ಬೆಂಗಳೂರು: ಮಳೆಗಾಲದ ವೇಳೆ ಮಲೆನಾಡು ಸೇರಿದಂತೆ ಇನ್ನಿತರ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಹಲವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದಕ್ಕಾಗಿ ಟೂರ್ ಮಾಡುವ ಪ್ಲ್ಯಾನ್ ಅನ್ನೂ ಮಾಡಿಕೊಂಡಿರುತ್ತಾರೆ. ಆದರೆ, ಎಲ್ಲಿಗೆ ಹೋಗಬೇಕು? ಹೇಗೆ ಹೋಗಬೇಕು? ಒಮ್ಮೆ ಹೋದರೆ ಎಲ್ಲೆಲ್ಲ ಕವರ್ ಮಾಡಬಹುದು? ಎಷ್ಟು ಪ್ರದೇಶಗಳನ್ನು ನೋಡಬಹುದು? ಅಲ್ಲಿ ಊಟ – ವಸತಿ ಹೇಗೆ? ಎಂಬಿತ್ಯಾದಿ ಗೊಂದಲಗಳು ಇರುತ್ತವೆ. ಇನ್ನು ಹಣಕಾಸು ಲೆಕ್ಕಾಚಾರಗಳೂ ನಡೆದಿರುತ್ತವೆ. ಇದೇ ವೇಳೆ ಕೆಎಸ್‌ಆರ್‌ಟಿಸಿ ವತಿಯಿಂದ ವಾರಾಂತ್ಯದ ಪ್ಯಾಕೇಜ್ ಟೂರ್ (KSRTC Package Tour) ಅನ್ನು ನಿಗದಿಪಡಿಸಲಾಗಿದೆ. ಜೋಗ ಜಲಪಾತ (Jog Falls), ಭರಚುಕ್ಕಿ-ಗಗನಚುಕ್ಕಿಗಳಿಗೆ (Bharachukki and Gaganachukki Falls) ಹೋಗಿಬರುವವರು ಪ್ಲ್ಯಾನ್ ಮಾಡಿಕೊಳ್ಳಬಹುದಾಗಿದೆ.
ಜೋಗದ ಜತೆ ಎಲ್ಲೆಲ್ಲಿ ಹೋಗಿ ಬರಬಹುದು?
ಈ ಪ್ಯಾಕೇಜ್ ಟೂರ್ ಅನ್ನು ಆಯ್ಕೆ ಮಾಡಿಕೊಂಡವರಿಗೆ ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಅಲ್ಲಿಂದ ಶನಿವಾರ ಬೆಳಗ್ಗೆ 5ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು, ಉಪಾಹಾರ ಮುಗಿಸಿ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಮೊದಲು ಭೇಟಿ ನೀಡಲಾಗುತ್ತದೆ. ಅಲ್ಲಿಂದ ವರದಾಮೂಲ, ಇಕ್ಕೇರಿ, ಕೆಳದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಾಗರಕ್ಕೆ ವಾಪಸ್ ಕರೆತರಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಸಾಗರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ: Karnataka Falls : ಕರ್ನಾಟಕದಲ್ಲಿ ನೀವು ನೋಡಲೇಬೇಕಾದ ಜಲಪಾತಗಳಿವು
ಊಟದ ಬಳಿಕ ಜೋಗಕ್ಕೆ ತೆರಳಲಾಗುವುದು. ಅಲ್ಲಿ ಜಲಪಾತ ವೀಕ್ಷಣೆ ಬಳಿಕ ಸಂಜೆ 7 ಗಂಟೆಗೆ ಮತ್ತೆ ಸಾಗರಕ್ಕೆ ತಂದು ಬಿಡಲಾಗುವುದು. ಅಲ್ಲಿ ಶಾಪಿಂಗ್ ಮಾಡಲು ಸಹ ಅವಕಾಶವನ್ನು ನೀಡಲಾಗುತ್ತದೆ. ಆನಂತರ ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಬಸ್ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಮೊದಲ ಪ್ರವಾಸ ಆ.11ರಂದು ಆರಂಭಗೊಳ್ಳಲಿದ್ದು, ವಯಸ್ಕರಿಗೆ 2,500 ರೂ. ಮತ್ತು ಮಕ್ಕಳಿಗೆ 2,300 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ.
ಗಗನಚುಕ್ಕಿಯ ಟೂರ್ ಪ್ಲ್ಯಾನ್ ಹೀಗಿದೆ
ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಬಸ್ ಹೊರಡಲಿದೆ. ಮದ್ದೂರಿನಲ್ಲಿ ಉಪಾಹಾರಕ್ಕೆ ನಿಲುಗಡೆ ಮಾಡಲಾಗುತ್ತದೆ. ಅಲ್ಲಿಂದ ಮೊದಲು ಸೋಮನಾಥಪುರಕ್ಕೆ ತೆರಳಿ, ತಲಕಾಡು ತಲುಪಲಾಗುತ್ತದೆ. ತಲಕಾಡಿನಲ್ಲಿ ಮಧ್ಯಾಹ್ನದ ಊಟದ ವಿರಾಮ ಇರಲಿದೆ. ಮುಂದೆ ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಿಸಿ ಸಂಜೆ 6.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಬೆಂಗಳೂರು ತಲುಪಲಿದೆ.
ಇದು ಒಂದೇ ದಿನದ ಟ್ರಿಪ್ ಆಗಿದ್ದು, ಊಟ- ಉಪಾಹಾರವನ್ನು ಹೊರತುಪಡಿಸಿ ವಯಸ್ಕರಿಗೆ 450 ರೂಪಾಯಿ ಹಾಗೂ ಮಕ್ಕಳಿಗೆ 300 ರೂಪಾಯಿಯನ್ನು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: BBMP hoarding rules : ಬೆಂಗಳೂರಲ್ಲಿನ್ನು ಸಿಎಂ, ಡಿಸಿಎಂ ಸೇರಿ ಯಾರ ಹೋರ್ಡಿಂಗ್ಸ್ ಹಾಕುವಂತಿಲ್ಲ; ಹಾಕಿದ್ರೆ FIR!
ಆಸಕ್ತರು ಈ ಸಂಖ್ಯೆಗೆ ಸಂಪರ್ಕಿಸಿ
ಈ ಪ್ಯಾಕೇಜ್ ಟೂರ್ ಹೋಗಲು ಬಯಸುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7760990287, 7760990988 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.