ಮೈಸೂರು: ವಿದ್ಯಾರ್ಥಿಗಳು ಕಟ್ಟಿದ್ದ ಸುಮಾರು 25 ಲಕ್ಷ ರೂ. ಪರೀಕ್ಷಾ ಶುಲ್ಕದ ಹಣವನ್ನು ಕದ್ದು ಲೇಡಿ ಅಸಿಸ್ಟೆಂಟ್ ಪ್ರೊಫೆಸರ್ ಪರಾರಿಯಾಗಿರುವ ಘಟನೆ ನಗರದ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷೆ ಹೊಸ್ತಿಲಲ್ಲಿ ಪ್ರೊಫೆಸರ್ ನಾಪತ್ತೆಯಾಗಿರುವುದರಿಂದ (Fraud Case) ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ನಗರದ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬರೋಬ್ಬರಿ 200 ವಿದ್ಯಾರ್ಥಿಗಳಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ, ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸಂಗ್ರಹಣೆ ಮಾಡಿದ್ದರು. ಇದೀಗ ಆ ಪರೀಕ್ಷಾ ಶುಲ್ಕದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳಿಂದ ವರುಣ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಪ್ರೊ.ಹರ್ಷಿತಾ, ಎಟಿಎಂಐ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಟ್ಟಿ ವಿದ್ಯಾರ್ಥಿಗಳು ಮೋಸ ಹೋಗಿದ್ದಾರೆ. ನಕಲಿ ರಶೀದಿ ನೀಡಿ ಹರ್ಷಿತಾ ಯಾಮಾರಿಸಿದ್ದಾರೆ. ಮಂಗಳವಾರ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಹರ್ಷಿತಾಗೂ ನಮಗೂ ಸಂಬಂಧ ಇಲ್ಲ. ಹೊಸದಾಗಿ ಫೀಸ್ ಕಟ್ಟಿ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಿಳಿಸಿದೆ.
ಇದನ್ನೂ ಓದಿ | Viral News : 11 ವರ್ಷದ ಬಾಲಕನ ಜೀವ ತೆಗೆದ ಯುಟ್ಯೂಬ್ ವಿಡಿಯೊ
ಕೊಟ್ಟ ಹಣ ವಾಪಸ್ ಕೊಡದ ವ್ಯಕ್ತಿಯ ಹತ್ಯೆ
ಕಲಬುರಗಿ: ನೀಡಿದ ಸಾಲದ ಹಣ ವಾಸಪ್ ನೀಡದ ಕುರಿತು ಮಾತಿಗೆ ಮಾತು ಬೆಳೆದು ಚಕಮಕಿ ನಡೆದು ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಶೋಕ್ ಪ್ಯಾಟಿ (44) ಕೊಲೆಯಾದ ವ್ಯಕ್ತಿ. ಗುಂಡಪ್ಪ ಹಾಲಗಡ್ಲಿ, ಸೋಮು, ಜಾನಪ್ಪ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ.
ಜಾನಪ್ಪ ಎಂಬಾತ ತನ್ನ ಚಿಕ್ಕಮ್ಮಳಿಗೆ 50 ಸಾವಿರ ರೂ. ಹಣ ನೀಡಿದ್ದ. 50 ಸಾವಿರ ರೂ ಹಣವನ್ನ ಜಾನಪ್ಪಳ ಚಿಕ್ಕಮ್ಮ ಅಶೋಕ್‌ಗೆ ಕೊಟ್ಟಿದ್ದರು. ಜಾನಪ್ಪನು ಅಶೋಕ್‌ನಿಗೆ 50 ಸಾವಿರ ರೂ ವಾಪಾಸು ಕೇಳಿದ್ದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಜಾನಪ್ಪ, ಗುಂಡಪ್ಪ, ಸೋಮು ಸೇರಿಕೊಂಡು ಅಶೋಕ್‌ನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಘಟನೆಯಲ್ಲಿ ಮೂವರು ಆರೋಪಿಗಳಿಗೂ ಗಾಯವಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming : ಮದುವೆಯಾದ ಎರಡೇ ತಿಂಗಳಿಗೆ ತಾಯಿ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ!
ಅಪರಿಚಿತ ವ್ಯಕ್ತಿ ಶವ ಪತ್ತೆ
ಚಿತ್ರದುರ್ಗ: ಚಳ್ಳಕೆರೆ ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಘಟನೆ ನಡೆದಿದೆ.
ಹಿರಿಯೂರು-ಚಳ್ಳಕೆರೆ ರಸ್ತೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ರಸ್ತೆ ಪಕ್ಕ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ತಾಲೂಕು ಆಸ್ಪತ್ರೆಗೆ ಶವ ರವಾನಿಸಿದ ಪೊಲೀಸರಿಗೆ ಚಾಮರಾಜನಗರದ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಕಲೆ ಹಾಕಿ, ತನಿಖೆ ಆರಂಭಿಸಿದ್ದಾರೆ.