ದಾವಣಗೆರೆ: ಆದಿಲ್ ಲಾಕಪ್ ಡೆತ್ ಪ್ರಕರಣಕ್ಕೆ (Lockup Death) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ಪೊಲೀಸರ ಹಲ್ಲೆಯಿಂದ ಯುವಕ ಮೃತಪಟ್ಟಿದ್ದ ಎಂಬ ಆರೋಪಗಳು ಕೇಳಿಬಂದಿದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ಆಗಿತ್ತು. ಆದರೆ, ಮೊದಲಿಗೆ ಮಗನದ್ದು ಲಾಕಪ್ ಡೆತ್ ಅಲ್ಲ, ಲೋ ಬಿಪಿಯಿಂದ ಮೃತಪಟ್ಟಿದ್ದಾನೆ ಎಂದು ಹೇಳಿದ್ದ ಮೃತ ಯುವಕ ಆದಿಲ್ ತಂದೆ ಖಲೀಮುಲ್ಲಾ, ಇದೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ.
ಆದಿಲ್ ಸಾವು ಪ್ರಕರಣದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ್ದ ಖಲೀಮುಲ್ಲಾ ಅವರು, ಮೊದಲಿಗೆ ಮಗ ಕಡಿಮೆ ರಕ್ತದೊತ್ತಡದಿಂದ (Low Blood Pressure) ಮೃತಪಟ್ಟಿದ್ದಾನೆ. ಅವನಿಗೆ ಯಾವುದೇ ರೀತಿಯಾದ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ನಮಗೆ ಯಾವುದೇ ರೀತಿ ಅನುಮಾನ ಇಲ್ಲ. ನನ್ನ ಮಗ ಕಾರ್ಪೇಂಟರ್ ಕೆಲಸ ಮಾಡಿಕೊಂಡಿದ್ದ. ಯಾವುದೇ ಮಟ್ಕಾ ದಂಧೆ ಮಾಡುತ್ತಿರಲಿಲ್ಲ. ನೆನ್ನೆ ಮಗ ಸಾವನ್ನಪ್ಪಿದ್ದಕ್ಕೆ ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ, ಯಾರು ಕಲ್ಲು ಹೊಡೆದಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದ್ದರು.
ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ ಆಗುತ್ತಾ? ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದ ಮೃತ ಆದಿಲ್ ತಂದೆ ಖಲೀಮುಲ್ಲಾ ಮನವಿ ಮಾಡಿದ್ದರು. ಆದರೆ, ಇದೀಗ ತಾವು ಗಾಬರಿಯಲ್ಲಿ ಬೆಳಗ್ಗೆ ಏನೇನೋ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಗಾಬರಿಗೊಂಡು ಆ ರೀತಿ ಹೇಳಿದ್ದೆ, ಉಲ್ಟಾ ಹೊಡೆದ ತಂದೆ
ಮೊದಲಿಗೆ ಮಗನದ್ದು ಲಾಕಪ್ ಡೆತ್ ಅಲ್ಲ ಎಂದಿದ್ದ ಆದಿಲ್ ತಂದೆ ಖಲೀಮುಲ್ಲಾ, ಮತ್ತೆ ಉಲ್ಟಾ ಹೊಡೆದಿದ್ದಾರೆ. ಇದೀಗ ನನ್ನ ಮಗ ಲೋ ಬಿಪಿಯಿಂದ ಸಾವನ್ನಪ್ಪಿಲ್ಲ, ನಾನು ಗಾಬರಿಗೊಂಡು ಆ ರೀತಿ ಬೆಳಗ್ಗೆ ಹೇಳಿದ್ದೆ. ನನ್ನ ಮಗ ಲಾಕಪ್ ಡೆತ್‌ನಿಂದ ಸಾವನ್ನಪ್ಪಿರುವ ಬಗ್ಗೆ ಅನುಮಾನ ಇದೆ. ನನ್ನ ಬಿಪಿಯನ್ನು ನನ್ನ ಮಗನಿಗೆ ಇದೆ ಎಂದು ಹೇಳಿದೆ. ಮಗನ ಸಾವಿನಿಂದ ದಿಗ್ಭ್ರಮೆ ಆಗಿದೆ. ನನ್ನ ಮಗನನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದರು.
ನನ್ನ ಮಗನಿಗೆ ಮಟ್ಕಾ ದಂಧೆ ಜತೆ ಸಂಬಂಧ ಇಲ್ಲ, ಬಡಗಿ ಕೆಲಸ ಮಾಡುತ್ತಿದ್ದ. ನನ್ನ ಸೊಸೆ ಗಾಬರಿಯಿಂದ ಮಟ್ಕಾ ಆಡುತ್ತಿದ್ದ ಎಂದು ಹೇಳಿದ್ದಾಳೆ ಎಂದು ತಂದೆ ಹೇಳಿದ್ದಾರೆ.
ಇದನ್ನೂ ಓದಿ | Lockup Death: ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು, ರೊಚ್ಚಿಗೆದ್ದ ಸಂಬಂಧಿಕರಿಂದ ಠಾಣೆ ಧ್ವಂಸ
ನನ್ನ ಗಂಡನನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ: ಪತ್ನಿ ಆಕ್ರೋಶ
ಮೃತ ಆದಿಲ್ ಪತ್ನಿ ಹೀನಾಬಾನು ಪೊಲೀಸರ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ನನ್ನ ಗಂಡ ಮಟ್ಕಾ ಆಡಿಸುತ್ತಿದ್ದದ್ದು ಸತ್ಯ. ಆದರೆ, ಪೊಲೀಸರು ಪ್ರತಿ ತಿಂಗಳು ಕಮಿಷನ್ ವಸೂಲು ಮಾಡುತ್ತಿದ್ದರು. ಒಂದು ತಿಂಗಳು ಕೊಡದೆ ಇದಿದ್ದಕ್ಕೆ ಸಿವಿಲ್ ಡ್ರೆಸ್‌ನಲ್ಲಿ ಬಂದು ಪೊಲೀಸರು ಕರೆದುಕೊಂಡು ಹೋದರು. ನೆನ್ನೆ ಸಂಜೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದರೆ ಹೇಳಲಿಲ್ಲ. ನನ್ನ ಗಂಡನನ್ನು ಪೊಲೀಸರೇ ಹೊಡೆದಿದ್ದಾರೆ. ನನ್ನ ಗಂಡನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
ಪೊಲೀಸರಿಂದ ನನ್ನ ಗಂಡ ಸಾಕಷ್ಟು ಕಿರುಕುಳ ಅನುಭವಿಸಿದ್ದಾನೆ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬೇಕಾಬಿಟ್ಟಿ ಹೊಡೆದಿದ್ದಾರೆ. ಹೊಡೆದಾದ ಮೇಲೆ ಮೂರ್ಛೆ ರೋಗ ಎಂದು ಸುಳ್ಳು ಹೇಳಿದ್ದಾರೆ. ಈಗ ನನ್ನ ಮಕ್ಕಳು, ನನಗೆ ಯಾರು ಗತಿ? ಪೊಲೀಸರು ನನ್ನ ಗಂಡನ ಬದುಕಿಸಿ ಕೊಡ್ತಾರಾ? ಇಡೀ ಮನೆ ಹುಡುಕಿದರೂ ಒಂದು ಗುಳಿಗೆ ಸಿಗಲ್ಲ. ನನ್ನ ಗಂಡನಿಗೆ ಯಾವುದೇ ರೋಗ ಇರಲಿಲ್ಲ ಎಂದು ಪತ್ನಿ ಹೀನಾಬಾನು ಹೇಳಿದ್ದಾರೆ.