Site icon Vistara News

ವಿವಾದಾತ್ಮಕ ಮಸೂದೆ ಮಂಡನೆಗೆ ಮುಂದಾದ ಸರ್ಕಾರ: ಭೂಕಬಳಿಕೆ ವಿಧೇಯಕ ಗುರುವಾರಕ್ಕೆ ಮುಂದೂಡಿಕೆ

bommai session 1

ವಿಧಾನಸಭೆ: ಸರ್ಕಾರಿ ಭೂಮಿಯನ್ನು ಕಬಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಕಾನೂನನ್ನು ಕೈಬಿಡಬೇಕು ಎಂದು ವಿಧಾನಸಭೆಯಲ್ಲಿ ಮಂಡನೆಯಾದ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ವಿರೋಧದ ನಂತರ ಮಂಗಳವಾರಕ್ಕೆ ಮಂಡಿಸಲು ನಿರ್ಧಾರ ಮಾಡಲಾಯಿತು.

ಭೂ ಕಬಳಿಕೆ ನಿಷೇಧ ಕಾಯ್ದೆಯ 192ಎ ಅಂಶದ ಅಡಿಯಲ್ಲಿ, ಭೂ ಕಬಳಿಕೆ ಮಾಡಿಕೊಂಡವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೇ ಎಲ್ಲರೂ ಆಗಮಿಸಬೇಕಾಗಿದೆ. ಇದರಿಂದ ಸಾವಿರಾರು ಜನರ ಬಡವರಿಗೆ, ರೈತರಿಗೆ ತೊಂದರೆ ಆಗಿದೆ. ಹಾಗಾಗಿ ಬಿಬಿಎಂಪಿ ಹಾಗೂ ನಗರ ಸಂಸ್ಥೆಗಳ ವ್ಯಾಪ್ತಿ ಹೊರತುಪಡಿಸಿ ಉಳಿದೆಲ್ಲ ಕಡೆಗಳಿಂದ ಈ ಪ್ರಕರಣ ದಾಖಲಿಸುವ ಅಂಶವನ್ನು ಹಿಂಪಡೆಯಲಾಗುತ್ತದೆ ಎಂದು ಮಸೂದೆ ಮಂಡನೆ ಸಮಯದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್‌ನ ಯು.ಟಿ. ಖಾದರ್‌, ನಾವು ಈಗಿನ ಪೀಳಿಗೆಯನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳಬಾರದು. ಮುಂದಿನ ಪೀಳಿಗೆಗೂ ಒಂದಷ್ಟು ಭೂಮಿಯನ್ನು ಉಳಿಸಿ ಹೋಗಬೇಕು. ನಾವೇನು ಶಾಶ್ವತವಾಗಿ ಇರುವುದಿಲ್ಲ. ಈ ತಿದ್ದುಪಡಿಯಿಂದಾಗಿ, ರಿಯಲ್‌ ಎಸ್ಟೇಟ್‌ನವರಿಗೆ ಉಪಯೋಗ ಆಗುವಂತಿದೆ ಎಂದರು.

ಇದನ್ನೂ ಓದಿ | ಐಟಿ ಕಂಪನಿಗಳಿಂದ ಒತ್ತುವರಿಯಾಗಿಲ್ಲ, ಬೆಂಗಳೂರಿನ ಪ್ರಗತಿಗೆ ಕಾರಣವಾದ ಅವರನ್ನು ದೂರಬೇಡಿ: ಮೋಹನದಾಸ್‌ ಪೈ

ಬಿಜೆಪಿಯ ಕೆ.ಜಿ. ಭೋಪಯ್ಯ ಮಾತನಾಡಿ, ಇದು ಅತ್ಯಂತ ಅವಶ್ಯಕವಾದ ಕಾನೂನು. ನೂರಾರು, ಸಾವಿರಾರು ರೈತರು ದಿನನಿತ್ಯ ಬೆಂಗಳೂರಿಗೆ ಅಲೆಯುವಂತಾಗಿದೆ. ಈ ಕಾನೂನಿನಿಂದ ಅವರೊಗೆಲ್ಲ ಅನುಕೂಲವಾಗುತ್ತದೆ ಎಂದರು.

ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಮಾತನಾಡಿ, ರೈತರ ವಿರುದ್ಧ ಕೇಸ್‌ ಹಾಕಿರುವುದು ಯಾರು? ಇದೇ ಸರ್ಕಾರದ ಅಧಿಕಾರಿಗಳು. ಇಲ್ಲಿವರೆಗೆ ಕೇವಲ ರೈತರ ವಿರುದ್ಧ ಮೊಕದ್ದಮೆ ದಾಖಲಿಸುತ್ತಿದ್ದಾರೆಯೇ ವಿನಃ ಭೂಕಬಳಿಕೆದಾರರ ವಿರುದ್ಧ ೊಂದೂ ಪ್ರಕರಣ ದಾಖಲಿಸಿಲ್ಲ. ಇದೇ ಕಂದಾಯ ಇಲಾಖೆ ಅಧಿಕಾರಿಗಳು. ರೈತರ ವಿರುದ್ಧ ಕೇಸ್‌ ಹಾಕಬೇಡಿ ಎಂದು ಅವರಿಗೆ ಹೇಳಿದರೆ ಆಯಿತು. ಸರ್ಕಾರ ಸೂಚನೆ ನೀಡಿ ಕೇಸ್‌ ವಾಪಸ್‌ ತೆಗೆದುಕೊಂಡರೆ ಆಯಿತು. ಈ ಕಾಯ್ದೆ ಏಕೆ ಬೇಕಾಗಿತ್ತು? ಎಂದು ಪ್ರಶ್ನಿಸಿದರು.

ಈ ಕಾಯ್ದೆಯ ಮೂಲಕ, ರಾಜ್ಯದ ಬಹಳಷ್ಟು ಭಾಗಗಳಲ್ಲಿ ಭೂ ಕಬಳಿಕೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರವನ್ನೇ ಹಿಂಪಡೆಯಲಾಗುತ್ತಿದೆ. ಇದು ಭೂಗಳ್ಳರನ್ನು ರಕ್ಷಿಸಿ, ಸಾಮಾನ್ಯರನ್ನು ಶಿಕ್ಷಿಸಿದಂತಾಗುತ್ತದೆ ಎಂದರು.

ಇದೇ ಅಭಿಪ್ರಾಯವನ್ನು ಗೂಳಿಹಟ್ಟಿ ಶೇಖರ್‌, ಶಿವಲಿಂಗೇಗೌಡ ಅವರೂ ವ್ಯಕ್ತಪಡಿಸಿದರು. ಈ ಕಾಯ್ದೆ ಜಾರಿಗೆ ತರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಡೆ ಹಿಡಿದು, ಇದಕ್ಕೆ ಒಂದು ಸಮಿತಿ ರಚಿಸಿ ನಂತರ ಮಂಡಿಸಿ ಒಪ್ಪಿಗೆ ಪಡೆಯಲಿ ಎಂದರು.

ಈ ಎಲ್ಲ ಸಂದರ್ಭದಲ್ಲೂ ಬಿಜೆಪಿಯ ಕೆ.ಜಿ. ಭೋಪಯ್ಯ ಅವರು ಎದ್ದುನಿಂತು ಈ ತಿದ್ದುಪಡಿಯನ್ನು ಬಲವಾಗಿ ಸಮರ್ಥನೆ ಮಾಡಿಕೊಂಡರು. ದಯಮಾಡಿ ಕಾಯ್ದೆಗೆ ಒಪ್ಪಿಗೆ ನೀಡಬೇಕು ಎಂದು ಸ್ವತಃ ತಾವೇ ಕಂದಾಯ ಸಚಿವರು ಎನ್ನುವಂತೆ ಭಾಸವಾಗುವ ರೀತಿಯಲ್ಲಿ ಸದಸ್ಯರಲ್ಲಿ ಬೇಡಿಕೆ ಇಟ್ಟರು. ಆದರೆ ಕಂದಾಯ ಸಚಿವ ಆರ್‌. ಅಶೋಕ್‌ ಮಾತ್ರ ಎಲ್ಲರ ಮಾತನ್ನೂ ಕೇಳಿಸಿಕೊಳ್ಳುತ್ತ ಸುಮ್ಮನಿದ್ದರು.

ಕೊನೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕಾಯ್ದೆಯ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ತಿಳಿಸಲಾಗಿಲ್ಲ. ಬಿಬಿಎಂಪಿ ನಂತರ 18 ಕಿ.ಮೀ., ಮುನಿಸಿಪಾಲಿಟಿ ಕಾಯ್ದೆ ವ್ಯಾಪ್ತಿಯಿಂದ 10 ಕಿ.ಮೀ., ನಗರ ಸ್ಥಳೀಯ ಸಂಸ್ಥೆಗಳಿಂದ 5 ಕಿ.ಮೀ. ಹಾಗೂ ಪುರಸಭೆಗಳಿಂದ 3 ಕಿ.ಮೀ. ವ್ಯಾಪ್ತಿಯನ್ನು ನಿಗದಿಗೊಳಿಸಬೇಕು. ತಿದ್ದುಪಡಿಗಳ ನಂತರ ಈ ಕಾಯ್ದೆಯನ್ನು ಗುರುವಾರ ತೆಗೆದುಕೊಳ್ಳೋಣ ಎಂದು ಸ್ಪೀಕರ್‌ ಕಾಗೇರಿ ಅವರಲ್ಲಿ ಮನವಿ ಮಾಡಿದರು. ಅದಕ್ಕೆ ಕಾಗೇರಿ ಒಪ್ಪಿಗೆ ಸೂಚಿಸಿದರು.

ಇದನ್ನೂ ಓದಿ | ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ; ಸಂಪುಟದಿಂದ ಕೈಬಿಡಿ ಎಂದ ಎಸ್.ಆರ್.ಹಿರೇಮಠ್

Exit mobile version