೆಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಲು ಆಪರೇಷನ್ ಕಮಲವೇ (Operation Kamala) ಕಾರಣ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ಹುಬ್ಬಳ್ಳಿಯಲ್ಲಿ ಕೇಳಿದ್ದು, ಅಶಿಸ್ತು ತೋರುವ ವಲಸಿಗರ ಬಾಲ ಕಟ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ದುರ್ದೈವ. ಬಹಿರಂಗವಾಗಿ ಹೀಗೆ ಮಾತನಾಡಬಾರದು. ಇದು ನಾಲ್ಕು ಗೋಡೆ ಮದ್ಯೆ ಮಾತಾಡುವ ವಿಚಾರ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಬಹಿರಂಗ ಹೇಳಿಕೆ ಕೊಡೋರ ಜೊತೆ ನಾನು ಮಾತಾಡುತ್ತೇನೆʼʼ ಎಂದು ಈಶ್ವರಪ್ಪ ಹೇಳಿದರು.
ಅಶಿಸ್ತಿಗೆ ಆಪರೇಷನ್ ಕಮಲವೇ ಕಾರಣ
ʻʻʻಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತು ಕಡಿಮೆ ಆಗಿದೆʼʼ ಎಂದು ಒಪ್ಪಿಕೊಂಡ ಕೆ.ಎಸ್. ಈಶ್ವರಪ್ಪ, ಇದಕ್ಕೂ ಕಾಂಗ್ರೆಸ್ ಕಾರಣವೆಂದು ದೂರಿದರು.
ʻʻಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕೆಲವು ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಅನುಭವಿಸ್ತೀದ್ದೀವಿʼʼ ಎಂದು ಪರೋಕ್ಷವಾಗಿ ಆಪರೇಶನ್ ಕಮಲದ ವಿರುದ್ಧ ಈಶ್ವರಪ್ಪ ಗರಂ ಆದರು.
ʻʻಕಾಂಗ್ರೆಸ್ ನಾಯಕರು ಬಂದ ಮೇಲೆ ಅಲ್ಪ ಸ್ವಲ್ಪ ಶಿಸ್ತು ಹೋಗಿದೆ. ಆದರೆ, ಮುಂದೆ ಅಶಿಸ್ತು ತೋರಿಸುವವರ ಬಾಲ ಕಟ್ ಮಾಡ್ತೇವೆʼʼ ಎಂದು ಈಶ್ವರಪ್ಪ ಹೇಳಿದರು.
ಸೋಲನ್ನು ಕೆಟ್ಟ ಕನಸು ಎಂದು ಮರೆಯೋಣ
ಕಳೆದ ವಿಧಾನಸಭಾ ಚುನಾವಣೆಯ ಸೋಲನ್ನು ಒಂದು ಕೆಟ್ಟ ಕನಸು ಎಂಬಂತೆ ಮರೆತಿದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಜನರ ಬಳಿ ಹೊರಟಿದ್ದೇವೆ. ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲಿಷ್ಠ ಮಾಡುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಹೇಳಿಕೆಗೆ ಬೈರತಿ ಬಸವರಾಜ ಅಸಮಾಧಾನ
ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ವಲಸಿಗರಿಂದಲೇ ಬಿಜೆಪಿಯಲ್ಲಿ ಅಶಿಸ್ತು ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಮಾಜಿ ಸಚಿವ ಬೈರತಿ ಬಸವರಾಜ ಅವರು ಬಾಗಲಕೋಟೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪನವರು ಹಿರಿಯ ಸಚಿವರಿದ್ದಾರೆ. ಈ ರೀತಿ ಹೇಳಿಕೆ ಕೊಡುವುದು ಸಮಂಜಸವಲ್ಲ. ಅವರು ಯಾವ ಕಾರಣಕ್ಕಾಗಿ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಆದರೆ, ಯಾವುದೇ ಕಾರಣಕ್ಕೂ ಈ ರೀತಿಯ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಉತ್ತರ ಕೊಡುತ್ತೇನೆ ಎಂದು ಬಸವರಾಜ ಅವರು ಹೇಳಿದರು.
ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಸೇರಿದ ಎಲ್ಲ 17 ಜನ ಸೇರಿಕೊಂಡು ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಾವೆಲ್ಲಾ ಚರ್ಚೆ ಮಾಡಿ ಅದಕ್ಕೆ ಬಹಿರತಂ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Karnataka Politics: ಬಿಜೆಪಿ ಕಾಲದ ಹಗರಣಗಳ SIT ತನಿಖೆ?; ಅಧಿವೇಶನದಲ್ಲಿ ಪ್ರತಿಪಕ್ಷ ಕಟ್ಟಿ ಹಾಕಲು ಪ್ಲ್ಯಾನ್?
ಬಹಿರಂಗ ಚರ್ಚೆ ಮಾಡಲು ಆಗಲ್ಲ ಎಂದ ಸಿ.ಟಿ ರವಿ
ವಲಸಿಗ ನಾಯಕರಿಂದ ಸೋಲಾಯಿತು ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಿರಾಕರಿಸಿದ್ದಾರೆ.
ʻʻನಾನು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡೋಕೆ ಹೋಗಲ್ಲ. ನಾನು ಅವತ್ತು ದೆಹಲಿಯಲ್ಲಿ ಕೇವಲ ಅರ್ಕಾವತಿಗೆ ಸಂಬಂಧಿಸಿದಂತೆ ಮಾತ್ರ ಹೇಳಿದ್ದೇನೆ. ಅರ್ಕಾವತಿ ವಿಷಯದಲ್ಲಿ ನಾವು ಬಿಗಿ ನಿಲುವು ತೆಗೆದುಕೊಂಡಿದ್ರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದೆ. ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟೋಕೆ ಇಷ್ಟ ಪಡಲ್ಲ. ನಾವು ಯಾರು ಸರಿ ಅಂತಲೂ ಹೇಳೋದಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಏನೇ ಇದ್ರು ಮಾತಾಡುತ್ತೇನೆ ಎಂದು ಸಿ.ಟಿ. ರವಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ʻʻನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ನಿರೀಕ್ಷೆ ಇತ್ತು. ಆದರೆ, ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಇದೆ. ಅದರಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆʼʼ ಎಂದು ಹೇಳಿದ ಸಿ.ಟಿ. ರವಿ, ʻʻನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಿದೆ, ಆ ತಪ್ಪು ಆಗದ ರೀತಿ ಮುಂದೆ ಹೋಗೋಣʼʼ ಎಂದರು.
ಈಶ್ವರಪ್ಪ ಯಾಕಂದ್ರೋ ವಲಸಿಗರಿಂದಲ್ಲವೇ ಅಧಿಕಾರ ಸಿಕ್ಕಿದ್ದು ಎಂದ ರವಿಕುಮಾರ್
ʻʻಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಿಲ್ಲ. ಹಾಗಾಗಿ ಅವರು ಏನು ಹೇಳಿದ್ದಾರೆ ಎನ್ನುವುದು ಸ್ಪಷ್ಟವಿಲ್ಲʼʼ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
ʻʻ ನಾವು ಎಲ್ಲರೂ ಒಟ್ಟಾಗಿದ್ದೇವೆ, ಹಾಲು ಜೇನಿನಂತೆವಿದ್ದೇವೆ. ಹೊರಗಿನವರು, ಒಳಗಿನವರು ಅಂತ ನಮ್ಮ ನಡುವೆ ಭೇದ ಇಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಈಶ್ವರಪ್ಪನವರು ಯಾವ ಹಿನ್ನೆಲೆಯಲ್ಲಿ ಆಥರ ಹೇಳಿದ್ದಾರೋ ಗೊತ್ತಿಲ್ಲ. ನಿಜವೆಂದರೆ ಅವರು ಬಂದಿದ್ದರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂತುʼʼ ಎಂದಿದ್ದಾರೆ ರವಿಕುಮಾರ್.