ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಲು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಲೆಹರ್ ಸಿಂಗ್ ಸಲಹೆ ನೀಡಿದ್ದಾರೆ. ಈ ಸಂಬಂಧ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಶ್ರೀಗಳ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯದ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ವಿಷಾದಕರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿ ಬಾರಿ ಇಂಥ ಘಟನೆಗಳು ಸಂಭವಿಸಿದಾಗ, ನಮ್ಮದೇ ಪರಿಸರ ಮತ್ತು ನಮ್ಮದೇ ಜನ ಮೇಲಿನ ನಮ್ಮ ನಂಬಿಕೆಯನ್ನೇ ಅಲುಗಾಡಿಸಿಬಿಡುತ್ತದೆ. ಒಂದು ಸಮಾಜವಾಗಿ ಇಂಥ ಆಪಾದನೆಗಳ ಬಗ್ಗೆ ಸಮಗ್ರವಾಗಿ ಮತ್ತು ಪಕ್ಷಪಾತರಹಿತವಾಗಿ ತನಿಖೆ ನಡೆಸಬೇಕು ಎಂಬ ನಿಲುವನ್ನು ತಾಳಬೇಕಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಯಾವುದೇ ರೀತಿಯ ಒತ್ತಡ, ರಾಜಕೀಯ ಮತ್ತು ಹಸ್ತಕ್ಷೇಪಗಳು ಇರದಂತೆ ಕರ್ನಾಟಕ ಸರಕಾರ ಮತ್ತು ಎಲ್ಲ ರಾಜಕೀಯ ಪಕ್ಷಗಳು ನೋಡಿಕೊಳ್ಳಬೇಕಾಗಿದೆ. ಆ ಹೆಣ್ಮಕ್ಕಳಿಗೆ ನ್ಯಾಯ ಬಿಟ್ಟು ಬೇರೇನೂ ಬೇಕಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಒಂದೊಮ್ಮೆ ಈ ಪ್ರಕರಣವನ್ನು ಕರ್ನಾಟಕದಿಂದ ಹೊರಗೆ ವರ್ಗಾವಣೆ ಮಾಡಿದರೆ ಒಳ್ಳೆಯ ರೀತಿಯ ನ್ಯಾಯ ಸಿಗಬಹುದು ಎಂಬ ಬಗ್ಗೆ ಸಣ್ಣ ನಂಬಿಕೆ ಇದ್ದರೂ ಸಾಕು, ಇದನ್ನು ಪರಿಗಣಿಸಬಹುದು ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
ಹಾಲಿ ಪ್ರಕರಣದಲ್ಲಿ ಹಾಗಾಗಬಹುದು, ಹೀಗಾಗಬಹುದು ಎಂಬ ಗ್ರಹಿಕೆಗಳು ಮಾತ್ರವಲ್ಲ, ಸಾಮಾಜಿಕ ಆರೋಗ್ಯದ ಪುನಸ್ಥಾಪನೆಯ ನಿಟ್ಟಿನಲ್ಲೂ ಮಹತ್ವವನ್ನು ಪಡೆದಿದೆ. ಹಾಗಾಗಿ ನಮಗೆ ಮತ್ತು ನಿಮಗೆಲ್ಲರಿಗೂ ಒಂದು ದೊಡ್ಡ ಪಾತ್ರವಿದೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
ಮತ್ತೊಂದು ಮನವಿ
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಕೂಡಾ ಇದೇ ರೀತಿಯ ಮನವಿ ಮಾಡಿದ್ದು, ರಾಜ್ಯದಲ್ಲಿ ಶ್ರೀಗಳ ಪ್ರಭಾವ ಇರುವುದರಿಂದ ತನಿಖೆ ಹಾದಿ ತಪ್ಪಬಹುದು. ಹೀಗಾಗಿ ಬೇರೆ ರಾಜ್ಯಕ್ಕೆ ವರ್ಗಾಯಿಸುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ. ಸಿಎಂ ಬೊಮ್ಮಾಯಿ, ಗೃಹ ಸಚಿವರು ಹಾಗೂ ಪೊಲೀಸ್ ಕಮಿಷನರ್‌ಗೆ ಬರೆದ ಪತ್ರದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.