ಬೆಂಗಳೂರು: ಕವಿ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ವಿದ್ವಾಂಸ, ಭಾಷಾಶಾಸ್ತ್ರಜ್ಞ, ಅನುವಾದಕ, ಉಪನ್ಯಾಸಕ, ಅಂಕಣಕಾರ, ಮಕ್ಕಳ ಸಾಹಿತಿ- ಇಂದು ಮುಂಜಾನೆ ಹೈದರಾಬಾದ್‌ನಲ್ಲಿ ಮೃತಪಟ್ಟ ಕೆ.ವಿ. ತಿರುಮಲೇಶ್ ಅವರು ಏನು ಎನ್ನುವುದಕ್ಕಿಂತಲೂ, ಏನಲ್ಲ ಎಂದು ಹೇಳುವುದೇ ಸುಲಭ. ಅವರ ಪ್ರತಿಭೆ ಹತ್ತಾರು ಮುಖಗಳಲ್ಲಿ ಕೆಲಸ ಮಾಡಿದೆ. ಕನ್ನಡಕ್ಕೆ ಅವರು ಸಾಕಷ್ಟು ಮೌಲಿಕ ಕೊಡುಗೆಯನ್ನು ಬಿಟ್ಟುಹೋಗಿದ್ದಾರೆ.
ತಿರುಮಲೇಶ್ ಅವರು ಇಂದು ಕೇರಳದ ಪಾಲಾಗಿರುವ ಕಾಸರಗೋಡಿನ ಕಾರಡ್ಕದಲ್ಲಿ ಜನಿಸಿದವರು. ಕಾಸರಗೋಡು ಹಾಗೂ ತಿರುವನಂತಪುರಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಮಾಡಿ, ಕೆಲವು ಕಾಲ ಕೇರಳದ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು. 1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ಅವರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್‌ಡಿ ಗಳಿಸಿದರು. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್‌ಡಿ. ಪ್ರಬಂಧ. ಇಂಗ್ಲೆಂಡಿನ್ ರೆಡಿಂಗ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದಲ್ಲಿ ಎಂಎ ಪದವಿ ಪಡೆದರು.
ಹೈದರಾಬಾದ್ ಅನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದರೂ ಸದಾ ಕನ್ನಡವನ್ನೇ ತಮ್ಮ ಸಾಹಿತ್ಯದ ಮೂಲಕ ಧ್ಯಾನಿಸುತ್ತಿದ್ದವರು. ಕಾವ್ಯದಲ್ಲಿ ಮಹತ್ವದ ಪ್ರಯೋಗಗಳನ್ನು ಮಾಡಿದ್ದ ಅವರನ್ನು ಕನ್ನಡದ ಅತ್ಯಂತ ಪ್ರಯೋಗಶೀಲ ಕವಿ ಎಂದೇ ಕರೆಯಬಹುದು. ಕಾವ್ಯರಸಿಕರ ನಡುವೆ ಅವರ ʼಮುಖಾಮುಖಿʼ ʼಮಹಾಪ್ರಸ್ಥಾನʼ ʼಪೆಂಟಯ್ಯನ ಅಂಗಿʼ ಮುಂತಾದ ಪದ್ಯಗಳು ಸದಾ ಜನಪ್ರಿಯ. ಅವರ ಸುದೀರ್ಘ ರಚನೆ ʼಅಕ್ಷಯ ಕಾವ್ಯʼಕ್ಕೆ 2015ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈ ಕಾವ್ಯದಲ್ಲೂ, ತಮ್ಮ ಇತರ ಸಾಹಿತ್ಯದಲ್ಲೂ ಬೇರೆ ಭಾಷಾ ಸಾಹಿತ್ಯಗಳ ಸಂವೇದನೆಯನ್ನು ಕನ್ನಡಕ್ಕೆ ತರಲು ಅವರು ಸದಾ ಶ್ರಮಿಸುತ್ತಿದ್ದರು. ಇತರ ಭಾಷೆಗಳಿಂದಲೂ, ಇತರ ಜ್ಞಾನಶಿಸ್ತುಗಳಿಂದಲೂ ಕನ್ನಡ ಭಾಷೆ ಶ್ರೀಮಂತವಾಗಬೇಕು ಎಂಬುದು ಅವರ ನೋಟವಾಗಿತ್ತು.
ವೃತ್ತಿಯಲ್ಲಿ ಅವರು ಭಾಷಾವಿದ್ವಾಂಸ ಹಾಗೂ ಉಪನ್ಯಾಸಕರಾಗಿದ್ದರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು. ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿದ್ದರು. ಅಮೇರಿಕದ ಅಯೋವಾ ವಿಶ್ವವಿದ್ಯಾನಿಲಯದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇಂಗ್ಲಿಷ್ ಅಲ್ಲದೇ ರಷ್ಯನ್, ಫ್ರೆಂಚ್, ಸ್ಪ್ಯಾನಿಶ್ ಭಾಷಾ ಸಾಹಿತ್ಯದಲ್ಲೂ ಅವರು ಪರಿಣತರಾಗಿದ್ದರು. ಕನ್ನಡದ ವ್ಯಾಕರಣಕ್ಕೆ ಸಂಬಂಧಿಸಿದ ಜಿಜ್ಞಾಸೆಗಳಿಗೆ ಅವರಲ್ಲಿ ಸಮರ್ಪಕವಾದ ಉತ್ತರವಿರುತ್ತಿತ್ತು. ಹಿಂದೊಮ್ಮೆ ʼಕನ್ನಡಕ್ಕೆ ಋಕಾರ ಬೇಕೇ ಬೇಡವೇʼ ಎಂಬ ಜಿಜ್ಞಾಸೆ ನಡೆದಾಗ ತಿರುಮಲೇಶ್ ಅವರು ಸಮಚಿತ್ತದ, ಮೌಲಿಕ ಪ್ರತಿಕ್ರಿಯೆಯನ್ನು ನೀಡಿದ್ದರು.
ಇದನ್ನು ಓದಿ: ಕವಿ, ಕತೆಗಾರ ಕೆ.ವಿ ತಿರುಮಲೇಶ್ ಇನ್ನಿಲ್ಲ
ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಅಕ್ಷಯ ಕಾವ್ಯ, ಅರಬ್ಬಿ ಇವು ಸುದೀರ್ಘ, ಪ್ರಾಯೋಗಿಕ ಕಾವ್ಯ ರಚನೆಗಳು. ಅವಧ, ಪಾಪಿಯೂ, ಮುಖವಾಡಗಳು, ಮುಖಾಮುಖಿ, ವಠಾರ, ಮಹಾಪ್ರಸ್ಥಾನ ಇವು ಅವರ ಮುಖ್ಯ ಕವನ ಸಂಕಲನಗಳು. ನಾಯಕ ಮತ್ತು ಇತರರು, ಅಪರೂಪದ ಕತೆಗಳು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ, ಜಾಗುವಾ ಮತ್ತು ಇತರರು ಇವು ಕಥಾ ಸಂಕಲನಗಳು. ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ, ಏನೇನ್ ತುಂಬಿ ಮಕ್ಕಳ ಕೃತಿಗಳು. ಆರೋಪ, ಮುಸುಗು, ಅನೇಕ ಇವರ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ಅವರ ಮುಖ್ಯ ವಿಮರ್ಶಾ ಕೃತಿಗಳು.
ತಿರುಮಲೇಶರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನೇ ಬರೆದರು. ಕನ್ನಡ ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿದ್ದ ಅವರು ಅನುವಾದದಲ್ಲೂ ಮಹತ್ವದ ಕೆಲಸ ಮಾಡಿದ್ದಾರೆ. ಕಲಾಚೇತನ (ರಾಬರ್ಟ್ ಹೆನ್ರಿ – ದಿ ಆರ್ಟ್ ಸ್ಪಿರಿಟ್), ಡಾನ್ ಕ್ವಿಕ್ಸಾಟನ ಸಾಹಸಗಳು (ಮಿಗುವೆಲ್ ಸರ್ವಾಟಿಸ್ ಕಾದಂಬರಿ), ಗಂಟೆ ಗೋಪುರ (ಹರ್ಮನ್ ಮೆಲ್ವಿಲ್ ಕಥೆಗಳ), ರಿಲ್ಕೆಯ ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ, ಪೂರ್ವಯಾನ (ಜೆರಾರ್ಡ್ ದ ನೆರ್ವಾಲ್) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಲಿಗುಲ, ಟೈಬೀರಿಯಸ್ ಎಂಬ ಗ್ರೀಕ್ ಇತಿಹಾಸಕ್ಕೆ ಸಂಬಂಧಿಸಿದ ನಾಟಕಗಳನ್ನೂ ರಚಿಸಿದ್ದಾರೆ.
ವಿಜಯ ಕರ್ನಾಟಕ (ಆಳ ನಿರಾಳ), ಕಸ್ತೂರಿ, ಮುಂತಾದ ಪತ್ರಿಕೆಗಳಲ್ಲಿ ನಿರಂತರವಾಗಿ ಅಂಕಣಗಳನ್ನು ಬರೆದರು. ಈ ಅಂಕಣಗಳು ಪುಸ್ತಕಗಳಾಗಿವೆ. ಹಲವು ಜಾಲತಾಣಗಳಲ್ಲೂ ಸತತವಾಗಿ ಬರೆದಿದ್ದಾರೆ. ಈ ಅಂಕಣಗಳ ವ್ಯಾಪ್ತಿ ಕುಮಾರವ್ಯಾಸನ ಕಾವ್ಯದಿಂದ ಹಿಡಿದು ಪಿಕಾಸೋ ಪೇಂಟಿಂಗ್ ವರೆಗೆ ವೈವಿಧ್ಯಮಯವಾಗಿದೆ. ಕರ್ನಾಟಕಕ್ಕೆ ಬಂದಾಗ ಸಹಲೇಖಕರನ್ನು ಕಂಡು ಆಪ್ತ ಮಾತುಕತೆಗೆ ಅವರು ಹಾತೊರೆಯುತ್ತಿದ್ದರು. ಅವರಿಗೆ, ಕರ್ನಾಟಕದಲ್ಲಿ ತನ್ನನ್ನು ಗುರುತಿಸುವವರೇ ಇಲ್ಲವೇನೋ ಎಂಬ ಸಣ್ಣದೊಂದು ಕೊರಗೂ ಇತ್ತು. ಇದನ್ನು ಹಲವು ಬಾರಿ ಆಡಿ ತೋರಿಸಿಕೊಂಡಿದ್ದರು.