ಬೆಂಗಳೂರು: ಬಿಎಂಎಸ್ ಟ್ರಸ್ಟ್ ಪ್ರಕರಣ ಕುರಿತು ರಾಜ್ಯ ಸರ್ಕಾರ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೆಲ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ ಅವರು ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.
ಕರ್ನಾಟದಲ್ಲಿ ಮೊತ್ತ ಮೊದಲಿಗೆ ಪರ್ಸಂಟೇಜ್ ವಿಷಯ ಎತ್ತಿದವರೇ ಪ್ರಧಾನಿ ಮೋದಿ ಅವರು. ಕೆಂಪುಕೋಟೆ ಮೇಲೆ ಅಗಸ್ಟ್ 15ರಂದು ಅವರು ಮಾಡಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದಲ್ಲಿಯೂ ಸೇರಿದಂತೆ ಎಲ್ಲ ಕಡೆ ಕಮಿಷನ್ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಬಿಜೆಪಿ ಪಕ್ಷದ ಸರ್ಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಹಾಗೆ ನೋಡಿದರೆ ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸರ್ಕಾರದಲ್ಲಿ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ನಾನೇ ದಾಖಲೆಗಳ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಕಾದು ನೋಡೊಣ, ಪ್ರಧಾನಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಎಂದು ಕುಮಾರಸ್ವಾಮಿ ಹೇಳಿದರು.
ಇದು ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟ್ ಆಸ್ತಿಯನ್ನು ಹೊಡೆದುಕೊಳ್ಳುವ ಭಾರೀ ಹಗರಣ. ಈಗಾಗಲೆ ಬಹಳಷ್ಟು ಅಕ್ರಮಗಳು ನಡೆದು ಹೋಗಿವೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರಬಂದರೆ ಈ ಸರ್ಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರ್ಕಾರವು ತನಿಖೆಗೆ ಸುತರಾಂ ಒಪ್ಪುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.
ಆ ಕಾಣದ ಕೈಗಳು ಅಕ್ರಮದ ತನಿಖೆ ಆಗದಂತೆ ತಡೆಯುತ್ತಿವೆ ಹಾಗೂ ತನಿಖೆಯ ಕೈ ಕಟ್ಟಿಹಾಕಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿವೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ಏನು ಮಾಡಿಲ್ಲವೆಂದರೆ ತನಿಖೆ ನಡೆಸಲು ಮೀನಾ ಮೇಷ ಏಕೆ? ಭಯ ಏಕೆ? ಎಂದು ಅವರು ಪ್ರಶ್ನೆ ಮಾಡಿದರು.
ಸಾರ್ವಜನಿಕರಿಗೆ ಸೇರಿದ ಟ್ರಸ್ಟ್ ನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಎಲ್ಲ ರೀತಿಯ ಕುಮ್ಮಕ್ಕು ನೀಡಿ ಖಾಸಗಿ ಕುಟುಂಬ ಒಂದಕ್ಕೆ ಪರಭಾರೆ ಮಾಡಿಕೊಳ್ಳಲು ಹೊರಟ್ಟಿದ್ದಾರೆ. ಇದನ್ನು ಸದನದಲ್ಲಿ ನಾನು ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದೇನೆ. ಆದರೂ, ಸಚಿವರು ಉಢಾಪೆ ಉತ್ತರ ಕೊಟ್ಟು ಏನೂ ಆಗಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಕೂಡ ಎಲ್ಲ ಗೊತ್ತಿದ್ದರೂ, ಏನೂ ಗೊತ್ತೇ ಇಲ್ಲ ಎನ್ನುವಂತೆ ನಾಟಕ ಆಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಿಕ್ ಬ್ಯಾಕ್ ಪಡೆದಿರುವ ಸಚಿವರು
ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರೆ. ನಾನು ಸದನದಲ್ಲಿ ಈ ಮಾತು ಹೇಳಿದಾಗ ಬಿಜೆಪಿ ಪಕ್ಷದ ಯಾವ ಶಾಸಕರಾಗಲಿ, ಸಚಿವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಇಡೀ ಹಗರಣದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಜಗಜ್ಜಾಹೀರಾದ ಹಗರಣ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಮಾಡಿದರು.
ಲೋಕಾಯುಕ್ತಕ್ಕೂ ದೂರು
ಸಚಿವ ಅಶ್ವತ್ಥನಾರಾಯಣ ಸೂಚನೆ ಮೇರೆಗೆ ಅನುಮೋದನೆ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ತನಿಖೆ ನಡೆದರೆ ಸತ್ಯಾಂಶ ಹೊರ ಬರುತ್ತದೆ. ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ನಾನು ಕೇವಲ ಅಶ್ವತ್ಥನಾರಾಯಣ ವಿರುದ್ಧ ಹೋರಾಟ ಮಾಡುವುದಿಲ್ಲ. ಸರ್ಕಾರದ ವಿರುದ್ಧವೂ ನನ್ನ ಹೋರಾಟ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ | ಅಶ್ವತ್ಥನಾರಾಯಣ ರಾಜೀನಾಮೆ ನೀಡಲೇಬೇಕು ಎಂದು 11 ಟ್ವೀಟ್ ಮಾಡಿದ ಕುಮಾರಸ್ವಾಮಿ