Site icon Vistara News

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರು ವಾಪಸ್‌, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

krs brindavan garden Leopard not found

ಮಂಡ್ಯ: ಕೆಆರ್‌ಎಸ್ ಬೃಂದಾವನದ ಗುಡ್ಡದ ಭಾಗದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರನ್ನು ತಕ್ಷಣವೇ ಅಲ್ಲಿಂದ ವಾಪಸ್‌ ಕಳುಹಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಕೆಆರ್‌ಎಸ್‌

ಶನಿವಾರ ವಾರಂತ್ಯವೂ ಆಗಿದ್ದರಿಂದ ಕೆಆರ್‌ಎಸ್‌ ಬೃಂದಾವನಕ್ಕೆ ಸಾಕಷ್ಟು ಪ್ರವಾಸಿಗರು ತಮ್ಮ ಕುಟುಂಬ ಸಮೇತ ಬಂದಿದ್ದರು. ಬೃಂದಾವನ, ಬೋಟಿಂಗ್‌ ಪಾಯಿಂಟ್‌ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಹಂಗಮಿಸಿ ಮೋಜಿನಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಅಲ್ಲಿಗೆ ಚಿರತೆಯೊಂದು ಬಂದಿರುವ ಸುದ್ದಿ ತಿಳಿದಿದೆ. ಇದು ಪ್ರವಾಸಿಗರಿಗೆ ಆತಂಕ ಹುಟ್ಟಿಸಿದೆ. ಅಲ್ಲದೆ, ಕೆಆರ್‌ಎಸ್‌ ಸಿಬ್ಬಂದಿ ಸಹ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ವಾಪಸ್‌ ತೆರಳುವಂತೆ ಸೂಚಿಸಿದ್ದಾರೆ. ಹೀಗಾಗಿ ಪ್ರಾಣ ಉಳಿಸಿಕೊಂಡರೆ ಸಾಕು ಎಂಬ ನಿಟ್ಟಿನಲ್ಲಿ ಎಲ್ಲರೂ ಮರುಕ್ಷಣವೇ ಅಲ್ಲಿಂದ ತೆರಳಿದ್ದಾರೆ.

ಕೆಆರ್‌ಎಸ್‌

ಹೋಟೆಲ್‌ಗಳಿಂದಲೂ ಹೊರಗೆ ಬರುವಂತಿಲ್ಲ
ಕೆಆರ್‌ಎಸ್‌ ಬೃಂದಾವನದ ಆವರಣದಲ್ಲಿ ಎರಡು ಹೋಟೆಲ್‌ಗಳಿದ್ದು, ಎರಡರಲ್ಲೂ ಇರುವ ಅತಿಥಿಗಳು ಹೊರಗೆ ಸಂಚರಿಸದಂತೆ ಕ್ರಮವಹಿಸಲಾಗಿದೆ. ಇನ್ನು ಕೆಲವರು ಚಿರತೆ ಬಂದಿರುವ ಸುದ್ದಿ ತಿಳಿದು ರೂಮ್‌ ತೆರವುಗೊಳಿಸಿ ತಮ್ಮ ವಾಹನಗಳಲ್ಲಿ ವಾಪಸಾಗಿದ್ದಾರೆ.

ಕೆಆರ್‌ಎಸ್‌

ಪ್ರವೇಶಕ್ಕೆ ನಿರ್ಬಂಧ
ಮುಂಜಾಗ್ರತಾ ಕ್ರಮವಾಗಿ ಕಾವೇರಿ ನೀರಾವರಿ ನಿಗಮವು ಬೃಂದಾವನಕ್ಕೆ ಪ್ರವೇಶವನ್ನು ನಿರಾಕರಿಸಿದೆ. ಮಧ್ಯಾಹ್ನದ ವೇಳೆಗೆ ಸಿಬ್ಬಂದಿ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಬೃಂದಾವನದಲ್ಲಿ ಬೋನ್‌ ಅಳವಡಿಸಿ ಚಿರತೆ ಸೆರೆಗೆ ಮುಂದಾಗಲಾಗಿದೆ.

ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಬೃಂದಾವನದಲ್ಲಿ ಈಗಾಗಲೇ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಇದರ ಮೇಲೆ ನಿಗಾವಹಿಸಲಾಗಿದೆ. ಇದೇ ವೇಳೆ, ಕೆಆರ್‌ಎಸ್‌ ಬೃಂದಾವನ ಸೇರಿದಂತೆ ಸುತ್ತಮುತ್ತಲು ಕೆಲಸ ಮಾಡುತ್ತಿರುವ ಸಿಬ್ಬಂದಿ ಭಯಭೀತಗೊಂಡಿದ್ದಾರೆ.

Exit mobile version