ಬೆಂಗಳೂರು: ಐಟಿ ಸಿಟಿ, ಸಿಲಿಕಾನ್ ಸಿಟಿ, ಸ್ಟಾರ್ಟಪ್ ಕ್ಯಾಪಿಟಲ್ ಸೇರಿ ಅನೇಕ ಹೆಗ್ಗಳಿಕೆಗಳನ್ನು ಹೊಂದಿರುವ ಬೆಂಗಳೂರಿಗೆ ಹೊಸ ಸ್ಪರ್ಧಿ ಎಂದರೆ ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಪುತ್ರನೂ ಆಗಿರುವ ರಾಮರಾವ್ ಪ್ರಾರಂಭದಿಂದಲೂ ಆಕ್ರಮಣಕಾರಿ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕಾರಣಕ್ಕೆ ಕೈಗಾರಿಕಾ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರದ ಉದ್ಯಮಿಗಳಲ್ಲಿ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ಅದೇಕೊ ಕೆಟಿಆರ್ ಕಣ್ಣು ಕರ್ನಾಟಕದ ಮೇಲೆ, ನಿರ್ದಿಷ್ಟವಾಗಿ ಬೆಂಗಳೂರಿನ ಮೇಲೆ ಬಿದ್ದಿದೆ.
ಮುನಾವರ್ ಫಾರೂಕಿ ಪ್ರಕರಣ
ಗುಜರಾತ್‌ನ Standup Comedian ಮುನಾವರ್ ಫಾರೂಕಿ 2021ರಲ್ಲಿ ಅನೇಕ ರಾಜ್ಯಗಳಲ್ಲಿ ವಿರೋಧ ಎದುರಿಸಿದರು. ಮುಖ್ಯವಾಗಿ ಅವರು ಬಿಜೆಪಿ, ಸಂಘಪರಿವಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪರೋಕ್ಷವಾಗಿ ನಡೆಸುತ್ತಿದ್ದ ಷೋಗಳು ಸಾಕಷ್ಟು ಜನಪ್ರಿಯವಾಗಿದ್ದವು. ಅದೇ ರೀತಿ ವಿವಿಧ ರಾಜ್ಯಗಳಲ್ಲಿ ಪೊಲೀಸ್ ದೂರು ದಾಖಲಾಗಿತ್ತು. 2021ರ ಜನವರಿಯಲ್ಲಿ ಇಂದೋರ್‌ನಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಮುನಾವರ್ ಅವರನ್ನು ಪೊಲೀಸರು ಬಂಧಿಸಿದ್ದರು. 2021ರ ನವೆಂಬರ್ 28ಕ್ಕೆ ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ಸ್ಟಾಂಡಪ್ ಕಾಮಿಡಿ ಷೋ ಆಯೋಜನೆಯಾಗಿತ್ತು. ಇದಕ್ಕೇ ಪ್ರಮುಖವಾಗಿ ಸಂಘ ಪರಿವಾರ ಹಾಗೂ ಬಿಜೆಪಿ ವಲಯದಿಂದ ವಿರೋಧ ವ್ಯಕ್ತವಾಗಿತ್ತು. ಷೋ ಆಯೋಜನೆ ಮಾಡಿದರೆ ಪ್ರತಿಭಟಿಸುವುದಾಗಿ ಅನೇಕರು ಎಚ್ಚರಿಕೆ ನೀಡಿದ್ದರಿಂದ ಸಂಘಟಕರಿಗೆ ಪೊಲೀಸರೂ ಎಚ್ಚರಿಕೆ ನೀಡಿದ್ದರು. ಕೊನೆಗೆ ಷೋ ನಡೆಯಬೇಕಿದ್ದ ಕೆಲವೇ ಗಂಟೆಗಳ ಮೊದಲು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಫಾರೂಕಿ, ಷೋ ರದ್ದಾಗಿದೆ ಎಂದು ತಿಳಿಸಿದ್ದರು. ಇದಕ್ಕೂ ಮುನ್ನ ಮತ್ತೊಬ್ಬ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ಅವರ ಷೋ ಸಹ ಬೆಂಗಳೂರಿನಲ್ಲಿ ರದ್ದಾಗಿತ್ತು.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೆಟಿಆರ್, ಹಾಸ್ಯಗಾರರನ್ನು ಹೈದರಾಬಾದ್‌ಗೆ ಸ್ವಾಗತಿಸುತ್ತೇನೆ ಎಂದಿದ್ದರು. ರಾಜಕೀಯವಾಗಿ ನಮಗೆ ಒಪ್ಪಿಗೆ ಇಲ್ಲ ಎಂಬ ಒಂದೇ ಕಾರಣಕ್ಕೆ ನಾವು ಮುನಾವರ್ ಫಾರೂಕಿ ಹಾಗೂ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಗಳನ್ನು ನಾವು ರದ್ದು ಮಾಡುವುದಿಲ್ಲ ಎಂದಿದ್ದರು. ನೇರವಾಗಿ ಬೆಂಗಳೂರಿನ ಹೆಸರು ತೆಗೆದುಕೊಂಡ ಕೆಟಿಆರ್, ನಿಮ್ಮನ್ನು ನೀವು ಕಾಸ್ಮೋಪಾಲಿಟನ್ ಸಿಟಿ ಎಂದು ಕರೆದುಕೊಳ್ಳುತ್ತೀರ ಆದರೆ ಹಾಸ್ಯದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೀರ. ಹೈದರಾಬಾದ್ ನಿಜವಾದ ಕಾಸ್ಮೋಪಾಲಿಟನ್ ಸಿಟಿ. ಇಲ್ಲಿಗೆ ಆಗಮಿಸಿ ನೀವು ಸರ್ಕಾರವನ್ನು ತೆಗಳಬಹುದು, ನಾವು ಸಹಿಷ್ಣುಗಳುʼ ಎಂಬ ಮಾತಾಡಿದ್ದರು.
ರವೀಶ್ ನರೇಶ್ ಟ್ವೀಟ್
ಮುನಾವರ್ ಫಾರೂಕಿ ಪ್ರಕರಣದ ನಂತರ ಕೆಲಕಾಲ ಕೆಟಿಆರ್ ಹಾಗೂ ಹೈದರಾಬಾದ್ ವಿಚಾರ ಚರ್ಚೆಯಲ್ಲಿರಲಿಲ್ಲ. ಮಾರ್ಚ್ 30ರಂದು ಬೆಂಗಳೂಟಿನ ಸ್ಟಾರ್ಟಪ್ ಉದ್ಯಮಿ ರವೀಶ್ ನರೇಶ್ ಮಾಡಿದ ಟ್ವೀಟ್ ಮತ್ತೆ ಹೈದರಾಬಾದ್ ವರ್ಸಸ್ ಬೆಂಗಳೂರು ಚರ್ಚೆಯನ್ನು ಆರಂಭಿಸಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಸಂಚಲನ ಮಾಡಿದ್ದ Housing.com, ವ್ಯಾಪಾರ ನಿರ್ವಹಣೆಯಲ್ಲಿ ಕ್ರಾಂತಿಯನ್ನೇ ಮಾಡುತ್ತಿರುವ Khatabook.comನಂತಹ ಯಶಸ್ವಿ ಸ್ಟಾರ್ಟಪ್‌ಗಳನ್ನು ಆರಂಭಿಸಿದವು ರವೀಶ್. ಅಂದು ಟ್ವೀಟ್ ಮಾಡಿದ್ದ ರವೀಶ್, ಎಚ್‌ಎಸ್‌ಆರ್ ಲೇಔಟ್ ಹಾಗೂ ಕೋರಮಂಗಲದಲ್ಲಿ ಸ್ಟಾರ್ಟಪ್‌ಗಳು ಈಗಾಗಲೆ ಲಕ್ಷಾಂತರ ಡಾಲರ್ ತೆರಿಗೆಯನ್ನು ಉತ್ಪತ್ತಿ ಮಾಡುತ್ತಿವೆ. ಆದರೂ ಇಲ್ಲಿನ ರಸ್ತೆಗಳು ಕೆಟ್ಟದಾಗಿವೆ, ದಿನನಿತ್ಯ ವಿದ್ಯುತ್ ಕಡಿತ, ಪಾದಚಾರಿ ಮಾರ್ಗಗಳಿಲ್ಲ, ಕಳಪೆ ಗುಣಮಟ್ಟದ ನೀರು ಸರಬರಾಜು ಮಾಡಲಾಗುತ್ತಿದೆ. ಅನೇಕ ಗ್ರಾಮೀಣ ಪ್ರದೇಶಗಳಿಗೆ ಈಗಷ್ಟೆ ಉತ್ತಮ ಮೂಲಸೌಕರ್ಯ ನೀಡಲಾಗುತ್ತಿದೆ. ಸಂಚಾರ ದಟ್ಟಣೆಯ ಸಮಯದಲ್ಲಿ ಸಮೀಪದ ಏರ್‌ಪೋರ್ಟ್‌ಗೆ ತೆರಳಬೇಕೆಂದರೆ 3 ಗಂಟೆ ತಗಲುತ್ತದೆ ಎಂದಿದ್ದರು.
ಈ ವಿಚಾರಕ್ಕೆ ಕೆಟಿಆರ್ ಟ್ವೀಟ್ ಮಾಡಿ, ಹೈದೃಾಬಾದ್‌ಗೆ ಸ್ವಾಗತ ಎಂದಿದ್ದರು. ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಹೈದರಾಬಾದಿಗೆ ಬನ್ನಿ. ನಾವಿಲ್ಲಿ ಉತ್ತಮ ಮೂಲಸೌಕರ್ಯ ಹೊಂದಿದ್ದೇವೆ. ಅದೇ ರೀತಿ ಉತ್ತಮ ಸಾಮಾಜಿಕ ಮೂಲಸೌಕರ್ಯವೂ ಇದೆ. ನಮ್ಮ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲೊಂದು. ನಾವೀನ್ಯತೆ, ಮೂಲಸೌಕರ್ಯ ಹಾಗೂ ಸಮಗ್ರ ಬೆಳವಣಿಗೆಗಳೇ ನಮ್ಮ ಸರ್ಕಾರದ ಮಂತ್ರ.
ಈ ಬಾರಿ ಕೆಟಿಆರ್ ಮಾತಿಗೆ ರಾಜ್ಯದ ಅನೇಕ ರಾಜಕಾರಣಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಹೈದರಾಬಾದ್ ಹಾಗೂ ಬೆಂಗಳೂರನ್ನು ಹೋಲಿಕೆ ಮಾಡುವುದು ಅತಿ ದೊಡ್ಡ ಜೋಕ್. ದೇಶದಿಂದಷ್ಟೆ ಅಲ್ಲದೆ ವಿಶ್ವದ ಅನೇಕ ಕಡೆಗಳಿಂದ ಐಟಿ ಕ್ಷೇತ್ರದ ಉದ್ಯಮಿಗಳನ್ನು ಬೆಂಗಳೂರು ಆಕರ್ಷಿಸುತ್ತಿದೆ. ಅತಿ ಹೆಚ್ಚು ಸಂಕ್ಯೆಯ ಯೂನಿಕಾರ್ನ್‌ಗಳು ಬೆಂಗಳೂರಿನಲ್ಲಿವೆ ಎಂದಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. 2023ರ ಅಂತ್ಯಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆಗ ಬೆಂಗಳೂರಿನ ಗತವೈಭವವನ್ನು ನಾವು ಪುನಃಸ್ಥಾಪಿಸುತ್ತೇವೆ ಎಂದಿದ್ದರು.
ಈ ಮಾತಿಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದ ಕೆಟಿಆರ್, ಕರ್ನಾಟಕದ ರಾಜಖಾರಣದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. ನಮ್ಮ ಯುವಕರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ ಹಾಗೂ ದೇಶವನ್ನು ಕಟ್ಟುವ ಮಾರ್ಗದಲ್ಲಿ ಹೈದರಾಬಾದ್ ಹಾಗೂ ಬೆಂಗಳೂರಿ ಆರೋಗ್ಯಕರ ಸ್ಪರ್ಧೆಯಲ್ಲಿ ತೊಡಗಲಿ. ಮೂಲಸೌಕರ್ಯ ಹಾಗೂ ಐಟಿಬಿಟಿ ಮೇಲೆ ಹೆಚ್ಚು ಗಮನ ನೀಡೋಣ, ಹಲಾಲ್ ಅಥವಾ ಹಿಜಾಬ್ ಮೇಲಲ್ಲ ಎಂದಿದ್ದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಲಾಲ್, ಹಿಜಾಬ್ ಮುಂತಾದ ಧಾರ್ಮಿಕ ವಿಚಾರಗಳ ಕುರಿತು ತಮ್ಮ ಕೊನೆಯ ಮಾತಿನಲ್ಲಿ ಕೆಟಿಆರ್ ಕಾಲೆಳೆದಿದ್ದರು.
ಹೆಚ್ಚಿನ ಓದು: ಕೋಮು ದಳ್ಳುರಿಗೆ ಹೊತ್ತಿ ಉರಿದ ರಾಜಸ್ಥಾನ: ಪ್ರಾಣ ಪಣಕ್ಕಿಟ್ಟು ನಾಲ್ವರನ್ನು ರಕ್ಷಿಸಿದ ಪೇದೆ