Site icon Vistara News

KSRTC Employees Strike: ಮಾ. 21ರಿಂದಲೇ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಬಂದ್‌ ಆಗುತ್ತಾ ಬಸ್‌?

State govt orders 15% hike in salaries of transport employees

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟುತ್ತಿದೆ. ಈಗ ಸಾರಿಗೆ ಸಿಬ್ಬಂದಿ (KSRTC Employees Strike) ಸಹ ಪ್ರತಿಭಟನೆಗೆ ಮುಂದಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಮಾರ್ಚ್ 21 ಹಾಗೂ ಮಾರ್ಚ್‌ 24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಎರಡು ಬಣಗಳಿಂದ ಪ್ರತಿಭಟನೆ ನಡೆಯುತ್ತಿರುವುದು ನೌಕರರ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಆಗುವ ಲಕ್ಷಣಗಳು ಕಂಡುಬರುತ್ತಿವೆ. ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್‌ ಮಾಡಿಕೊಂಡಿರುವವರು ಜಾಗ್ರತೆ ವಹಿಸಬೇಕಿದೆ.

ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಅನಂತ್ ಸುಬ್ಬರಾವ್ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮುಷ್ಕರ ಆರಂಭವಾದರೆ 23 ಸಾವಿರ ಬಸ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮಾರ್ಚ್‌ 24ರಿಂದ ಇನ್ನೊಂದು ಬಣದ ಪ್ರತಿಭಟನೆ

ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ನೀಡಿದೆ. ಈಗ ಎರಡು ಬಣಗಳು ಪ್ರತ್ಯೇಕವಾಗಿ ಮುಷ್ಕರಕ್ಕೆ ಕರೆ ನೀಡಿರುವುದು ನೌಕರರ ಗೊಂದಲಕ್ಕೆ ಕಾರಣವಾಗಿದೆ. ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದ್ದರು.

ಯುಗಾದಿಗೆ ಪ್ಲ್ಯಾನ್‌ ಮಾಡಿಕೊಂಡಿದ್ದರೆ ಎಚ್ಚರ

ಯುಗಾದಿಗೆ ಬೆಂಗಳೂರಿನಿಂದ ಊರಿಗೆ ಹೋಗುವ ಮೊದಲು ಎಚ್ಚರಿಕೆ ವಹಿಸಬೇಕಿದೆ. ಸಾರಿಗೆ ನೌಕರರ ಪ್ರತಿಭಟನೆಯು ತೀವ್ರಗೊಂಡಿದ್ದೇ ಆದಲ್ಲಿ ತೀವ್ರ ಸಮಸ್ಯೆಯಾಗಲಿದೆ. ಮಂಗಳವಾರವೇ (ಮಾ. 21) ಬಸ್ ಸ್ಥಗಿತಗೊಳ್ಳುವುದರಿಂದ ಸಂಚಾರಕ್ಕೆ ತೊಂದರೆಯುಂಟಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Puneet statue row : ಅಪ್ಪನಿಗೆ ಹುಟ್ಟಿದವನಾದ್ರೆ 5 ನಿಮಿಷ ಯುನಿಫಾರ್ಮ್‌ ಬಿಚ್ಚಿಟ್ಟು ಬಾ; ಎಸ್‌ಐಗೆ ನಾಡಗೌಡ ಪುತ್ರನ ಆವಾಜ್

ಸಾರಿಗೆ ನೌಕರರ ಬೇಡಿಕೆ ಏನು?
• ಮೂಲ ವೇತನವನ್ನು ಶೇ. 25ರಷ್ಟು ಪರಿಷ್ಕರಣೆ ಮಾಡಬೇಕು
• ಬಾಟಾ/ ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು
• ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ ಮಾಡಬೇಕು
• ಸಿಬ್ಬಂದಿ ಮೇಲಿನ FIR ರದ್ದು ಮಾಡಬೇಕು
• ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ನೌಕರರ ಮರುನೇಮಕ ಮಾಡಿಕೊಳ್ಳಬೇಕು

Exit mobile version