ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ Chikkaballapur) ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr K Sudhakar) ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮನೆ ದೇವರಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ನಾಮಪತ್ರ ಸಲ್ಲಿಸಿದರು. ಇನ್ನು, ಸುಧಾಕರ್ ಅವರು ಆಸ್ತಿಯ ಘೋಷಣೆಯನ್ನೂ ಮಾಡಿದ್ದು, ಇವರು ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 7.7 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇವರಿಗಿಂತ ಇವರ ಪತ್ನಿ ಡಾ.ಪ್ರೀತಿ ಜಿ.ಎ. ಅವರೇ ಹೆಚ್ಚು ಶ್ರೀಮಂತರಾಗಿದ್ದಾರೆ.
ಮಾಜಿ ಶಾಸಕ ಡಾ.ಕೆ. ಸುಧಾಕರ್ ಅವರು 2.69 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 2.63 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಸ್ವಯಾರ್ಜಿತವಾಗಿ ಗಳಿಸಿದ್ದಾರೆ. ಇನ್ನು, 2.38 ಕೋಟಿ ರೂ. ಸ್ಥಿರಾಸ್ತಿಯು ಪಿತ್ರಾರ್ಜಿತವಾಗಿ ಲಭಿಸಿದೆ. ಎಲ್ಲವೂ ಸೇರಿ ಅವರು 7.7 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ಇವರ ಪತ್ನಿ ಡಾ.ಪ್ರೀತಿ ಜಿ.ಎ. ಅವರೇ ಸುಮಾರು 24 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ಸುಧಾಕರ್ ಅವರು 1.31 ಕೋಟಿ ರೂ. ಸಾಲ ಮಾಡಿದ್ದರೆ, ಅವರ ಪತ್ನಿಯು 19.03 ಕೋಟಿ ರೂ. ಸಾಲ ಹೊಂದಿದ್ದಾರೆ. ಸುಧಾಕರ್ ಅವರು ಪತ್ನಿ ಬಳಿಯೇ 40 ಲಕ್ಷ ರೂ. ಸಾಲ ಮಾಡಿದ್ದಾರೆ.
ಎಂಟಿಬಿ ಆಶೀರ್ವಾದ ಪಡೆದ ಸುಧಾಕರ್
ನಾಮಪತ್ರ ಸಲ್ಲಿಕೆ ವೇಳೆ ಎಂ.ಟಿ.ಬಿ. ನಾಗರಾಜ್ ಅವರ ಕಾಲಿಗೆ ಬಿದ್ದು ಸುಧಾಕರ್ ಆಶೀರ್ವಾದ ಪಡೆದರು. ಇದೇ ವೇಳೆ, ನಾಗರಾಜ್ ಅವರು ನಾಮಪತ್ರ ಶುಲ್ಕವಾದ 25 ಸಾವಿರ ರೂ. ನೀಡಿ ಆಶೀರ್ವಾದ ಮಾಡಿದರು. ಹಲವು ಹಿರಿಯರ ಆಶೀರ್ವಾದ ಪಡೆದ ಬಳಿಕ ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಇವರಿಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದರು.
ಯದುವೀರ್ ಆಸ್ತಿ 4.99 ಕೋಟಿ ರೂ.
ಯದುವೀರ್ ಅವರು ಆಸ್ತಿಯ ಕುರಿತ ಅಫಿಡವಿಟ್‌ಅನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ. ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಯದುವೀರ್ ಅವರು 4,99,59,303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಯದುವೀರ್ ಅವರ ಪತ್ನಿ 1,04,25,000 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇವರ ಪುತ್ರನ (Dependent) ಹೆಸರಿನಲ್ಲಿ 3.63 ಕೋಟಿ ರೂ. ಆಸ್ತಿ ಇದೆ. ಯದುವೀರ್ ಅವರ ಕುಟುಂಬದಲ್ಲಿ (ಪತ್ನಿ ಹಾಗೂ ಪುತ್ರ) ಯಾರೂ ಸಾಲ ಹೊಂದಿಲ್ಲ ಎಂಬುದಾಗಿ ಯದುವೀರ್ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸುಧಾಕರ್ ಹೆಸರಲ್ಲಿ ಮತ ಕೇಳಿದ್ರೆ ಪಕ್ಷಕ್ಕೇ ಮೈನಸ್; ಬಿಜೆಪಿ ಶಾಸಕ ವಿಶ್ವನಾಥ್ ಕೆಂಡಾಮಂಡಲ!
ಸೌಮ್ಯಾ ರೆಡ್ಡಿ ಬಳಿ 2.13 ಕೋಟಿ ರೂ. ಆಸ್ತಿ
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು 2.13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ (Affidavit) ಉಲ್ಲೇಖಿಸಿದ್ದಾರೆ. ಜಯನಗರದ ಮಾಜಿ ಶಾಸಕಿಯೂ ಆಗಿರುವ ಸೌಮ್ಯಾ ರೆಡ್ಡಿ ಅವರು 89.27 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು 1.24 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಬಳಿ 44,135 ರೂ. ನಗದು ಇದೆ. ಬ್ಯಾಂಕ್ ಖಾತೆಯಲ್ಲಿ 40,96,252 ರೂ. ಇದೆ. 19,85,358 ರೂಪಾಯಿ ಬೆಲೆ ಬಾಳುವ ಒಂದು ಇನೋವಾ ಕಾರು ಕೂಡ ಇದೆ. 950 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಸೇರಿ ಒಟ್ಟು 28 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಬೇಗೂರು ಬಳಿ 1.24 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಇದೆ ಎಂಬುದಾಗಿ ಅವರು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ