Site icon Vistara News

50 ವರ್ಷ ನಾನೊಂದು ತೀರ ನೀನೊಂದು ತೀರ: ವೃದ್ಧ ದಂಪತಿ ಈಗ ಹತ್ತಿರ ಹತ್ತಿರ!

old couple

ಬೆಂಗಳೂರು: ಕುಟುಂಬದಲ್ಲಿ ಎದುರಾದ ಯಾವುದೋ ಮನಸ್ತಾಪಕ್ಕೆ ದಂಪತಿ ಬೇರಾಗುವುದು, ವಿಚ್ಛೇದನ ಪಡೆಯುವುದು, ಜೀವನಾಂಶ ನೀಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬ ಮಾತು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ, ಸತತ 50 ವರ್ಷ ದೂರವಿದ್ದ ವೃದ್ಧ ದಂಪತಿ ಇದೀಗ ಇಳಿ ವಯಸ್ಸಿನಲ್ಲಿ ಒಂದಾಗಿ ಜೀವನ ಮಾಡಲು ಒಪ್ಪಿಕೊಂಡಿದ್ದಾರೆ!

ಇಂಥದ್ದೊಂದು ಘಟನೆಗೆ ಕಾರಣ ಹಾಗೂ ಸಾಕ್ಷಿಯಾಗಿದ್ದು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅದರ ಸಿಬ್ಬಂದಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧಾರವಾಡದ ವಯೋವೃದ್ಧ ದಂಪತಿ ಲೋಕ್ ಅದಾಲತ್‌ ಮೂಲಕ ಒಂದಾಗಿದ್ದಾರೆ.

ಪತಿಗೆ ಈಗ 85 ವರ್ಷ ಹಾಗೂ ಪತ್ನಿಗೆ 80 ವರ್ಷ. ಕುಟುಂಬ ಕಲಹದಲ್ಲಿ ಇಬ್ಬರೂ ಬೇರೆಯಾಗಿದ್ದರು. 50 ವರ್ಷದಿಂದಲೂ ಪತಿ ಜೀವನಾಂಶ ನೀಡುತ್ತಲೇ ಬಂದಿದ್ದರು. ಕೊನೆಗೆ ಇಬ್ಬರೂ ವಿಚ್ಛೇದನ ಬೇಕೆಬೇಕೆಂದು ಹಠ ಹಿಡಿದು ಲೋಕ್‌ ಅದಾಲತ್‌ಗೆ ಬಂದಿದ್ದಾರೆ. ಅಲ್ಲಿನ ನ್ಯಾಯಾಧೀಶರು, ಕಾನೂನು ಸಲಹೆಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೊನೆಗೆ, ತಾವಿನ್ನು ಒಟ್ಟಿಗೆ ಜೀನ ನಡೆಸುತ್ತೇವೆ ಎಂದು ಪರಸ್ಪರ ಒಪ್ಪಿ ನ್ಯಾಯಾಧೀಶರೆದುರು ಸಹಿ ಮಾಡಿದ್ದಾರೆ. ಅಲ್ಲಿಗೆ 50 ವರ್ಷದ ಮುನಿಸಿಗೆ ತೆರೆ ಎಳೆದಿದ್ದಾರೆ.

ಇದೊಂದೆ ಅಲ್ಲ. ಜೂನ್‌ 25ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆದ ಲೋಕ ಅದಾಲತ್‌ನಲ್ಲಿ ಇಂತಹ 107 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಂಪತಿಯನ್ನು ಒಂದುಮಾಡಲಾಗಿದೆ. ಒಂದೂವರೆ ವರ್ಷದಿಂದ ಬೇರೆ ವಾಸಿಸುತ್ತಿದ್ದ ಚಿಕ್ಕಮಗಳೂರಿನ ಯುವ ದಂಪತಿ, ಎರಡು ವರ್ಷದಿಂದ ಪ್ರತ್ಯೇಕವಾಗಿದ್ದ ಗಂಡ ಹೆಂಡತಿ, ಮಗುವನ್ನು ಹೊಂದಿದ್ದರೂ ಒಂದಾಗಲು ಮುಂದಾಗದೆ ದೂರವಾಗಿದ್ದ ವಿಜಯಪುರದ ದಂಪತಿ ಸೇರಿ 107 ಕುಟುಂಬಗಳು ಜತೆಯಾಗಿವೆ ಎಂಬ ಮಾಹಿತಿಯನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ. ಬಿ. ವೀರಪ್ಪ ಮಾಹಿತಿ ನೀಡಿದ್ದಾರೆ.

ದಾಖಲೆಯ ಪ್ರಕರಣಗಳ ಇತ್ಯರ್ಥ

ಈ ಬಾರಿ ಲೋಕ ಅದಾಲತ್ ಮೂಲಕ ದಾಖಲೆ ಮಟ್ಟದ ಕೇಸ್‌ಗಳನ್ನು ಬಗೆಹರಿಸಲಾಗಿದೆ. ವಿಶೇಷವಾಗಿ ದಂಪತಿಯನ್ನು ಒಂದೂಗೂಡಿಸುವಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿದೆ. ಒಂದೇ ಬಾರಿಗೆ 7 ಲಕ್ಷದ 65 ಸಾವಿರ ಪ್ರಕರಣಗಳನ್ನು ಬಗೆಹರಿಸಲಾಗಿದೆ. 2016 ಅಕ್ಟೋಬರ್ 8ರಂದು ನಡೆದ ಲೋಕ ಅದಾಲತ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು, ಅಂದರೆ 6.16 ಲಕ್ಷ ಪ್ರಕರಣಗಳನ್ನು ಬಗೆಹರಿಸಲಾಗಿತ್ತು. ಇದು ಈವರೆಗಿನ ಅತೀ ಹೆಚ್ಚು ಪ್ರಕರಣಗಳು ಬಗೆಹರಿದ ದಾಖಲೆಯಾಗಿತ್ತು.

ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ 1,003 ಕೋಟಿಗೂ ಹೆಚ್ಚು ದಂಡ ಬರಬೇಕಿದೆ, ಇದರಲ್ಲಿ ಶೇ. 80ರಷ್ಟು ಪ್ರಕರಣಗಳು ಬೆಂಗಳೂರು ಕಮಿಷನರೇಟ್‌ನಲ್ಲಿಯೇ ಬಾಕಿ ಇವೆ. ಎಲ್ಲ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2.23 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿಲಾಗಿದೆ ಎಂದು ನ್ಯಾ. ಬಿ. ವೀರಪ್ಪ ತಿಳಿಸಿದ್ದಾರೆ.

2.23 ಲಕ್ಷ ಟ್ರಾಫಿಕ್ ಚಲನ್ ಪಟ್ಟಿ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 22.36 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ. ಕಂದಾಯ ಪ್ರಕರಣಗಳಲ್ಲಿ 1.46 ಲಕ್ಷ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಬ್ಯಾಂಕ್ ವ್ಯಾಜ್ಯವಿದ್ದ 5,585 ಪ್ರಕರಣಗಳಲ್ಲಿ 36 ಕೋಟಿ ರೂ. ಸಂಗ್ರಹಿಸಲಾಗಿದೆ.

ವಿದ್ಯುತ್ ಮತ್ತು ನೀರಿನ ಕುರಿತು 11,842 ಪ್ರಕರಣಗಳಲ್ಲಿ 3.10 ಕೋಟಿ ರೂ. ಸಂಗ್ರಹಿಸಲಾಗಿದೆ. ರಿಯಲ್ ಎಸ್ಟೇಟ್ ಪ್ರಕರಣಗಳಲ್ಲಿ 222 ಪ್ರಕರಣಗಳನ್ನು ಬಗೆಹರಿಸಲಾಗಿದೆ. 5.85 ಕೋಟಿ ರೂ. ಪರಿಹಾರ ನೀಡಲಾಗಿದೆ. ವೈವಾಹಿಕ ಪ್ರಕರಣಗಳಲ್ಲಿ ಒಟ್ಟು 1,128 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಅದರಲ್ಲಿ 107 ದಂಪತಿಗಳು ಒಂದಾಗಿ ಜೀವನ ನಡೆಸಲು ತಿರ್ಮಾನ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೃತ ಸರ್ಕಾರಿ ನೌಕರರ ಪಿಂಚಣಿ ಗೊಂದಲ ಬಗೆಹರಿಸಿದ ಸರ್ಕಾರ

Exit mobile version