Site icon Vistara News

Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Life threat

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆ (Life threat) ಸಂದೇಶ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಎಂಬ ಹೆಸರಿನ ಮೇಲ್ ಐಡಿಯಿಂದ ಬಂದಿರೋ ಬೆದರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಗೋಕುಲ ರೋಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್‌ ಕುಮಾರ ಶ್ರೀಪಾದಗೆ ಬೆದರಿಕೆ ಮೇಲ್ ಬಂದಿದೆ. ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಎಂಬ ಹೆಸರಿನ ಮೇಲ್ ಐಡಿಯಿಂದ ನಿರ್ದೇಶಕರ ಕಚೇರಿಯ ಮೇಲ್ ಐಡಿಗೆ ಸಂದೇಶ ಬಂದಿದ್ದು, ” ನಾವು ನಿಮ್ಮನ್ನು ನಾಶ ಮಾಡುತ್ತೇವೆ, ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರಿ” ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರಾ ಎಂದು ಬೆದರಿಕೆ ಸಂದೇಶ ಬಂದಿದೆ.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

ಈ ಬಗ್ಗೆ ಟರ್ಮಿನಲ್‌ ಉಸ್ತುವಾರಿ ಪ್ರತಾಪ ಅವರ ಗಮನಕ್ಕೆ ರೂಪೇಶ್‌ ಕುಮಾರ್‌ ತಂದಿದ್ದಾರೆ. ನಂತರ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಗೋಕುಲ ರೋಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂದೇಶ ಕಳುಹಿಸಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರಿಗೆ ಗಾಯ

ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ನಗರದ ಕಾಶಿಪುರದಲ್ಲಿ ನಡೆದಿದೆ. ಗಣೇಶ್ ಹಾಗೂ ರಾಜು ಗಾಯಾಳುಗಳು.

ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿಯನ್ನು ರಾಜು ಮುಟ್ಟಿದ್ದಾನೆ. ರಾಜುವನ್ನು ರಕ್ಷಿಸಲು ಹೋಗಿ ಗಣೇಶ್‌ಗೂ ಶಾಕ್‌ ಹೊಡೆದಿದೆ. ಹೀಗಾಗಿ ಗಾಯಗೊಂಡ ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕದ ಪ್ರವಾಸಿಗರಿಗೆ ಬಾಸುಂಡೆ ಬರುವಂತೆ ಥಳಿಸಿದ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ; ಹಣ ಸುಲಿಗೆ

sural falls assault case

ಬೆಳಗಾವಿ: ಕರ್ನಾಟಕದ ಪ್ರವಾಸಿಗರನ್ನು (Karnataka Tourists) ಗೋವಾದ ಅರಣ್ಯ ಇಲಾಖೆ (Goa Forest department) ಸಿಬ್ಬಂದಿ ಮನಬಂದಂತೆ ಥಳಿಸಿದ (Assault Case) ಘಟನೆ ಗೋವಾ ಗಡಿಯಲ್ಲಿರುವ ಸೂರಲ್ ಜಲಪಾತದ (Sural Falls) ಬಳಿ ನಡೆದಿದೆ. ಜಲಪಾತ ವೀಕ್ಷಣೆಗೆ ಹೋಗಿದ್ದ ಕನ್ನಡದ ಪ್ರವಾಸಿಗರಿಗೆ ಮೈಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿ, ಅವರಿಂದ ಹಣ ಕಿತ್ತುಕೊಂಡು ವಿಕೃತಿ ಮೆರೆದಿದ್ದಾರೆ.

ಬೆಳಗಾವಿ ಮತ್ತು ಗೋವಾ ಗಡಿಯಲ್ಲಿರುವ ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಸೂರಲ್ ಜಲಪಾತ ಬಳಿ ಇದು ನಡೆದಿದೆ. ಮಳೆಗಾಲ ಆರಂಭ ಆಗುತ್ತಿದ್ದಂತೆ ಕರ್ನಾಟಕದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುವುದಲ್ಲದೆ, ಪ್ರಶ್ನಿಸಿದರೆ ಮೈಮೇಲೆ ಏರಿ ಬರುತ್ತಾರೆ.

ನಿರಂತರವಾಗಿ ಪ್ರವಾಸಿಗರಿಂದ ಒಂದಿಲ್ಲೊಂದು ಕಾರಣ ಹೇಳಿ ಹಣ ಕಿತ್ತುಕೊಳ್ಳುತ್ತಿರುವ ಆರೋಪ ಇವರ ಮೇಲಿದೆ. ಸೂರಲ್ ಜಲಪಾತದ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಣ ವಸೂಲಿ ಆರೋಪ ಮೊದಲಿನಿಂದಲೂ ಇದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರದ ಐವರು ಯುವಕರ ತಂಡವನ್ನು ಇವರು ತಡೆದು ಥಳಿಸಿದ್ದಾರೆ. ಬೆನ್ನು, ಕಾಲು ಕೈಗೆ ಬಾಸುಂಡೆ ಬರುವ ಹಾಗೆ ಥಳಿಸಿ ವಿಕೃತಿ ತೋರಿದ್ದಾರೆ.

ಇದನ್ನೂ ಓದಿ | Viral Video : ‘ಅಲ್ಲಾಹು ಅಕ್ಬರ್’ ಎನ್ನದ ಹಿಂದೂ ಬಾಲಕನಿಗೆ ಎಂಜಲು ನೆಕ್ಕಲು ಹೇಳಿದ ಮುಸ್ಲಿಂ ಯುವಕರು

ಹಲ್ಲೆ ಮಾಡಿದ್ದಲ್ಲದೇ ಪರ್ಸ್‌ನಲ್ಲಿದ್ದ ಹಣವನ್ನೂ ಕಿತ್ತುಕೊಂಡಿದ್ದಾರೆ. 1 ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದು ಸೇರಿ ಒಟ್ಟು 9 ಸಾವಿರ ರೂಪಾಯಿ ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯವನ್ನು ಸಾವಿರಾರು ಪ್ರವಾಸಿಗರು ಅನುಭವಿಸುತ್ತಿದ್ದು, ಯಾರೂ ದೂರು ನೀಡುತ್ತಿಲ್ಲ ಎಂದು ಹಲ್ಲೆಗೊಳಗಾದವರು ಅಲವತ್ತುಕೊಂಡಿದ್ದಾರೆ. ಗೋವಾ ಅರಣ್ಯ ಇಲಾಖೆಯ ಅಧಿಕಾರಿಗಳು ಇವರ ದೂರನ್ನು ಕೇಳಿಸಿಕೊಂಡಿಲ್ಲ.

Exit mobile version