Site icon Vistara News

Kumta Election Results: ಕುಮಟಾದಲ್ಲಿ ಕೂದಲೆಳೆಯಲ್ಲಿ ಪಾರಾದ ದಿನಕರ; ಹತ್ತಿರಕ್ಕೆ ಬಂದು ಸೋತ ಸೋನಿ!

Kumta assembly Election results winner Dinakara Shetty

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರವು ಮುಂಚೂಣಿಯಲ್ಲಿತ್ತು. ಈಗ ಇದರ ಫಲಿತಾಂಶ (Kumta Election Results) ಈಗ ಹೊರಬಿದ್ದಿದ್ದು, ಬಿಜೆಪಿ ಪಕ್ಷದ ದಿನಕರ ಶೆಟ್ಟಿ ಅವರು ಮತ್ತೊಮ್ಮೆ ಜಯಗಳಿಸಿದ್ದಾರೆ.

ಎರಡನೇ ಬಾರಿಗೆ ಜಯದ ನಗೆ ಬೀರಿದ ದಿನಕರ

ಬಿಜೆಪಿ ಅಭ್ಯರ್ಥಿಯಾಗಿದ್ದ ದಿನಕರ ಶೆಟ್ಟಿ ಅವರು ಸತತ ಎರಡನೇ ಗೆಲುವನ್ನು ದಾಖಲಿಸಿದ್ದಾರೆ. ಕ್ಷೇತ್ರದಲ್ಲಿ ಎದ್ದಿದ್ದ ಬಿಜೆಪಿ ವಿರೋಧಿ ಅಲೆಯ ನಡುವೆಯೂ ಜಯ ಸಾಧಿಸಿದ್ದಾರೆ. ಹಿಂದು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಗಳ ಮಧ್ಯೆಯೂ ಜನ ಇವರಿಗೆ ಮಣೆ ಹಾಕಿದ್ದಾರೆ. ಆದರೆ, ಈ ಬಾರಿಯ ಫಲಿತಾಂಶವು ಇವರಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಅವರು 59966 ಮತಗಳನ್ನು ಪಡೆದುಕೊಂಡಿದ್ದಾರೆ. ಕೇವಲ 673 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ.

ಭಾರಿ ಪೈಪೋಟಿ ನೀಡಿ ಸೋಲುಂಡ ಸೂರಜ್ ನಾಯ್ಕ ಸೋನಿ

ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ, ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಮೂಲ ಬಿಜೆಪಿಯ ಒಂದಿಷ್ಟು ಮಂದಿ ಸೂರಜ್ ಬೆನ್ನಿಗೆ ನಿಂತಿದ್ದರು. ಹೀಗಾಗಿ ಬಿಜೆಪಿಯ ಒಂದಷ್ಟು ಮತಗಳನ್ನೂ ಇವರು ಸೆಳೆದಿದ್ದಾರೆ. ಒಟ್ಟಾರೆ ಇವರು 59293 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಮೊದಲ ಸ್ಪರ್ಧೆಯಲ್ಲೇ ಸೋಲುಂಡ ನಿವೇದಿತ್‌ ಆಳ್ವ

ಕಾಂಗ್ರೆಸ್‌ನಲ್ಲಿ ಈ ಬಾರಿ ಟಿಕೆಟ್ ಹಂಚಿಕೆ ವಿಚಾರದಲ್ಲಿ 14 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಕೊನೆಗೆ ಕಾಂಗ್ರೆಸ್ ಹೊಸ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾರನ್ನು ಕಣಕ್ಕಿಳಿಸಿತ್ತು. ಇದರಿಂದ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬಂಡಾಯ ಎದ್ದಿದ್ದರಾದರೂ ಕೊನೆಗೆ ನಾಮಪತ್ರ ಹಿಂಪಡೆದು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಆದರೆ, ಈ ಫಲಿತಾಂಶವನ್ನು ಗಮನಿಸಿದಾಗ ಕಾರ್ಯಕರ್ತರು ಇವರ ಮೇಲೆ ಅಷ್ಟಾಗಿ ವಿಶ್ವಾಸ ತೋರಿದಂತೆ ಕಾಣುತ್ತಿಲ್ಲ. ಭರ್ಜರಿ ಪ್ರಚಾರವನ್ನು ಮಾಡಿದ್ದ ಅವರು ಜಯದ ಮೆಟ್ಟಿಲು ಹತ್ತುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ ಏನು?
ದಿನಕರ ಕೆ ಶೆಟ್ಟಿ (ಬಿಜೆಪಿ): 59,392 | ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್‌): 26,642 | ಗೆಲುವಿನ ಅಂತರ: 32,750

ಈ ಬಾರಿಯ ಫಲಿತಾಂಶ ಹೀಗಿದೆ
ದಿನಕರ ಕೆ ಶೆಟ್ಟಿ (ಬಿಜೆಪಿ): 59,966 | ಸೂರಜ್‌ ನಾಯ್ಕ ಸೋನಿ (ಜೆಡಿಎಸ್)‌: 59293 | ಗೆಲುವಿನ ಅಂತರ: 673 | ನೋಟಾ: 1307

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version