Site icon Vistara News

Amit Shah: ಡಿಕೆಶಿಯ ‘ಬಂಡೆ’ ಸಾಮ್ರಾಜ್ಯದಲ್ಲಿ ನಾಳೆ ಅಮಿತ್‌ ಶಾ ರಣಕಹಳೆ; ಇಲ್ಲಿದೆ ವೇಳಾಪಟ್ಟಿ

Amit Shah

Lok Sabha Election 2024: Amit Shah to hold road show during his day-long engagement in Karnataka tomorrow

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿಗಿಂತ ಲೋಕಸಭೆ ಚುನಾವಣೆ (Lok Sabha Election) ಕಾವೇ ದಿನೇದಿನೆ ಜಾಸ್ತಿಯಾಗುತ್ತಿದೆ. ಈ ಚುನಾವಣಾ ಕಾವನ್ನು ಇನ್ನಷ್ಟು ಹೆಚ್ಚಿಸಲು ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ಅಮಿತ್‌ ಶಾ (Amit Shah) ಅವರು ಮಂಗಳವಾರ (ಏಪ್ರಿಲ್‌ 2) ಕರ್ನಾಟಕಕ್ಕೆ (Karnataka) ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಜತೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌, ಬಿಜೆಪಿ ನಾಯಕರ ಜತೆ ಸಭೆ ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಅವರು ಸಂಸದರಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಚನ್ನಪಟ್ಟಣದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಚುನಾವಣೆಗೆ ಅಮಿತ್‌ ಶಾ ಅವರು ಭರ್ಜರಿಯಾಗಿಯೇ ರಣಕಹಳೆ ಮೊಳಗಿಸಲಿದ್ದಾರೆ.

ಸೋಮವಾರ (ಏಪ್ರಿಲ್‌ 1) ರಾತ್ರಿ 11 ಗಂಟೆಗೆ ಅಮಿತ್‌ ಶಾ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಅಮಿತ್‌ ಶಾ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿ, ಚುನಾವಣೆ ಸಿದ್ಧತೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. “ಮಂಗಳವಾರ ಬೆಳಗ್ಗೆ ಅಮಿತ್‌ ಶಾ ಅವರೊಂದಿಗೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಇದೆ. ಚುನಾವಣೆ ಸಿದ್ಧತೆ ಸೇರಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಲಾಗುವುದು” ಎಂದು ಕುಮಾರಸ್ವಾಮಿ ಅವರೇ ಮಾಹಿತಿ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

Parliament Election 2024 HDK Meets Amit Shah

ಶಕ್ತಿ ಕೇಂದ್ರ ಪ್ರಮುಖ್‌ ಸಮ್ಮೇಳನ

ಬೆಳಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರೊಂದಿಗೆ ಸಭೆ ನಡೆಸುವ ಅಮಿತ್‌ ಶಾ ಅವರು ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯುವ ಶಕ್ತಿಕೇಂದ್ರ ಪ್ರಮುಖ್‌ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳ ಕುರಿತು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ತಳಮಟ್ಟದಲ್ಲಿ ಸಂಘಟಿಸುವ ಕುರಿತು ಅಮಿತ್‌ ಶಾ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಭಿನ್ನಮತ ಶಮನಕ್ಕೆ ಸಭೆ

ಸಮಾವೇಶದ ಬಳಿಕ ಅಮಿತ್‌ ಶಾ ಅವರು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್‌, ತುಮಕೂರು, ದಾವಣಗೆರೆ ಹಾಗೂ ಬೆಳಗಾವಿ ಕ್ಷೇತ್ರಗಳ ಕೋರ್‌ ಕಮಿಟಿ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೂ ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಬೀಸಿರುವ ಕಾರಣ ಅಮಿತ್‌ ಶಾ ಅವರು ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: BJP Nominations: ಯದುವೀರ್‌ ಸೇರಿ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಇಲ್ಲಿವೆ Photos

ಬಂಡೆ ನಾಡಲ್ಲಿ ರಣಕಹಳೆ

ಸಂಜೆ 2 ಗಂಟೆ ಸುಮಾರಿಗೆ ಅಮಿತ್‌ ಶಾ ಅವರು ಚನ್ನಪಟ್ಟಣದಲ್ಲಿ ಬೃಹತ್‌ ರೋಡ್‌ ಕೈಗೊಳ್ಳಲಿದ್ದಾರೆ. ಆ ಮೂಲಕ ಡಿಕೆಶಿ ಹಾಗೂ ಡಿಕೆಸು ಸಹೋದರರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಅಮಿತ್‌ ಶಾ ಅವರು ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಚನ್ನಪಟ್ಟಣವು ಎಚ್‌.ಡಿ.ಕುಮಾರಸ್ವಾಮಿ ಅವರ ವಿಧಾನಸಭೆ ಕ್ಷೇತ್ರವಾಗಿದೆ. ಡಿ.ಕೆ.ಸುರೇಶ್‌ ಸಂಸದರಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್‌ ಅವರು ಕಣಕ್ಕಿಳಿದಿದ್ದಾರೆ. ಹಾಗಾಗಿ, ಚನ್ನಪಟ್ಟಣದಲ್ಲಿ ಅಮಿತ್‌ ಶಾ ಅವರ ರೋಡ್‌ ಶೋ ಪ್ರಾಮುಖ್ಯತೆ ಪಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version