ಬೆಂಗಳೂರು: ಜೆಡಿಎಸ್ ಅಭ್ಯರ್ಥಿಯನ್ನು ಹಿಂದೆ ಸರಿಸುವುದೇ ಸಂಧಾನ ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಸಭೆ ಚುನಾವಣೆ ಕುರಿತು ನಾವು ನಿನ್ನೆಯೇ ಆಫರ್ ಕೊಟ್ಟಿದ್ದೇವೆ. ಅದು ಇನ್ನೂ ಚಾಲ್ತಿಯಲ್ಲಿದೆ. ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ದುರಹಂಕಾರದಲ್ಲಿ ಮಾತನಾಡುತ್ತಾರೆ. ನಾವು 32 ಇದ್ದೀವಿ, ನೀವು 24 ಇದ್ದೀರ. ಯಾರ ಸಂಖ್ಯೆ ದೊಡ್ಡದು? ಬುಧವಾರವೇ ನಾನು ಎಲ್ಲವನ್ನೂ ವಿಸ್ತಾರವಾಗಿ ಹೇಳಿದ್ದೇನೆ. ಅವರು ಇಲ್ಲಿಯವರೆಗೂ ಉತ್ತರ ಕೊಟ್ಟಿಲ್ಲ. ಶುಕ್ರವಾರ ಮದ್ಯಾಹ್ನದವರೆಗೂ ಸಮಯ ಇದೆ. ನಾವಂತೂ ಕಣದಿಂದ ಅಭ್ಯರ್ಥಿಯನ್ನು ವಾಪಸ್ ಪಡೆದುಕೊಳ್ಳುವ ಮಾತೇ ಇಲ್ಲ. ನಮ್ಮ ಬಳಿ ಯಾರೂ ಸಂಧಾನಕ್ಕೂ ಬಂದಿಲ್ಲ. ಕೇವಲ ಮಾಧ್ಯಮಗಳ ಮೂಲಕ ಸಂದೇಶ ಕಳಿಸಿದರೆ ಸಾಲದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೆಡಿಎಸ್-ಕಾಂಗ್ರೆಸ್ Offer Closes Soon
ಕುಪೇಂದ್ರ ರೆಡ್ಡಿ ಹಾಗೂ ಚುನಾವಣೆ ಕುರಿತು ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ಪಕ್ಷವು ಡಿ.ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭೆ ಚುನಾವಣೆಗೆ ತನ್ನ ಮೊದಲ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಉದ್ದಿಮೆದಾರರು, ಸಮಾಜ ಸೇವಕರು ಮತ್ತು ಪ್ರಗತಿಪರ ಚಿಂತಕರು. ರಾಜ್ಯಸಭೆ ಸದಸ್ಯರಾಗಿ ಅನುಭವವುಳ್ಳ ಅವರನ್ನು ಎಲ್ಲ ಪಕ್ಷಗಳು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು. ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಕಾಂಗ್ರೆಸ್ ಪಕ್ಷ ಕುಪೇಂದ್ರ ರೆಡ್ಡಿ ಅವರಿಗೆ ಪೂರ್ಣ ಬೆಂಬಲ ಕೊಡಬೇಕು.
ಬಿಜೆಪಿಯನ್ನು ಸೋಲಿಸಲು, ತನಗಿಂತ ಹೆಚ್ಚು ಮತ ಹೊಂದಿರುವ ಜೆಡಿಎಸ್ ಅನ್ನು ಕಾಂಗ್ರೆಸ್ ಬೆಂಬಲಿಸಬೇಕು. ಈ ಚುನಾವಣೆಯ ಪರಿಣಾಮಗಳ ಬಗ್ಗೆ ಇತಿಹಾಸ ಹಾಗೂ ಜನತೆ ಭವಿಷ್ಯದ ದಿನಗಳಲ್ಲಿ ನಿರ್ಧರಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಈ ಅಂಶ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ದೇವೇಗೌಡರ ಕಾಲ ಮುಗೀತು
ಜೆಡಿಎಸ್‌ನಲ್ಲಿ ದೇವೇಗೌಡರ ಕಾಲಕ್ಕೆ ಸೆಕ್ಯೂಲರ್ ಮುಗೀತು. ಇದು ದೇವೇಗೌಡರ ಕಾಲ ಅಲ್ಲ. ಕುಮಾರಸ್ವಾಮಿ-ರೇವಣ್ಣ ಕಾಲ ಎಂದು ಜೆಡಿಎಸ್ ವಿರುದ್ದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜ್ಯಾತ್ಯಾತೀತ ಅನ್ನೋದು ಇದ್ದರೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅವರು ಓಟ್ ಹಾಕಲಿ.
ಅಸೆಂಬ್ಲಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಸಿಎಂ ಸ್ಥಾನ ಕಳೆದುಕೊಂಡ ಮೇಲೆ ಜೆಡಿಎಸ್‌ನವರು ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಸಭಾಪತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನ ಕೆಳಗಿಳಿಸಿ, ಬಸವರಾಜ ಹೊರಟ್ಟಿಯನ್ನ ಆಯ್ಕೆ ಮಾಡಿಕೊಂಡರು. ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿವರೆಗೆ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಅವಾಗೆಲ್ಲ ರೇವಣ್ಣ ಅವರಿಗೆ ಸೆಕ್ಯೂಲರಿಸಂ ನೆನಪಾಗಿಲ್ಲ ಪಾಪ. ಇವತ್ತು ಸೆಕ್ಯೂಲರ್ ಸೆಕ್ಯೂಲರ್ ಅಂತ ಮಾತನಾಡುತ್ತಾರೆ.
ದೇವೇಗೌಡರಿಗೋಸ್ಕರ ನಮ್ಮ ಪಕ್ಷದ ನಾಯಕರು ಅವಕಾಶ ಮಾಡಿಕೊಟ್ಟರು. ಆದರೂ ಅಲ್ಲಿಯೂ ಸೋತರು. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ನಾವು ಗೌರವ ಇಟ್ಟುಕೊಂಡು ದೇವೇಗೌಡರಿಗೆ ಅವಕಾಶ ಕೊಟ್ಟಿದ್ದೇವೆ. ಈಗ ಜೆಡಿಎಸ್ ಅದೇ ಕೆಲಸ ಮಾಡಬೇಕು. ಇನ್ನೂ ಕಾಲ ಮಿಂಚಿಲ್ಲ, ಕಾಂಗ್ರೆಸ್ ಪರವಾಗಿ ಅವರು ಓಟ್ ಹಾಕಲಿ. ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಬೆಂಬಲ ನೀಡಲಿ ಎಂದು ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ರೆಸಾರ್ಟ್ ಶಿಫ್ಟ್
ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆ ಪಕ್ಷ ಹೈರಾಣುತ್ತಿದೆ. ಈಗಾಗಲೆ ಸಗವಿಜರ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಶಾಸಕ ಗೌರಿಶಂಕರ್‌ಗೆ ವಾಪಸ್ ಬರುವಂತೆ ಸೂಚಿನೆ ನೀಡಲಾಗಿದೆ. ಗುರುವಾರ ಸಂಜೆ ಆರು ಗಂಟೆ ವೇಳೆಗೆ ಗೌರಿ ಶಂಕರ್ ವಾಪಸಾಗುವ ನಿರೀಕ್ಷೆ ಇದೆ. ಬುಧವಾರ ರಾತ್ರಿ ಎಲ್ಲ ಶಾಸಕರನ್ನೂ ವೈಟ್‌ಫೀಲ್ಡ್ ಬಳಿಯ ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ದ ಜೆಡಿಎಸ್ ಇದೀಗ ಎಲ್ಲರನ್ನೂ ಗೊರಗುಂಟೆಪಾಳ್ಯದ ಹೋಟೆಲ್‌ಗೆ ಸ್ಥಳಾಂತರಿಸಿದೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಸಾಧ್ಯ: ಬೊಮ್ಮಾಯಿ