Site icon Vistara News

Self Harm: ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಕಾರಣರಾದ ಸಾಕುಮಗಳು, ಪ್ರಿಯಕರ ಬಂಧನ

liladhara shetty couple self harm culprits

ಉಡುಪಿ: ಸಮಾಜ ಸೇವಕ ಕೆ.ಲೀಲಾಧರ ಶೆಟ್ಟಿ ದಂಪತಿಯ ಆತ್ಮಹತ್ಯೆಗೆ (Self Harm) ಕಾರಣರಾದ ಸಾಕು ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಕಾಪು ಪೊಲೀಸರು ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಕುಪುತ್ರಿ ಪ್ರಿಯಕರನ ಜೊತೆ ಮನೆಯಿಂದ ಪರಾರಿಯಾದ ಕಾರಣ ಕೆ.ಲೀಲಾಧರ ಶೆಟ್ಟಿ ದಂಪತಿ ಮನನೊಂದು, ಮರ್ಯಾದೆಗೆ ಅಂಜಿ ನೇಣಿಗೆ ಶರಣಾಗಿದ್ದರು. ಇದನ್ನು ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದರು ಎನ್ನಲಾಗಿದೆ. ಇದೀಗ ಪ್ರಿಯಕರನ ಜೊತೆ ಪರಾರಿಯಾದ ಅಪ್ರಾಪ್ತ ವಯಸ್ಸಿನ ಸಾಕುಮಗಳು, ಆಕೆಯ ಪ್ರಿಯಕರ ಮತ್ತು ಆತನಿಗೆ ನೆರವಾದ ಇತರ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಬಾಲಕಿಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್ (20), ಆತನಿಗೆ ನೆರವಾದ ರೂಪೇಶ್, ಅಜೀಜ್ ಮತ್ತು ಜಯಂತ್ ಪೊಲೀಸ್ ಬಂಧಿತರು. ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಎರಡು ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗಿರೀಶ್ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಉಳಿದ ಮೂವರ ವಿರುದ್ಧ ಆರೋಪಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಎಸ್ಸೈ ಅಬ್ದುಲ್ ಖಾದರ್, ಕ್ರೈಂ‌ ಎಸ್ಸೈ ಪುರುಷೋತ್ತಮ್ ನೇತೃತ್ವದಲ್ಲಿ ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಲೀಲಾಧರ ಶೆಟ್ಟಿ ದಂಪತಿ 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡಿದ್ದರು. ಈಕೆ ಮನೆ ಕೆಲಸಕ್ಕೆಂದು ಬಂದಿದ್ದಾತನೊಂದಿಗೆ ತೆರಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಲಾಗಿತ್ತು. ಕಳೆದ ಮಂಗಳವಾರ ಮಧ್ಯರಾತ್ರಿ ದಂಪತಿ ಡೆತ್‌ ನೋಟ್‌ ಬರೆದಿಟ್ಟು, ಮನೆಯ ಜಂತಿಗೆ ಒಂದೇ ಸೀರೆಯನ್ನು ಬಿಗಿದುಕೊಂಡು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದರು.

ಕಾಪು ಸಹಿತ ಉಡುಪಿ ಜಿಲ್ಲೆಯಾದ್ಯಂತ ಲೀಲಾಧರ ಶೆಟ್ಟಿ ಸಮಾಜ ಸೇವಕರಾಗಿ, ಕಲಾಪೋಷಕ ಹಾಗೂ ನಟರಾಗಿ ಜನಪ್ರಿಯರಾಗಿದ್ದರು. ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಇಳಿದು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಕಾಪು ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.

ಇದನ್ನೂ ಓದಿ: Self Harm: ಸಮಾಜ ಸೇವಕ, ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

Exit mobile version