ಬೆಂಗಳೂರು: ಜುಲೈ 1ರಿಂದ ಮದ್ಯದ ಹೊಸ ದರಗಳನ್ನು (Liquor Price Karnataka) ಜಾರಿ ಮಾಡಲು ರಾಜ್ಯದ ಸಿಎಂ ಸಿದ್ದರಾಮಯ್ಯ (CM Siddaramaiah) ಸರಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳಿಗೆ (Guarantee schemes) ಹಣ ಹೊಂಚಲು ಸಿಕ್ಕ ಸಿಕ್ಕಲ್ಲೆಲ್ಲಾ ದರ ಏರಿಕೆ (Price hike) ಮಾಡುತ್ತಿರುವ ಸರಕಾರ, ಇದೀಗ ಬಡವರ ಎಣ್ಣೆ ರೇಟ್ ಏರಿಸಲು ಯೋಚಿಸಿದೆ. ಅದೇ ಸಮಯಕ್ಕೆ, ಶ್ರೀಮಂತರು ಸೇವಿಸುವ ಪ್ರೀಮಿಯಂ ಬ್ರಾಂಡ್‌ಗಳ (Premium liquor) ಮದ್ಯಗಳ ಬೆಲೆ ಇಳಿಕೆಗೂ ಚಿಂತಿಸುತ್ತಿದೆ.
ಈ ಹಿಂದೆ ಜನವರಿ 1ರಂದು ಕಂಪನಿಗಳು ಮದ್ಯದ ದರ ಏರಿಕೆ ಮಾಡಿದ್ದವು. ಓಲ್ಡ್ ಟ್ಯಾವರ್ನ್(ಒಟಿ), ಬ್ಲೆಂಡರ್ಸ್ ಪ್ರೈಡ್ (ಬಿಪಿ), 8 ಪಿಎಂ ಲಿಕ್ಕರ್ ದರಗಳನ್ನು 20 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮದ್ಯದ ದರಗಳನ್ನು ಸರ್ಕಾರ ಏರಿಸಲು ಮುಂದಾಗಿದೆ. ಅದರಲ್ಲೂ ರಾಜ್ಯದ ಕೂಲಿ ಕಾರ್ಮಿಕರು, ಬಡ ವರ್ಗದ ಜನ ಅತೀ ಹೆಚ್ಚು ಸೇವಿಸುವ ಎಣ್ಣೆಗಳ ದರವೇ ಏರಿಕೆಯಾಗಲಿದೆ.
ಹಾಲಿ ಒಟಿ ವಿಸ್ಕಿ 180 mlಗೆ 123 ರೂಪಾಯಿ ಇದೆ. ಜುಲೈ 1ರಿಂದ ಒಟಿ ಬೆಲೆ 130 ರೂಪಾಯಿ ನಿಗದಿಯಾಗಲಿದೆ. 8 ಪಿಎಂ ವಿಸ್ಕಿ 123 ರೂ. ಯಿಂದ 130ಕ್ಕೇರಿಕೆ ಸಾಧ್ಯತೆ ಇದೆ. ಚಾಯ್ಸ್ 80 ರೂಪಾಯಿ ಇದ್ದು ಜುಲೈನಿಂದ 83 ರೂಪಾಯಿ, ಹೈವರ್ಡ್ಸ್ 80 ರೂಪಾಯಿಯಿಂದ 83 ರೂಪಾಯಿ, ಬಿಪಿ ವಿಸ್ಕಿ ದರ ಹಾಲಿ 159 ರೂಪಾಯಿ ಇದ್ದು, ಜುಲೈನಿಂದ 154 ರೂಪಾಯಿ ಆಗುವ ಸಾಧ್ಯತೆ ಇದೆ.
ಇದೇ ವೇಳೆಗೆ ಬೆಲೆಬಾಳುವ ಪ್ರೀಮಿಯಂ ಮದ್ಯಗಳ ದರಗಳಲ್ಲಿ ಇಳಿಕೆಯಾಗುತ್ತಿದೆ. ಕ್ವಾರ್ಟರ್‌ಗೆ 300 ರೂಪಾಯಿ ಮೇಲಿರುವ ಬ್ರ್ಯಾಂಡ್‌ಗಳ ದರ 60ರಿಂದ 100 ರೂಪಾಯಿ ಇಳಿಕೆಯಾಗಲಿದೆ. 383 ರೂಪಾಯಿ ಬೆಲೆ ಬಾಳುವ ಮದ್ಯ 295 ರೂ.ಗೆ, 680 ರೂ. ಬೆಲೆ ಬಾಳುವ ಮದ್ಯ 595 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ ಇದೆ.
ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,600ರಿಂದ 23,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 27,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ಸಾಕಷ್ಟು ದುಬಾರಿಯೇ ಇದೆ. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂಚಬೇಕಾದ ಸ್ಥಿತಿಯಲ್ಲಿರುವ ಸರಕಾರ, ವರಮಾನ ಹೆಚ್ಚಳಕ್ಕಾಗಿ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಇಳಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಟಾರ್ಗೆಟ್ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್ ಹೆಚ್ಚು ವರಮಾನ
ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.
ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.
2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: CM Siddaramaiah: ಅಬಕಾರಿ ಪರವಾನಗಿ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ