Site icon Vistara News

Lockup Death: ದಾವಣಗೆರೆ ಯುವಕನ ಸಾವು ಪ್ರಕರಣ ಲಾಕಪ್ ಡೆತ್ ಅಲ್ಲ, ಎಫ್ಐಆರ್ ಇಲ್ಲದೆ ಕರೆ ತಂದಿದ್ದು ತಪ್ಪು ಎಂದ ಸಿಎಂ

Lockup Death

ಮೈಸೂರು: ದಾವಣಗೆರೆ ಯುವಕನ ಸಾವು ಪ್ರಕರಣ ಲಾಕಪ್ ಡೆತ್ (Lockup Death) ಅಲ್ಲ. ಅವನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತ ಪಟ್ಟಿದ್ದಾನೆ. ಆದರೆ, ಎಫ್ಐಆರ್ ಮಾಡದೇ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ. ಆದರೆ ಇದು ಲಾಕಪ್ ಡೆತ್ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯ ಚನ್ನಗಿರಿ ಠಾಣೆಯಲ್ಲಿ ಯುವಕನ ಸಾವು ಪ್ರಕರಣದ ಬಗ್ಗೆ ನಗರದಲ್ಲಿ ಸಿಎಂ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ (police custody) ಆರೋಪಿ ಸಾವಿಗೀಡಾಗಿದ್ದರಿಂದ (Lockup death), ರೊಚ್ಚಿಗೆದ್ದ ಸಂಬಂಧಿಕರು ಠಾಣೆಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದರು. ಅಲ್ಲದೇ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ ಪ್ರಕರಣದ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಆರೋಗ್ಯದಲ್ಲಿ‌ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ ಎಂದ ಗೃಹ ಸಚಿವ

ಚನ್ನಗಿರಿ ಪಟ್ಟಣದ ಯುವಕ​​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿ, ಆರೋಪಿ ಆದಿಲ್​ ವಿರುದ್ಧ ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ‌ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಕೆಜಿಹಳ್ಳಿ ಡಿಜೆಹಳ್ಳಿ ಘಟನೆ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯ ಘಟನೆಗೂ ಸಾಫ್ಟ್ ಆಗಿ ಉತ್ತರ ಕೊಟ್ಟಿರುವ ಪರಮೇಶ್ವರ್ ಅವರು, ಎಲ್ಲವೂ ಹೇಳಿ ಕೇಳಿ ಆಗಲ್ಲ. ಕಾನೂನು ರೀತ್ಯಾ ಕ್ರಮ ವಹಿಸುತ್ತೇವೆಂದು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ ಎಂದ ಎಚ್‌ಡಿಕೆ

ಸರ್ಕಾರ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುವ ವಾತವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಯಾಕೆಂದರೆ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಬಳಕೆ ಮಾಡಿಕೊಂಡಿದ್ದಾರೆ ಸರ್ಕಾರದವರು. ಆದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವಾಗಿದೆ. ಇದು ಸರ್ಕಾರದ ಸ್ವಯಂಕೃತ ಅಪರಾಧ. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ | Lockup Death: ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು, ರೊಚ್ಚಿಗೆದ್ದ ಸಂಬಂಧಿಕರಿಂದ ಠಾಣೆ ಧ್ವಂಸ

ಸಿದ್ದರಾಮಯ್ಯ ಅವರೇ ಈಗಲಾದ್ರೂ ನಿದ್ದೆಯಿಂದ ಎದ್ದೇಳಿ ಎಂದ ಅಶೋಕ್‌

ಚನ್ನಗಿರಿ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಅಂತ ಒಂದು ವರ್ಷದಿಂದ ಸರ್ಕಾರಕ್ಕೆ ತಿಳಿ ಹೇಳಿದ್ದೆವು. ಸರ್ಕಾರದಲ್ಲಿ ಇಂಟೆಲಿಜೆನ್ಸಿ ಇದೆಯೋ, ಸತ್ತು ಹೋಗಿದೆಯೋ ಗೊತ್ತಿಲ್ಲ. ಉಡುಪಿ, ಬೆಳಗಾವಿ, ಚನ್ನಗಿರಿಯಲ್ಲಿ ಘಟನೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಬೆಂಗಳೂರಿನ ಕಂಪನಿಗಳು ಚೆನ್ನೈಗೆ ಹೋಗುತ್ತಿವೆ. ಅಂತಾರಾಷ್ಟ್ರೀಯ ಕಂಪನಿಗಳು ಕರ್ನಾಟಕದಿಂದ ಕಾಲು ಕಿತ್ತಿವೆ. ಇದರಿಂದ ಬ್ರ್ಯಾಂಡ್‌ ಬೆಂಗಳೂರು ಬ್ಯಾಡ್ ಬೆಂಗಳೂರು ಆಗಿದೆ. ಕಾನೂನು ಸುವ್ಯವಸ್ಥೆ ಹಾಳಾದರೆ ಆರ್ಥಿಕತೆ ಕುಸಿಯುತ್ತೆ, ಮುಂದಿನ ದಿನಗಳಲ್ಲಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಹಾಗೆ ಆಗುತ್ತೆ. ಸಿದ್ದರಾಮಯ್ಯ ಅವರೇ ಈಗಲಾದ್ರೂ ನಿದ್ದೆಯಿಂದ ಎದ್ದೇಳಿ ಎಂದು ಕಿಡಿಕಾರಿದ್ದಾರೆ.

ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

ದಾವಣಗೆರೆ: ಚನ್ನಗಿರಿ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಡಿವೈಎಸ್ಪಿ ಪ್ರಶಾಂತ್ ಪಿ ಮುನ್ನೋಳಿ ಹಾಗೂ ಸಿಪಿಐ ನಿರಂಜನ್ ಅವರನ್ನು ಅಮಾನತು ಮಾಡಲಾಗಿದೆ.

ಎಫ್‌ಐಆರ್ ದಾಖಲು ಮಾಡದೆ ಅರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದು ತಪ್ಪು ಎಂದು ಅಮಾನತು ಮಾಡಲಾಗಿದೆ. ಅದಿಲ್ ವಿರುದ್ಧ ಮಟ್ಕಾ ದಂಧೆ ಸಂಬಂಧ ಮೂರು ಪ್ರಕರಣ ದಾಖಲಾಗಿದ್ದವು. ಶುಕ್ರವಾರ ಮಟ್ಕಾ ಕೇಸ್‌ನಲ್ಲಿ ಅದಿಲ್‌ನನ್ನು ಠಾಣೆಗೆ ಪೊಲೀಸರು ಕರೆಸಿದ್ದರು. ಆದರೆ, ಠಾಣೆಯಲ್ಲಿ ಯುವಕ ಮೃತಪಟ್ಟಿದ್ದ. ಹೀಗಾಗಿ ಪೊಲೀಸರ ದೌರ್ಜನ್ಯದಿಂದ ಲಾಕಪ್‌ ಡೆತ್‌ ಆಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Exit mobile version