ಬೆಂಗಳೂರು: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಶುಕ್ರವಾರ (ಏಪ್ರಿಲ್ 26) ಮತದಾನ ನಡೆಯಲಿದೆ. ಆ ಮೂಲಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಅಬ್ಬರವು ಮತ್ತೊಂದು ಹಂತ ತಲುಪಲಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದ್ದು, ಚುನಾವಣೆ ಆಯೋಗವು ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಶಾಲೆ-ಕಾಲೇಜುಗಳಿಗೆ ರಜೆ
ಮತದಾನದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆ-ಕಾಲೇಜುಗಳು ಸೇರಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅನಿವಾರ್ಯವಲ್ಲದ ಸರ್ಕಾರಿ ಸೇವೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಕಾರ್ಪೊರೇಟ್ ಕಚೇರಿಗಳು ಕೂಡ ಉದ್ಯೋಗಿಗಳಿಗೆ ಕಡ್ಡಾಯವಾಗಿ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಜನ ಭಾಗವಹಿಸಲು ಉತ್ತೇಜನ ನೀಡುವ ದಿಸೆಯಲ್ಲಿ ರಜೆ ಘೋಷಿಸಲು ಸೂಚಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಕೂಡ ರಜೆ ಘೋಷಣೆ ಮಾಡಿದೆ.
ಮತದಾನದ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್ 24) ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ. ಏಪ್ರಿಲ್ 26ರ ಮದ್ಯರಾತ್ರಿವರೆಗೆ ಮದ್ಯ ಸಿಗುವುದಿಲ್ಲ. ಹಾಗೆಯೇ, ಸಿಆರ್‌ಪಿಎಸಿ ಸೆಕ್ಷನ್ 144 ಜಾರಿಯಲ್ಲಿರುವ ಕಾರಣ ಐದಕ್ಕೂ ಅಧಿಕ ಜನ ಸೇರುವಂತಿಲ್ಲ. ರಾಜಕೀಯ ಘೋಷಣೆ ಕೂಗುವಂತಿಲ್ಲ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡುವಂತಿಲ್ಲ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮತದಾನ?
ಕೋಲಾರ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಒಂದು ಗಂಟೆವರೆಗೆ ವಿಸ್ತರಣೆ ಮಾಡಲಾಗುತ್ತದೆ.
ಯಾವ ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
ಕೇರಳದ ಎಲ್ಲ 20, ಕರ್ನಾಟಕ 14, ರಾಜಸ್ಥಾನ 13, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶ 6, ಬಿಹಾರ ಹಾಗೂ ಅಸ್ಸಾಂನ ತಲಾ 5, ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ಹಾಗೂ ಮಣಿಪುರದ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಜೂನ್ 1ರಂದು ಮುಕ್ತಾಯವಾಗಲಿದೆ. ಜೂನ್ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!