Site icon Vistara News

Leopard trapped | ಮಂಡ್ಯದ ಮರಕಾಡದೊಡ್ಡಿಯಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷ; ರಾಮನಗರದಲ್ಲಿ ಬೆಳಗ್ಗೆ ಬೋನಿಗೆ ಬಿತ್ತು!

ಚನ್ನಪಟ್ಟಣದಲ್ಲಿ ಬೋನಿಗೆ ಬಿದ್ದ ಚಿರತೆ

ಮಂಡ್ಯ/ರಾಮನಗರ: ಮೈಸೂರಿನಿಂದ ಬೆಂಗಳೂರಿನವರೆಗೆ ಚಿರತೆಗಳ ಹಾವಳಿ (Leopard trapped) ಜೋರಾಗಿದೆ. ಸಕ್ಕರೆ ನಾಡು ಮಂಡ್ಯದ ಮರಕಾಡದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದರೆ ರಾಮನಗರದಲ್ಲಿ ಬೆಳಗ್ಗೆ ಚಿರತೆಯೊಂದು ಬೋನಿಗೆ ಬಿದ್ದಿದೆ. ಮೈಸೂರಿನ ಟಿ. ನರಸೀಪುರದಲ್ಲಿ ಶುಕ್ರವಾರ ಸಂಜೆ ಮಹಿಳೆಯೊಬ್ಬರು ಚಿರತೆಗೆ ಬಲಿಯಾಗಿದ್ದರು.

ಚಿರತೆ ಕಂಡು ಗ್ರಾಮಸ್ಥರು ಆತಂಕ!
ಮಂಡ್ಯ ತಾಲ್ಲೂಕಿನ ಮರಕಾಡದೊಡ್ಡಿ ಗ್ರಾಮದ ಸುರೇಶ್ ಎಂಬುವವರ ಮನೆಯ ಕಾಂಪೌಂಡ್ ಮೇಲೆ ರಾತ್ರಿ ಚಿರತೆ ಕಾಣಿಸಿಕೊಂಡಿದೆ. ಯಾವುದೇ ಎಗ್ಗಿಲ್ಲದೆ ಕಾಂಪೌಂಡ್‌ ಮೇಲೆ ಬಂದು ಕುಳಿತ ಚಿರತೆ ಏನು ಸಿಗಬಹುದು, ಹೇಗೆ ದಾಳಿ ಮಾಡಬಹುದು ಎಂದು ಪ್ಲ್ಯಾನ್‌ ಮಾಡುತ್ತಿರುವಂತೆ ಕಾಣಿಸುತ್ತಿದೆ. ಈ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಿತರಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿರತೆ ಸೆರೆಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದು, ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಬೋನು ಇಟ್ಟಿದೆ.

ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ
ಇತ್ತ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಉಜ್ಜನಹಳ್ಳಿ ಗ್ರಾಮದ ತೋಟದಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬೋನು ಸಹಿತ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ | Leopard attack: ಮನೆ ಹೊರಗೆ ಸೌದೆ ತರಲು ಹೋದ ಮಹಿಳೆ ಚಿರತೆಗೆ ಬಲಿ; ಮೈಸೂರಲ್ಲಿ ಇದು ಮೂರನೇ ಸಾವು

Exit mobile version