ಮಂಡ್ಯ: ಮಹಿಳೆಯರಿಗೆ ಉಚಿತ ಬಸ್ ಸೇವೆ (Free Bus Service) ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ವ್ಯಾಪಕ ಸ್ಪಂದನೆ ಸಿಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಅಲ್ಲದೆ, ಬಸ್‌ಗಳು ಸಹ ಜನರಿಂದ ತುಂಬಿ ತುಳುಕುತ್ತಿವೆ. ಹೀಗೆ ಕೆಎಸ್‌ಆರ್‌ಟಿಸಿ ಬಸ್ (KSRTC Bus) ರಶ್ ಆಗಿದ್ದರೂ ಅನಿವಾರ್ಯ ಸಂದರ್ಭವೆಂದು ಜನರು ಹತ್ತುತ್ತಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಚಲಿಸುತ್ತಿದ್ದ ಬಸ್‌ನಲ್ಲಿ ನೇತಾಡುತ್ತಾ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಹರಕನಹಳ್ಳಿ ಗ್ರಾಮದ ಚಲುವೇಗೌಡ ಮೃತ ದುರ್ದೈವಿ. ಜಕ್ಕನಹಳ್ಳಿಯಿಂದ ಮಂಡ್ಯ ಕಡೆ ಹೊರಟಿದ್ದ ಬಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಬಸ್ ಫುಲ್ ಆಗಿದ್ದರೂ ಹತ್ತಿಕೊಂಡಿದ್ದ ಚಲುವೇಗೌಡ, ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಾ ಬಂದಿದ್ದರು. ಆಗ ಅವರು ಹಿಡಿದುಕೊಂಡಿದ್ದ ಸರಳು ಅವರ ಕೈ ತಪ್ಪಿದೆ. ಹೀಗಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಇದನ್ನೂ ಓದಿ: KRS Dam: ಖಾಲಿಯಾಗಿದೆ ಕೆಆರ್‌ಎಸ್! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್ ಕಥೆ!
ಈ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಚಲುವೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಲುವೇಗೌಡ ಸಾವಿಗೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಬಸ್ ವ್ಯವಸ್ಥೆ ಇಲ್ಲದಿರುವುದೇ ಇಂಥ ಅವಘಡಕ್ಕೆ ಕಾರಣವಾಗುತ್ತಿದೆ. ಸರ್ಕಾರ ಕೂಡಲೇ ಅಗತ್ಯ ಬಸ್ ಸೇವೆಯನ್ನು ಕಲ್ಪಿಸಬೇಕು. ಇರುವ ಬಸ್‌ನಲ್ಲಿಯೇ ಎಲ್ಲರೂ ಸಂಚರಿಸುವುದು ಅಸಾಧ್ಯ. ಅರ್ಧ ಗಂಟೆಯ ವ್ಯತ್ಯಾಸಗಳಲ್ಲಿ ಎಲ್ಲ ರೂಟ್‌ಗಳಿಗೂ ಬಸ್ ಬಿಡುವ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದ ಬಾಲಕಿ!
ಭಾನುವಾರ ಸಹ ಇಂಥದ್ದೊಂದು ಪ್ರಕರಣವು ಬೆಳಗಾವಿಯ ರಾಮದುರ್ಗ ಬಸ್ ನಿಲ್ದಾಣದಲ್ಲಿ ನಡೆದಿತ್ತು. ವೀಕೆಂಡ್ ಜತೆಗೆ ಆಷಾಡ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರಗಳಿಗೆ ಜನರು ಹೊರಟಿದ್ದರು. ಅಲ್ಲದೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಇದ್ದಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಹೀಗಾಗಿ ಬಸ್ ಬಹಳವೇ ರಶ್ ಆಗಿತ್ತು. ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದ ಬಾಲಕಿಯೊಬ್ಬಳು ಆಯತಪ್ಪಿ ಕೆಳಗೆ ಬಿದ್ದಿದ್ದಳು.
ಬೆಳಗಾವಿಯ ರಾಮದುರ್ಗ ಬಸ್ ನಿಲ್ದಾಣದಲ್ಲಿ ಬಸ್ ಫುಲ್ ಆಗಿದ್ದರೂ ಜನರು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಬಸ್ ಚಲಾಯಿಸಿದ್ದು, ಫುಟ್‌ಬೋರ್ಡ್ ತುದಿಯಲ್ಲಿ ನಿಂತಿದ್ದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಕೂಡಲೆ ಬಸ್ ನಿಲ್ಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ: Viral News: ರೈಟ್ ರೈಟ್..! ಅಯ್ಯೋ ಇಲ್ಲಿ ಬಸ್ ನಿಲ್ಸೋದೆ ಇಲ್ಲ; ಬಸ್‌ಗೆ ಅಡ್ಡ ಬಂದು ಬುಸ್‌ಗುಟ್ಟಿದ ರೇಣುಕಾಚಾರ್ಯ!
ಇತ್ತ ಪೋಷಕರು ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಾಲಕಿಯು ಚಕ್ರದ ಪಕ್ಕವೇ ಬಿದ್ದಿದ್ದು, ಸ್ವಲ್ಪದರಲ್ಲಿ ಬಚಾವಾಗಿದ್ದಾಳೆ.