ತಮಕೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ಖಚಿತ ಎಂದ ಕುಣಿಗಲ್ ಶಾಸಕ ಕೆಲವೇ ಗಂಟೆಗಳಲ್ಲಿ ಯು-ಟರ್ನ ಹೊಡೆದಿದ್ದಾರೆ. ಬೆಳಗ್ಗೆ ಆಡಿದ ಮಾತಿಗೆ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ್ದಾರೆ.
ಬೆಳಗ್ಗೆ ಮಾತನಾಡಿದ್ದ ರಂಗನಾಥ್, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅವರು ಮುಖ್ಯಮಂತ್ರಿ ಆದರೆ ಕುಣಿಗಲ್‌ಗೆ ನಾನೇ ಮುಖ್ಯಮಂತ್ರಿ. ನೀವೆಲ್ಲ ಡಿಕೆಶಿ ಮುಖ್ಯಮಂತ್ರಿ ಆಗುವಂತೆ ಕಾಂಗ್ರೆಸ್‌ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಕಾಂಗ್ರೆಸ್‌ಗೆ ಸಪೋರ್ಟ್ ಮಾಡಿ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದನಂತರ ಕ್ಷೇತ್ರದ ಅಭಿವೃದ್ಧಿ ಖಂಡಿತಾ ಆಗುತ್ತೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹೇಳಿಕೊಂಡಿದ್ದರು. ಅವರು ಹೀಗೆ ಹೇಳಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ | ಟ್ರಬಲ್ ಶೂಟರ್ in ಟ್ರಬಲ್: ಡಿ.ಕೆ. ಶಿವಕುಮಾರ್ ವಿರುದ್ಧ ED ಚಾರ್ಜ್‌ಶೀಟ್
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಂಗನಾಥ್‌ಗೆ ಪರಿಸ್ಥಿತಿಯ ಗಂಭಿರತೆ ಅರ್ಥವಾಗಿದೆ. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೇ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಕಾಣುತ್ತದೆ. ಈ ಒಳಜಗಳದಲ್ಲಿ ಸಿಲುಕಿ ನರಳುವುದೇಕೆ ಎಂದು ಎಚ್ಚೆತ್ತುಕೊಂಡ ರಂಗನಾಥ್ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ್ದಾರೆ.
ಕುಣಿಗಲ್ ತಾಲೂಕಿನ ಅಭಿವೃದ್ಧಿ ಉದ್ದೇಶದಿಂದ ನಾನು ಹಾಗೆ ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದರೆ ಅಭಿವೃದ್ಧಿ ಆಗಲಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವರು ಸಿಎಂ ರೇಸ್‌ನಲ್ಲಿ ಇದ್ದಾರೆ. ನಾನು ಮಾತಿನ ಭರದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದೆ. ಕಾಂಗ್ರೆಸ್‌ನಿಂದ ಯಾರು ಮುಖ್ಯಮಂತ್ರಿ ಆದರೂ ಕುಣಿಗಲ್ ಅಭಿವೃದ್ಧಿ ದೃಷ್ಟಿಯಿಂದ ನಾನೇ ಸಿಎಂ ಎಂದು ಹೇಳಿಕೊಂಡಿದ್ದೆ ಅಷ್ಟೆ. ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ʼಸರ್ಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಿʼ; ಮಳಲಿ ತಾಂಬೂಲ ಪ್ರಶ್ನೆ ಬಗ್ಗೆ ಡಿಕೆಶಿ ಆಕ್ರೋಶ