ಬೆಂಗಳೂರು: ಎಣ್ಣೆ ಪ್ರಿಯರಿಗೆ ಇದು ಕಹಿ ಸುದ್ದಿ. ರಾಜ್ಯದಲ್ಲಿ ಮದ್ಯದ ದರವನ್ನು ಹೆಚ್ಚಳ (Liquor Price Hike) ಮಾಡಲಾಗಿದೆ. ʻಗ್ಯಾರಂಟಿʼ ಯೋಜನೆಗಳ ಜಾರಿಯ ಖುಷಿಯಲ್ಲಿದ್ದ ಮದ್ಯಪ್ರಿಯರಿಗೆ ಈ ಮೂಲಕ ಸರ್ಕಾರ ಶಾಕ್ ನೀಡಿದೆ.
ಮದ್ಯದ ದರದಲ್ಲಿ ಪ್ರತಿ ಬಾಟಲ್ ಗೆ ರೂ.10 ರಿಂದ 20ರವರೆಗೆ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯವಾಗಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ರಾಜ್ಯ ಸರ್ಕಾರವು ಈ ದರ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಡ್ ವೈಸರ್ ಬಿಯರ್ ದರ ರೂ.198 ರಿಂದ 220ಕ್ಕೆ ಹೆಚ್ಚಳವಾಗಲಿದೆ. ಕಿಂಗ್ ಫಿಷರ್ ಬಿಯರ್ ದರವನ್ನ ರೂ.160ರಿಂದ 170ಕ್ಕೆ ಏರಿಕೆ ಮಾಡಲಾಗಿದೆ. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳ ಮಾಡಲಾಗಿದೆ.
ಸಂಪನ್ಮೂಲ ಕ್ರೋಢೀಕರಣ ಉದ್ದೇಶ
ಈಗ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯವಗಿರುವ ಸಂಪನ್ಮೂಲ ಕ್ರೋಢೀಕರಣದ ಭಾಗವಾಗಿ ಈ ದರ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಅಬಕಾರಿ ಆದಾಯವು 1967-68ರ ಹಣಕಾಸು ವರ್ಷದಲ್ಲಿ 7.11 ಕೋಟಿ ರೂ.ಗಳಿಂದ 2022-23ರ ಹಣಕಾಸು ವರ್ಷದಲ್ಲಿ 29,920.37 ಕೋಟಿ ರೂ.ಗಳಿಗೆ ಏರಿದೆ. 2023-24ರ ಹಣಕಾಸು ವರ್ಷದ ಬಜೆಟ್‌ನಲ್ಲಿ 35,000 ಕೋಟಿ ರೂ. ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.
ಅಬಕಾರಿ ಇಲಾಖೆಯು ಮುಖ್ಯವಾಗಿ ಮದ್ಯ ಬಿಯರ್ ಮತ್ತು ವೈನ್ ಮಾರಾಟದಿಂದ ಸಂಗ್ರಹವಾಗುವ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕದ ಮೂಲಕ ಹಾಗೂ ಮದ್ಯ ಉತ್ಪಾದನಾ ಘಟಕಗಳು ಮತ್ತು ಚಿಲ್ಲರೆ ಮದ್ಯ ಮಾರಾಟ ಸನ್ನದುಗಳ ಮೇಲಿನ ಸನ್ನದು ಶುಲ್ಕದ ಮೂಲಕ ಆದಾಯ ಸಂಗ್ರಹಿಸುತ್ತದೆ. ಈ ಹಿಂದೆ ಅಂದರೆ 2020ರ ಮೇ ನಲ್ಲಿ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿತ್ತು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿರುವ ಸರ್ಕಾರಕ್ಕೆ ಹಣಕಾಸು ಹೊಂದಿಸಲು ಅಬಕಾರಿ ಇಲಾಖೆಯು ಕಂಡಿದೆ. ಹೀಗಾಗಿ ಮದ್ಯದ ದರ ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಿಸಲಾಗುತ್ತಿದೆ. ಅಂದಾಜಿನ ಪ್ರಕಾರ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ಬೇಕಾಗುತ್ತದೆ. ಈ ಹಣವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದರ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ತೆರಿಗೆ ಸಂಗ್ರಹವನ್ನು ಹೆಚ್ಚಿಸಲಾಗುವುದು ಎಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡು ಬಂದಿದ್ದಾರೆ.
ಇದನ್ನೂ ಓದಿ : Electricity bill: ಫ್ರೀ ಕರೆಂಟ್ ಬೆನ್ನಲ್ಲೆ ಜನತೆಗೆ ವಿದ್ಯುತ್ ಬಿಲ್ ಶಾಕ್; ಪ್ರತಿ ಯುನಿಟ್ ದರ ಏರಿಸಿದ ಕೆಇಆರ್‌ಸಿ!