ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೇಲೂರು ಹೋಬಳಿಯ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ (Bande seer suicide) ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ನಿವೃತ್ತ ಶಿಕ್ಷಕ ಮತ್ತು ವಕೀಲ ಎಂ ಮಹದೇವಯ್ಯಗೆ ಈಚೆಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಮಹದೇವಯ್ಯ ಮೂರನೇ ಆರೋಪಿ. ರೇಣುಕಾರಾಧ್ಯ (ಮೃತ್ಯುಂಜಯ ಸ್ವಾಮಿ), ಜೆ ಚಂದು ಅಲಿಯಾಸ್ ನೀಲಾಂಬಿಕೆ ಮೊದಲೆರಡು ಆರೋಪಿಗಳು
ಅರ್ಜಿದಾರರು ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪೂರ್ವಾನುಮತಿ ಇಲ್ಲದೆ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ರಜಾಕಾಲೀನ ಪೀಠವು ಜಾಮೀನು ನೀಡುವ ವೇಳೆ ಷರತ್ತು ವಿಧಿಸಿದೆ.
ಜಾಮೀನು ನೀಡಲು ಕಾರಣವಾದ ಅಂಶ ಯಾವುದು?
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ಅವರು, “ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಮೃತ ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿಲ್ಲ. ಸ್ವಾಮೀಜಿ ಜೊತೆಗಿನ ಮಾತುಕತೆ ಕುರಿತ ದೃಶ್ಯಗಳನ್ನು ಒಳಗೊಂಡ ಪೆನ್‌ಡ್ರೈವ್ ಅನ್ನು ಎರಡನೇ ಆರೋಪಿಯಿಂದ ಪಡೆದು ನಾಲ್ಕನೆ ಆರೋಪಿಗೆ ನೀಡಿದ ಆರೋಪ ಮಹದೇವಯ್ಯ ಮೇಲಿದೆ. ಅಂದ ಮಾತ್ರಕ್ಕೆ ಸ್ವಾಮೀಜಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಕೃತ್ಯ ಎಸಗಿದಂತಾಗುವುದಿಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು” ಎಂದು ಕೋರಿದ್ದರು.
ಬಂಡೆ ಮಠದ ಕೊಠಡಿಯಲ್ಲಿ ನಡೆದಿತ್ತು ಆತ್ಮಹತ್ಯೆ
ಬಸವಲಿಂಗ ಸ್ವಾಮೀಜಿ ಬಂಡೆಮಠದ ತಮ್ಮ ಕೊಠಡಿಯಲ್ಲಿ 2022ರ ಅಕ್ಟೋಬರ್ 23ರಂದು ರಾತ್ರಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಅಕ್ಟೋಬರ್ 24ರ ಬೆಳಗ್ಗೆ 7 ಗಂಟೆಗೆ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಠಾಣಾ ಪೊಲೀಸರು, ಮೃತ ಸ್ವಾಮೀಜಿಯ ಮರಣ ಪತ್ರ ಆಧರಿಸಿ ರೇಣುಕಾರಾಧ್ಯ (ಮೃತ್ಯುಂಜಯ ಸ್ವಾಮಿ), ಜೆ ಚಂದು ಅಲಿಯಾಸ್ ನೀಲಾಂಬಿಕೆ, ನಿವೃತ್ತ ಶಿಕ್ಷಕ ಎಂ ಮಹದೇವಯ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಬಿ.ಸಿ ಸುರೇಶ್ ಅವರನ್ನು ಬಂಧಿಸಿದ್ದರು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಅಪರಾಧಿಕ ಒಳಸಂಚು ರೂಪಿಸಿದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿತ್ತು. 2022ರ ಅಕ್ಟೋಬರ್ 30ರಿಂದ ನ್ಯಾಯಾಂಗ ಬಂಧನದಲ್ಲಿರುವ ಮಹದೇವಯ್ಯ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್ 9ರಂದು ರಾಮನಗರ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ | ವಿಸ್ತಾರ ಅಂಕಣ| ಪರಮ ಸಹಿಷ್ಣು ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !