ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಒತ್ತುವರಿ ಪ್ರಕರಣವೊಂದು ಹೊಸನಗರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವೇಳೆ ಎಫ್‌ಐಆರ್ (ಪ್ರಥಮ ವರ್ತಮಾನ ವರದಿ) ಬಗ್ಗೆ ನ್ಯಾಯಾಧೀಶರಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಎಫ್‌ಐಆರ್ ದಾಖಲು ಅಧಿಕಾರ ಯಾರಿಗೆ ಇದೆ? ಯಾವ ನಿಯಮದಲ್ಲಿ ನೀಡಲಾಗಿದೆ ಎಂಬಿತ್ಯಾದಿ ಅಂಶಗಳು ಚರ್ಚೆಯಾಗಿವೆ. ಕೊನೆಗೆ ಇದುವರೆಗೂ ರೂಢಿಯಲ್ಲಿರುವ ಪ್ರಕರಣ ದಾಖಲು ವ್ಯವಸ್ಥೆಯಲ್ಲಿಯೇ ಲೋಪ ಇರುವುದನ್ನು ನ್ಯಾಯಾಧೀಶರು ಎತ್ತಿಹಿಡಿದಿದ್ದಾರೆ. ಅಲ್ಲದೆ, ಕಾನೂನು ಪಾಠವನ್ನು (Law Point) ಮಾಡಿದ್ದಾರೆ.
ಹೊಸನಗರ ನ್ಯಾಯಾಲಯದಲ್ಲಿ ಇಂಥದ್ದೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದ್ದು, ನ್ಯಾಯಾಧೀಶರು ಅರಣ್ಯ ಇಲಾಖೆ ಸಿಬ್ಬಂದಿ ಕಾನೂನಿನ ಪಾಠ ಮಾಡಿದ್ದಾರೆ. ಅಲ್ಲದೆ, ಅವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮೌನವೇ ಉತ್ತರವಾಗಿತ್ತು. ಅರಣ್ಯ ರಕ್ಷಕರು ಮತ್ತು ಉಪವಲಯ ಅರಣ್ಯಾಧಿಕಾರಿಗಳಿಗೆ ಪ್ರಥಮ ಮಾಹಿತಿ ವರದಿ ದಾಖಲಿಸಲು ಯಾವ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಏನೂ ಉತ್ತರ ಬಾರದೇ ಇದ್ದಾಗ, ಈವರೆಗೆ ಅನುಸರಿಸುತ್ತಿರುವ ಪ್ರಕ್ರಿಯೆಯೇ ತಪ್ಪು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಪ್ರಕ್ರಿಯೆ ಹೀಗಿದೆ.
ಇದನ್ನೂ ಓದಿ | ಮರುಘಾಶ್ರೀ ಪ್ರಕರಣ | ಸೆಲ್ಫ್ ಚೆಕ್‌ಗೆ ಸಹಿ ಹಾಕಲು ಷರತ್ತುಬದ್ಧ ಅನುಮತಿ; ಅಕ್ಟೋಬರ್‌ಗೆ ಮಾತ್ರವೆಂದ ಹೈಕೋರ್ಟ್
ನ್ಯಾಯಾಧೀಶರು: ಅರಣ್ಯ ರಕ್ಷಕರು ಮತ್ತು ಉಪವಲಯ ಅರಣ್ಯಾಧಿಕಾರಿಗಳಿಗೆ ಪ್ರಥಮ ಮಾಹಿತಿ ವರದಿ ದಾಖಲಿಸಲು ಯಾವ ನಿಯಮದಲ್ಲಿ ಅವಕಾಶ ನೀಡಲಾಗಿದೆ?
ಅರಣ್ಯ ಇಲಾಖೆ ಸಿಬ್ಬಂದಿ: ಮಾನ್ಯ ನ್ಯಾಯಾಧೀಶರೇ, ನಮಗೆ ನಮ್ಮ ಅರಣ್ಯ ಕೈಪಿಡಿಯಲ್ಲಿ ಅರಣ್ಯ ರಕ್ಷಕ, ಉಪ ವಲಯ ಅರಣ್ಯಾಧಿಕಾರಿ ಸಮೇತ ಎಲ್ಲ ಅರಣ್ಯ ಅಧಿಕಾರಿಗಳೂ ಎಫ್‌ಐಆರ್ ದಾಖಲಿಸಬಹುದು.
ನ್ಯಾಯಾಧೀಶರು: ಅನುಮತಿ ಇದ್ದರೆ ನನಗೆ ತೋರಿಸಿ. ಅರಣ್ಯ ಕೈಪಿಡಿ ನಿಮ್ಮ ಅಧಿಕಾರಿಗಳು ಬರೆದಿರುವ ಒಂದು ಪುಸ್ತಕ ಅಷ್ಟೇ. ನ್ಯಾಯಾಲಯ ಅವುಗಳನ್ನೆಲ್ಲ ಕೇಳುವುದಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ: ಮಾನ್ಯರೇ, ನಮಗೆ ತರಬೇತಿ ಸಮಯದಲ್ಲೂ ಇದನ್ನೇ ಹೇಳಿ ಕೊಟ್ಟಿರುವುದು. ದಯಮಾಡಿ ಎಫ್‌ಐಆರ್ ಅನ್ನು ಸ್ವೀಕರಿಸಿ.
ನ್ಯಾಯಾಧೀಶರು: ಇಲ್ಲ ಸಾಧ್ಯವೇ ಇಲ್ಲ, ನಿಮ್ಮ 1963 ಆ್ಯಕ್ಟ್ 62ರಲ್ಲಿ ಯಾರು ಏನು ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಸಿಆರ್‌ಪಿಸಿ 154 ರಿಂದ 157 ರಲ್ಲಿ ಕೂಡ ಬರೆಯಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ: ಮೌನ
ನ್ಯಾಯಾಧೀಶರು: ಅದರಲ್ಲಿ ಏನು ಬರೆದಿದೆ ಎಂದು ನಿಮಗೆ ಗೊತ್ತಿದೆಯೇ? ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಯಾರು ಕಚೇರಿ ಮುಖ್ಯಸ್ಥ ಇರುತ್ತಾರೋ ಅವರೇ ಎಫ್‌ಐಆರ್ ದಾಖಲಿಸಬೇಕು, ಅವರೇ ತನಿಖೆ ಮಾಡಬೇಕು ಎಂದಿದೆ. ಹಾಗಾದರೆ ನೀವು ಕಚೇರಿ ಮುಖ್ಯಸ್ಥರೇ?
ಅರಣ್ಯ ಇಲಾಖೆ ಸಿಬ್ಬಂದಿ: ಮೌನ
ನ್ಯಾಯಾಧೀಶರು: ನ್ಯಾಯಾಲಯಕ್ಕೆ ಕೈಪಿಡಿ ಮುಖ್ಯವಲ್ಲ, ಕಾನೂನು ಮುಖ್ಯ. ಭಾರತದ ಸಂವಿಧಾನವೂ ಅತಿ ಮುಖ್ಯ. ನೀವು ಸರಿಯಾಗಿ ತಿಳಿಸಿದರೆ ನಿಮ್ಮ ಎಫ್‌ಐಆರ್ ಅನ್ನು ಸ್ವೀಕರಿಸುತ್ತೇನೆ. ಇಲ್ಲವಾದರೆ ವಾಪಸ್ ಹೋಗಿ.
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪರಿಪರಿಯಾಗಿ ಮನವಿ ಮಾಡಿ ನ್ಯಾಯಾಧೀಶರನ್ನು ಒಪ್ಪಿಸಿ ಎಫ್‌ಐಆರ್ ನೀಡಿ ಬಂದಿದ್ದಾರೆ. ಆದರೆ ಈ ವೇಳೆ ಮಾತನಾಡಿದ ನ್ಯಾಯಾಧೀಶರು, “ನಿಮ್ಮ ಹಿರಿಯ ಅಧಿಕಾರಿಗಳಿಗೆ ಇದರ ಬಗ್ಗೆ ಈಗಾಗಲೇ ಹೇಳಲಾಗಿದೆ. ಅವರು ನಿಮಗೆ ಹೇಳಲಿಲ್ಲವೇ? ನಿಮಗೆ 3 ದಿನಗಳ ಕಾಲಾವಕಾಶ ನೀಡುತ್ತೇನೆ. ನೀವು ಸರಿಯಾಗಿ ಉತ್ತರ ಕೊಡದೆ ಇದ್ದರೆ ಮುಂದೆ ಯಾವುದೇ ಎಫ್‌ಐಆರ್ ಅನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಏನೂ ಉತ್ತರಿಸಲಾಗದೆ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ತೆರಳಿದ್ದಾರೆ.
ಈಗ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಮೂಡಿರುವ ಪ್ರಶ್ನೆ
1. ಈಗ ನ್ಯಾಯಾಧೀಶರು ಕೇಳಿರುವುದು ಸರಿಯೋ? ಇಲ್ಲವೇ ನಮಗೆ ತರಬೇತಿಯಲ್ಲಿ ಕಲಿಸಿದ್ದು ಸರಿಯೋ?
2. ದಶಕಗಳಿಂದ ನಾವು ಅನುಸರಿಸಿ ಬರುತ್ತಿರುವ ವಿಧಾನ ತಪ್ಪೇ?
3. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರು ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳು ಇನ್ನು ಮುಂದೆ ಎಫ್‌ಐಆರ್ ದಾಖಲು ಮಾಡುವ ಹಾಗಿಲ್ಲವೇ? ಪ್ರಕರಣ ದಾಖಲಿಸಬೇಕಾದರೆ ಯಾವ ನಿಯಮದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು?
4. ಇನ್ನು ಇಷ್ಟು ವರ್ಷ ದಾಖಲಿಸಿದ ಮೊಕದ್ದಮೆಗಳ ಪರಿಸ್ಥಿತಿ ಏನು?
ಇದನ್ನೂ ಓದಿ | ಹುಡುಗಿ ಒಂದು ವರ್ಷದಲ್ಲಿದ್ದಾಗ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ರದ್ದುಗೊಳಿಸಿದ ನ್ಯಾಯಾಲಯ