ಅಂಬಿಗರಹಳ್ಳಿ (ಕೆ.ಆರ್. ಪೇಟೆ, ಮಂಡ್ಯ ಜಿಲ್ಲೆ): ಜಲ ಮಾತೆಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ಕುಂಭಮೇಳದ (Kumbhamela) ಉದ್ದೇಶವಾಗಿದೆ. ತ್ರಿವೇಣಿ ಸಂಗಮದಲ್ಲಿ ಮೂರು ನದಿಗಳಾದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥಗಳಿಗೆ ನಮಸ್ಕರಿಸಿ, ಗೌರವಿಸಿ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಈ ಮೂಲಕ ನಮ್ಮನ್ನು ಇದೇ ರೀತಿಯಲ್ಲಿ ರಕ್ಷಿಸು ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರ ಜತೆಗೆ ನೀರಿನ ಮಿತವ್ಯಯವೂ ನಮ್ಮಿಂದ ಆಗಬೇಕಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸೇರುವ ಕೆ.ಆರ್. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಕುಂಭ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ನದಿಗಳ ತ್ರಿವೇಣಿ ಸಂಗಮದಲ್ಲಿ ಗಂಗಾ, ನರ್ಮದೆ, ಸರಸ್ವತಿ ಇದ್ದಾರೆಂಬ ನಂಬಿಕೆ ನಮ್ಮದು. ಗಂಗೆ, ನರ್ಮದೆಗೆ ನಾವು ಸುಲಭವಾಗಿ ನಾವು ಸುಲಭವಾಗಿ ಪೂಜೆ ಮಾಡುತ್ತೇವೆ. ಆದರೆ, ಸರಸ್ವತಿ ಗುಪ್ತಗಾಮಿನಿಯಾಗಿದ್ದಾಳೆ. ಹೀಗಾಗಿ ಅಂತರ್ಜಲ ಮೇಲೆತ್ತುವ ಬೋರ್‌ವೆಲ್‌ಗೆ ನಾವೀಗ ಮಹತ್ವ ಕೊಡುತ್ತಿದ್ದೇವೆ. ಇದರಲ್ಲಿ ಸರಸ್ವತಿಯನ್ನು ನಾವು ಕಂಡುಕೊಂಡಿದ್ದೇವೆ. ಇದಕ್ಕೆ ಪೂಜೆ ಸಲ್ಲಿಸುವ ರೂಢಿಯನ್ನು ಈಗ ಬೆಳೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕಾವೇರಿಯಿಂದ ಇನ್ನೂ ಮಹತ್ವ
ನಮ್ಮ ಪಂಚಭೂತಗಳಲ್ಲಿ ಜಲಕ್ಕೆ ಬಹಳ ಮಹತ್ವದ್ದು, ನೀರಿಲ್ಲದೆ ಈಗ ಯಾವ ಚಟುವಟಿಕೆಯೂ ನಡೆಯುದಿಲ್ಲ. ನಮಗೆ ಕುಡಿಯಲು, ಕೃಷಿ ಸೇರಿದಂತೆ ಎಲ್ಲದಕ್ಕೂ ನೀರು ಬೇಕು. ಈ ಕಾರಣದಿಂದ ಈಗ ಮಂಡ್ಯದ ಈ ತ್ರಿವೇಣಿ ಸಂಗಮದಲ್ಲಿ ಮೂರು ನದಿಗಳಾದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳಿದ್ದು, ಇವುಗಳನ್ನು ಸ್ಮರಿಸಬೇಕಿದೆ. ನಾವು ಸ್ನಾನ ಮಾಡುವಾಗ ಗಂಗಾ ಸ್ಮರಣೆ ಮಾಡಿಕೊಳ್ಳುವಾಗ ಬರುವ ಕಾವೇರಿ ಸಹ ಇಲ್ಲಿರುವುದರಿಂದ ಈ ತ್ರಿವೇಣಿ ಸಂಗಮಕ್ಕೆ ಬಹಳವೇ ಮಹತ್ವವಿದೆ ಎಂದು ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಕೃತಜ್ಞತೆಯ ಮಹತ್ವ
ನಮ್ಮ ಸಂಸ್ಕೃತಿಯಲ್ಲಿ ಎಲ್ಲದಕ್ಕೂ ಮಹತ್ವವಿದ್ದು, ಕೃತಜ್ಞತೆ ಸಲ್ಲಿಸುವುದೂ ಒಂದು ಪ್ರಮುಖ ಭಾಗವಾಗಿದೆ. ಉದಾಹರಿಸಿ ಹೇಳುವುದಾದರೆ ವಿಜಯದಶಮಿಯಂದು ಆಯುಧ ಪೂಜೆ ಮಾಡಿದ್ದೇವೆ. ನಾವು ಕಬ್ಬಿಣಕ್ಕೆ ಪೂಜೆ ಮಾಡಿದರೆ ಅವುಗಳಿಗೆ ತಿಳಿಯುತ್ತದೆಯೇ? ನೇಗಿಲು, ಕತ್ತಿ, ಕಟಾರಿಗಳಿಗೆ ಪೂಜೆ ಮಾಡುವ ಮೂಲಕ ನಮಗೆ ನಿಮ್ಮಿಂದ ಉಪಕಾರ ಆಗಿದೆ ಎಂಬುದನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸುವ ಸಂಬಂಧ ಸಂಪ್ರದಾಯ ರೂಢಿಯಲ್ಲಿದೆ. ಇದೇ ಮಾದರಿಯನ್ನು ನಾವು ಪ್ರತಿಯೊಂದರಲ್ಲೂ ಅನುಸರಿಸಬೇಕು ಎಂದು ಡಾ. ವಿರೇಂದ್ರ ಹೆಗ್ಗಡೆ ಹೇಳಿದರು.
ನೀರಿನ ಮಹತ್ವದ ಬಗ್ಗೆ ಪಾಠ
ನೀರು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದು ನದಿಗಳು ತುಂಬಿ ಹರಿದರೂ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನಾವು ಎದುರಿಸಬೇಕಾಗುತ್ತಿದೆ. ನಾವು ಇದನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಅರಿತುಕೊಳ್ಳಬೇಕು. ಜಲವನ್ನು ಎಚ್ಚರಿಕೆಯಿಂದ ಉಪಯೋಗಿಸಿಕೊಳ್ಳದೇ ಇದ್ದರೆ, ಅತಿವೃಷ್ಟಿಯಿಂದ ಬಂದ ನೀರು ಸಹ ಉಪಯೋಗಕ್ಕೆ ಬಾರದು. ಹೀಗಾಗಿ ಯಾರೂ ಸಹ ನೀರನ್ನು ಅನವಶ್ಯಕವಾಗಿ ಬಳಸಬೇಡಿ. ಕೃಷಿಗೆ, ಅಡುಗೆಗೆ, ಸ್ನಾನಕ್ಕೆ ಸೇರಿದಂತೆ ಯಾವುದಕ್ಕೇ ಆದರೂ ಪೋಲು ಮಾಡಬೇಡಿ, ವ್ಯರ್ಥವಾಗುವಂತೆ ಮಾಡಬೇಡಿ, ನಿಮಗೆ ಅಗತ್ಯವಿದ್ದಷ್ಟೇ ಉಪಯೋಗಿಸಿ, ಜಲವು ಅಮೂಲ್ಯವಾಗಿದ್ದು, ಮುಂದಿನವರಿಗೂ ಉಳಿಸೋಣ, ಜಲವನ್ನು ಸಂರಕ್ಷಣೆ ಮಾಡೋಣ ಎಂದು ಡಾ. ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.
ಕೃಷಿಗೆ ಹನಿ ನೀರಾವರಿ ಬಳಸಿ
ಮನುಷ್ಯ ಹೇಗೆ ಹಿತವಾಗಿ ಮತ್ತು ಮಿತವಾಗಿ ಆಹಾರ ಸೇವಿಸಬೇಕು ಎಂದು ಹೇಳಲಾಗುತ್ತದೆಯೋ ಹಾಗೇ ಇತಿಮಿತಿಯಲ್ಲಿ ನೀರಿನ ಬಳಕೆಯಾಗಬೇಕು. ಮೊದಲೆಲ್ಲ ಕೃಷಿಗೆ ಯಥೇಚ್ಛವಾಗಿ ನೀರಿನ ಬಳಕೆಯಾಗುತ್ತಿತ್ತು. ಆದರೆ, ಇಂದು ಹನಿ ನೀರಾವರಿ, ಸ್ಪ್ರಿಂಕ್ಲರ್, ಡ್ರಿಪ್ ಇರಿಗೇಶನ್ ಸೇರಿದಂತೆ ಹಲವಾರು ತಂತ್ರಜ್ಞಾನಗಳು ಬಂದಿವೆ. ಅವುಗಳ ಸದುಯೋಗವಾಗಲಿ. ಹೀಗಾಗಿ ಎಲ್ಲರೂ ಜಲವನ್ನು ಪವಿತ್ರ ಗಂಗೆಯೆಂದು ತಿಳಿದು ಬಳಸಬೇಕಿದೆ. ನೀರನ್ನು ಯಾರೂ ಸ್ವೇಚ್ಛೆಯಿಂದ ಬಳಸಬೇಡಿ ಎಂದು ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.
ಪ್ರಕೃತಿ ಉಳಿವಿಗೆ ಹೋರಾಡೋಣ- ಅಶ್ವತ್ಥನಾರಾಯಣ
ಪ್ರಕೃತಿಯನ್ನು ಆರಾಧಿಸುವ, ಗೌರವಿಸುವ ಸನಾತನ ಧರ್ಮಕ್ಕೆ ನಾವು ಸೇರಿದವರು. ಈ ತ್ರಿವೇಣಿ ಸಂಗಮಕ್ಕೆ ನಾವೆಲ್ಲರೂ ಇಲ್ಲಿ ಬಂದು ಪುಣ್ಯಸ್ನಾನ ಮಾಡಬೇಕು. ಆ ಮೂಲಕ ನಮ್ಮ ಪಾಪಗಳನ್ನು ತೊಳೆದು, ಪುಣ್ಯವನ್ನು ಪಡೆದುಕೊಳ್ಳಬೇಕು. ಈ ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನಾವೆಲ್ಲರೂ ನಿಸ್ವಾರ್ಥವಾಗಿ ಪ್ರಕೃತಿಯ ಉಳಿವಿಗೆ ಹೋರಾಡೋಣ, ನಾಡನ್ನು ಕಟ್ಟೋಣ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಕರೆ ನೀಡಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು, ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ,
ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡೆ ಸಚಿವ ಡಾ. ನಾರಾಯಣಗೌಡ, ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಸೀಲ್ದಾರ್ ರೂಪ, ಸಣ್ಣ ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಂಜಾನೆಯಿಂದಲೇ ಪೂಜೆ-ಪುನಸ್ಕಾರ ಆರಂಭ
ಶುಕ್ರವಾರ ಮುಂಜಾನೆಯಿಂದಲೇ ಪೂಜೆಗಳು ಆರಂಭವಾಗಿದ್ದು, ಬೆಳಗ್ಗೆ 4 ಗಂಟೆಯಿಂದ ನೂತನ ವಿಗ್ರಹಕ್ಕೆ ಅಷ್ಟಬಂಧ, ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕುಂಭಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿತ್ತು. ನಂತರ ನೂತನ ಮಲೈ ಮಹದೇಶ್ವರ ಮೂರ್ತಿ ಪ್ರತಿಷ್ಠಾಪನೆ, ಮಹಾಮಂಗಳಾರತಿಯ ಜತೆಗೆ 3 ಜ್ಯೋತಿಗಳಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಕಾವೇರಿ ನದಿ ಪೂಜೆ ಮಾಡಿ ಬಾಗಿನ ಸಮರ್ಪಣೆ ಮಾಡಿದ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಮತ್ತು ಸಾಧು-ಸಂತರರಿಂದ ಕುಂಭಮೇಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಪವಿತ್ರ ಸ್ನಾನಕ್ಕೆ ಸಿದ್ಧತೆ
ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ದೇವಾಲಯದ ಮುಂಭಾಗ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸಾವಿರಾರು ಜನರ ಪವಿತ್ರ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬೋಟ್‌ಗಳನ್ನೂ ಸಹ ಇಡಲಾಗಿದ್ದು, ಇದರ ಜತೆಗೆ ನುರಿತ ಈಜು ತಜ್ಞರನ್ನೂ ನಿಯೋಜನೆ ಮಾಡಲಾಗಿದೆ.
ಸಂಜೆ ೬ ಗಂಟೆಗೆ ಗಂಗಾರತಿ
ಅಂಬಿಗರ ಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ಸಂಜೆ 6 ಗಂಟೆಗೆ ಕಾಶಿ ಮಾದರಿಯಲ್ಲಿ ಗಂಗಾರತಿ ಕಾರ್ಯಕ್ರಮವನ್ನು ನಿಯೋಜನೆ ಮಾಡಲಾಗಿದೆ. ಬಳಿಕ ವಿಶೇಷ ಲೇಸರ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ | Kumbhamela | ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ ಆರಂಭ, ತ್ರಿವಳಿ ಜ್ಯೋತಿಗಳ ಮೆರವಣಿಗೆ ವೈಭವ