ಉಡುಪಿ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ (Karnataka Election 2023) ಟಿಕೆಟ್ ಹಂಚಿಕೆ ವಿಷಯವು ದೊಡ್ಡ ಧಾರಾವಾಹಿಯ ಕಥೆ ಅಲ್ಲ. ನನಗೆ ಅಥವಾ ನನ್ನ ಮಗನಿಗೆ ಇಲ್ಲವೇ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತಾರೆ. ಅಲ್ಲಿಗೆ ಶಿವಮೊಗ್ಗದ ಟಿಕೆಟ್ ಹಂಚಿಕೆ ಕಥೆ ಮುಗಿಯಿತು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಈ ಮೂಲಕ ಟಿಕೆಟ್ ಕೈತಪ್ಪಿದರೂ ಚಿಂತೆ ಇಲ್ಲ ಎಂದು ಹೇಳಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ತಮಗೆ ನಗರ ಕಾರ್ಯದರ್ಶಿಯಿಂದ ಉಪ ಮುಖ್ಯಮಂತ್ರಿ ಹುದ್ದೆಯತನಕ ಜವಾಬ್ದಾರಿ ಕೊಟ್ಟಿದೆ. ಅಲ್ಲದೆ, ರಾಜ್ಯದಲ್ಲಿ ಸಚಿವನಾಗಿ ಅನೇಕ ಖಾತೆಗಳನ್ನು ನಿಭಾಯಿಸಿದ್ದೇನೆ. ಪಕ್ಷ ಹೇಳಿದ್ದನ್ನು ಮಾಡುವುದು ನನ್ನ ಸಂಸ್ಕೃತಿ. ರಾಜ್ಯ, ರಾಷ್ಟ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ನನಗೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ, ಕೊಡದಿದ್ದರೆ ಸ್ಪರ್ಧೆ ಮಾಡುವುದಿಲ್ಲ. ಮಗನಿಗೆ ಟಿಕೆಟ್ ಸಿಕ್ಕರೆ ಅವನು ಸ್ಪರ್ಧೆ ಮಾಡಬಹುದು. ಈ ಎರಡನ್ನು ನಾವು ಕೇಳುವುದಿಲ್ಲ. ಕೊಟ್ಟರೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ. ಇಬ್ಬರಿಗೂ ಟಿಕೆಟ್ ಸಿಗದಿದ್ದರೆ ಯಾರೋ ಕಾರ್ಯಕರ್ತನಿಗೆ ಟಿಕೆಟ್ ಹೋಗುತ್ತದೆ. ಕುಟುಂಬಕ್ಕೆ ಒಂದು ಟಿಕೆಟ್ ಎಂದು ಕೇಂದ್ರದವರು ಆಲೋಚನೆ ಮಾಡಿರಬಹುದು ಎಂದು ನಾನು ಭಾವಿಸುತ್ತೇನೆ. ನಮ್ಮ ಮನೆಯಲ್ಲಿ ಒಂದು ಟಿಕೆಟ್ ಎಂದು ನಾನು ತೀರ್ಮಾನ ಮಾಡಿಕೊಂಡಿದ್ದೇನೆ. ನಮ್ಮ ಮನೆಗೆ ಸಿಕ್ಕರೆ ಒಂದು ಟಿಕೆಟ್. ಇಲ್ಲದಿದ್ದರೆ ಕಾರ್ಯಕರ್ತರಿಗೆ ಟಿಕೆಟ್ ಎಂದು ಹೇಳಿದರು.
ಇದನ್ನೂ ಓದಿ: Heart Attack : ಜೀವ ಕ್ಷಣಿಕ ಕಣೋ! ಮೊಬೈಲ್‌ನಲ್ಲಿ ಮಾತನಾಡುತ್ತಲೇ ಹಾರಿ ಹೋಯ್ತು ಯುವಕನ ಪ್ರಾಣ ಪಕ್ಷಿ
ಇಬ್ಬರಿಗೂ ಟಿಕೆಟ್ ಬೇಕು ಅಂತ ಸೋಮಣ್ಣಗೆ ಅನ್ನಿಸಿತ್ತು
ಬಿಜೆಪಿ ನಾಯಕ ವಿ. ಸೋಮಣ್ಣ ಅವರು ತಮಗೆ ಇಲ್ಲವೇ ತಮ್ಮ ಮಗನಿಗೆ ಟಿಕೆಟ್ ಕೊಟ್ಟರೂ ಬಿಜೆಪಿ ಜತೆ ಇರುತ್ತೇನೆ ಎಂದು ಹೇಳಿದ್ದಾರೆ. ಇಬ್ಬರಿಗೂ ಟಿಕೆಟ್ ಬೇಕು ಅಂತ ಸೋಮಣ್ಣ ಅವರಿಗೆ ಅನ್ನಿಸಿತ್ತು. ಸೋಮಣ್ಣ ರಾಜ್ಯ ಮತ್ತು ರಾಷ್ಟ್ರದ ನಾಯಕರ ಗಮನಕ್ಕೆ ತಂದಿದ್ದಾರೆ. ಪಕ್ಷದ ಹಿರಿಯರು ಏನು ಉತ್ತರ ಕೊಟ್ಟಿದ್ದಾರೋ ಗೊತ್ತಿಲ್ಲ. ಪಕ್ಷ ತೀರ್ಮಾನ ಮಾಡಿದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಸೋಮಣ್ಣ ಚರ್ಚೆಗಳಿಗೆ ಮಂಗಳ ಹಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಈಶ್ವರಪ್ಪ ಹೇಳಿದರು.