ಮೈಸೂರು: ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದ ನಂಜನಗೂಡು ಸಂಚಾರ ಪಿಎಸ್‌ಐ ಯಾಸ್ಮಿನ್ ತಾಜ್ ಅವರ ಮಗ ಸೈಯದ್ ಐಮಾನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬೈಕ್ ಕಳ್ಳತನ (Theft Case) ಮಾಡಿದ್ದಾನೆ ಎಂದು ಆರೋಪಿಸಿ ಐಮಾನ್ ವಿರುದ್ಧ ಮಹಿಳೆಯೊಬ್ಬರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದಾರೆ.
ಏಪ್ರಿಲ್ 26ರಂದು ಕೆಟಿಎಂ ಬೈಕ್ ಕಳ್ಳತನವಾಗಿತ್ತು. ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಐಮಾನ್, ಸ್ನೇಹಿತರಾದ ಫರ್ಹಾನ್, ತೌಸಿಫ್ ಹಾಗೂ ಜುಬಾನ್ ಸೇರಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಗಾಯತ್ರಿಪುರಂ ನಿವಾಸಿ ಭಾರತಿ ಎಂಬುವವರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು.
ದೂರು ಕೊಟ್ಟ ಒಂದು ತಿಂಗಳ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಐಮಾನ್ ಹೆಸರು ಉಲ್ಲೇಖಿಸಿಲ್ಲ. ನಂತರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಐಮಾನ್ ತಾಯಿ ಇಲಾಖೆಯಲ್ಲಿ ಇರುವುದರಿಂದ ಕಳ್ಳನ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರ ಮುಂದೆ ಕಳ್ಳರು ತಪ್ಪು ಒಪ್ಪಿಕೊಂಡರೂ ದೂರುದಾರರಿಗೆ ನ್ಯಾಯಸಿಕ್ಕಿಲ್ಲ. ಇದರ ನಡುವೆ ರಾಜಿ ಸಂಧಾನಕ್ಕೆ ಐಮಾನ್ ಪರ ವಕೀಲರು ಮುಂದಾಗಿದ್ದಾರೆ. ಹೊಸ ಬೈಕ್ ಕೊಳ್ಳಲು ನಾಲ್ಕನೇ ಒಂದು ಭಾಗ ಹಣ ಕೊಡುವುದಾಗಿ ಐಮಾನ್ ಪರ ವಕೀಲ ಹೇಳುತ್ತಿದ್ದಾರೆ. ಮತ್ತೊಂದೆಡೆ ದೂರು ಕೊಟ್ಟ ಮೇಲೂ ಪಿಎಸ್‌ಐ ಮಗ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ತಮಗೆ ನ್ಯಾಯ ಕೊಡಿಸಬೇಕು ಎಂದು ಭಾರತಿ ಕುಟುಂಬ ಅಳಲು ತೋಡಿಕೊಂಡಿದೆ.
ಇದನ್ನೂ ಓದಿ | ಕಾರು ಡಿಕ್ಕಿ ಪೌರಕಾರ್ಮಿಕನ ಕಾಲು ಕಟ್!; ಕುರಿಗಾಹಿಗೆ ಡಿಕ್ಕಿ ಹೊಡೆದ ಮಾಜಿ ಶಾಸಕನ ಅಳಿಯನ ಕಾರು!
ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದ ಐಮಾನ್
ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸೈಯದ್ ಐಮಾನ್‌ನನ್ನು ಸಿದ್ಧಾರ್ಥ ಸಂಚಾರ ಠಾಣೆ ಪೊಲೀಸರು ಇತ್ತೀಚೆಗೆ ವಶಕ್ಕೆ ಪಡೆದು, ಬೈಕ್ ಜಪ್ತಿ ಮಾಡಿದ್ದರು. ಯುವಕ ಮೈಸೂರಿನ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಬಳಿಕ ವಿಡಿಯೊಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ರೀಲ್ಸ್ ಆಧರಿಸಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು.