ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಕ್ಲಬ್ ಕ್ಲಾಸ್ ವೋಲ್ವೋ ಬಸ್ ಬಳಸುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡುವ ಖತರ್ನಾಕ್ ಗ್ಯಾಂಗ್ ಒಂದು ಸಕ್ರಿಯವಾಗಿದೆ. ಈ ಡಕಾಯಿತರು ಚಾಕು ಚೂರಿ ತೋರಿಸಿ ಕಳ್ಳತನ ಮಾಡುವುದಿಲ್ಲ. ಬದಲಿಗೆ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುವ ಈ ಖದೀಮರು, ಪ್ರಯಾಣಿಕರ ವಸ್ತುಗಳನ್ನು ಕದ್ದು ಪರಾರಿ ಆಗುತ್ತಾರೆ. ಹೀಗೆ ಲಕ್ಷ ಲಕ್ಷ ರೂಪಾಯಿ ಹಣವನ್ನು ಎಗರಿಸಿ ಪರಾರಿಯಾಗಿದ್ದವನನ್ನು ಕೆಎಸ್‌ಆರ್‌ಟಿಸಿ ಕಂಡ್ಟಕರ್ ತಮ್ಮ ಸಮಯಪ್ರಜ್ಞೆ ಮೂಲಕ ಸೆರೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜುಲೈ 10ರಂದು ಮಂಗಳೂರು ಎರಡನೇ ಘಟಕದ ಕ್ಲಬ್ ಕ್ಲಾಸ್ ವೋಲ್ವೋ ಸಂಖ್ಯೆ ಕೆಎ01 ಎಫ್ 268, ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿತ್ತು. ಈ ವೇಳೆ ಉಪ್ಪಿನಂಗಡಿಯ ಗಡಿಯಾರದ ಎಂಬ ಪ್ರದೇಶದಲ್ಲಿ ಮುಂಜಾನೆ 5ರ ವೇಳೆಗೆ ಸೀಟ್ ನಂಬರ್ 27ರಲ್ಲಿದ್ದ ಪ್ರಯಾಣಿಕನೊಬ್ಬ ನೈಸರ್ಗಿಕ ಕರೆಗೆ ಹೋಗಬೇಕೆಂದು ಕೋರಿಕೊಂಡಿದ್ದರು. ವಾಹನದ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮತ್ತೊಬ್ಬ ಪ್ರಯಾಣಿಕ (ಸೀಟ್ ನಂಬರ್ 28ರಲ್ಲಿ ಇದ್ದವನು) ಸಹ ನೈಸರ್ಗಿಕ ಕರೆಗಾಗಿ ಹೋಗುವುದಾಗಿ ಹೇಳಿ ಬಸ್ಸಿನಿಂದ ಇಳಿದು ಹೋಗಿದ್ದಾನೆ.
ಸುಮಾರು 10 ನಿಮಿಷ ಕಳೆದರೂ ಕೆಳಗಿಳಿದು ಹೋದ ಇಬ್ಬರು ಪ್ರಯಾಣಿಕರು ವಾಪಸಾಗಲಿಲ್ಲ. ಕೂಡಲೇ ಕಂಡಕ್ಟರ್ ಅಶೋಕ್ ಜಾದವ್ ಅವರು ಪ್ರಯಾಣಿಕರ ಫೋನ್ ಸಂಖ್ಯೆ ಪಟ್ಟಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು, ಅದು ಸ್ವಿಚ್ಡ್ ಆಫ್ ಎಂದು ಬಂದಿದೆ. ಘಟಕದ ಸೂಚನೆಯ ಮೇರೆಗೆ ಸುಮಾರು 15 ನಿಮಿಷ ಕಾದು ಸ್ಥಳೀಯರ ನೆರವಿನೊಂದಿಗೆ ಸುತ್ತಮುತ್ತ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಕೆಳಗಿಳಿದವರು ಸಿಗದಿರುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾಪಸಾಗಿದ್ದರು.
ಅದೇ ದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಸೀಟ್ ನಂಬರ್ 9ರ ಪ್ರಯಾಣಿಕರಾಗಿದ್ದ ಲಕ್ಷ್ಮಿ ಎಂಬುವವರು ತಮ್ಮ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳುವ ಚಿನ್ನ ಮತ್ತು ಹಣ ಕಳೆದು ಹೋಗಿರುವ ಬಗ್ಗೆ ಕಂಡಕ್ಟರ್ ಅಶೋಕ್ ಜಾದವ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದರು.
ನಾಲ್ಕು ತಿಂಗಳ ಬಳಿಕ ಕಳ್ಳರನ್ನು ಲಾಕ್ ಮಾಡಿದ ಕಂಡಕ್ಟರ್!
ನವೆಂಬರ್ 12ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಾತ್ರಿ ಸುಮಾರು 9:45ಕ್ಕೆ ಮಂಗಳೂರಿಗೆ ತೆರಳಲು ಬಸ್ ಅನ್ನು ಫ್ಲಾಟ್ ಫಾರಂ ಬಳಿ ನಿಲ್ಲಿಸಿ ಅಶೋಕ್ ಜಾದವ್ ಟ್ರಿಪ್ ಶೀಟ್ ಪರಿಶೀಲಿಸುತ್ತಿದ್ದರು. ಈ ವೇಳೆ ಇಬ್ಬರ ಹೆಸರು ನೋಡಿದ ಅವರಿಗೆ ಅನುಮಾನ ಬಂದಿದೆ. ತಕ್ಷಣ ಅವರು ಬಸ್ ಹತ್ತಿ ನೋಡಿದ್ದು, ಹಿಂದೆ ಉಪ್ಪಿನಂಗಡಿಯಲ್ಲಿ ಇಳಿದು ಹೋಗಿದ್ದ ಪ್ರಯಾಣಿಕರಿಬ್ಬರು ಬಸ್‌ನಲ್ಲಿ ಕುಳಿತಿದ್ದರು. ತಕ್ಷಣ ಅವರ ಘಟಕಕ್ಕೆ ಮಾಹಿತಿ ನೀಡಿದ್ದು ಅವರ ಸೂಚನೆಯಂತೆ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ.
ವಿಶ್ವಾಸಾರ್ಹತೆಯಲ್ಲಿ ಕೆಎಸ್‌ಆರ್‌ಟಿಸಿ
ಬಸ್ಸಿನಲ್ಲಿ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ ಪ್ರಯಾಣಿಕರ ಮುಖ ಚಹರೆಯನ್ನು ಅಶೋಕ್ ಅವರು ನೆನಪಿನಲ್ಲಿಟ್ಟುಕೊಂಡಿದ್ದರು. ಅದೇ ಕಳ್ಳರು ಸುಮಾರು ನಾಲ್ಕು ತಿಂಗಳ ನಂತರ ಬಸ್ಸಿಗೆ ಬಂದಾಗ ಅವರನ್ನು ಗುರುತಿಸಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ ಅಶೋಕ್ ಜಾಧವ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ | Election 2023 | ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಮಾಜಿ ಸಿಎಂ ಘೋಷಣೆ