ರಾಮನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಬಹುಮತದ ಮೂಲಕ ಆಯ್ಕೆಯಾಗಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳನ್ನು ಸಹ ಅನುಷ್ಠಾನಕ್ಕೆ ತರುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕನಿಷ್ಠ 20 ಸ್ಥಾನಗಳನ್ನು ಗೆದ್ದುಕೊಂಡು ಬರುವ ಪ್ಲ್ಯಾನ್ ಅನ್ನು ಮಾಡಿರುವ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಜೆಡಿಎಸ್-ಬಿಜೆಪಿ ನಡುವೆ ಹೊಂದಾಣಿಕೆ (BJP-JDS alliance) ಸೂತ್ರ ಏರ್ಪಟ್ಟಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಕ್ಷೇತ್ರ ಹಂಚಿಕೆ ಮಾಡಿಕೊಂಡು ಮೈತ್ರಿ ಮೂಲಕ ಕಣಕ್ಕಿಳಿಯಲಿದ್ದಾರೆಂಬ ಚರ್ಚೆಗಳು ನಡೆದಿದ್ದವು. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumarswamy), ಅದೆಲ್ಲವೂ ಗಾಳಿ ಸುದ್ದಿ. ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕವಷ್ಟೇ ಉತ್ತರ ಸಿಗಲಿದೆ. ಸದ್ಯಕ್ಕೆ ಈ ವಿಚಾರ ನನ್ನ ಮುಂದೆ ಚರ್ಚೆಯೇ ಆಗಿಲ್ಲ ಎಂದು ಹೇಳಿದ್ದಾರೆ.
ಚೆನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜಕಾರಣ ಎಂದ ಮೇಲೆ ಈ ರೀತಿಯ ಗಾಳಿ ಸುದ್ದಿಗಳು ಹರಡುತ್ತದೆ. ಕೆಲವು ಊಹಾಪೋಹಗಳೂ ಏಳುತ್ತವೆ. ಸದ್ಯಕ್ಕಂತೂ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ನನ್ನ ಮುಂದೆ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Free Bus Service: ಕೊನೆಗೂ ಬಗೆಹರಿದ ʼಒರಿಜಿನಲ್ʼ ಕಿರಿಕ್; ಇ-ಕಾಪಿ ಇದ್ದರೂ ಸಾಕು, ಬರಲಿದೆ ಹೊಸ ಆದೇಶ!
ನನಗೆ ರಾಜಕಾರಣವೇ ಸಾಕಾಗಿದೆ. ಈ ಬಗ್ಗೆ ಯಾವುದೇ ಒಲವಿಲ್ಲ. ಕಾರ್ಯಕರ್ತರಿಗೋಸ್ಕರ ಇದ್ದೇನೆ. ನಾನು ಸಿಎಂ ಸ್ಥಾನ ಬಿಟ್ಟ ದಿನವೇ ತೀರ್ಮಾನ ಮಾಡಬೇಕು ಅಂದುಕೊಂಡಿದ್ದೆ. ಈಗಿನ ರಾಜಕೀಯ ಪರಿಸ್ಥಿತಿಗಳು ಹಾಗಿದೆ ಎಂದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಆಸಕ್ತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಎಚ್.ಡಿ. ಕುಮಾರಸ್ವಾಮಿ ಹೀಗೆ ಉತ್ತರಿಸಿದರು.
ಸಂಸದ ಡಿ.ಕೆ. ಸುರೇಶ್ ಭ್ರಷ್ಟಾಚಾರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನದೇನೋ ಬಿಟ್ಟುಬಿಡಿ, ಈಗಿನ ಸಂಸದ ಡಿ.ಕೆ. ಸುರೇಶ್ ಅವರು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬಹಳ ನಿರಾಸೆಯಾಗಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಏಕೆಂದರೆ ಅವರ ಬಳಿ ಸಾಕ್ಷಿಗಳ ಗುಡ್ಡೆಗಳು ಇವೆ. ದೊಡ್ಡ ದೊಡ್ಡ ಕಲ್ಲು ಗುಡ್ಡೆಗಳು ನೆಲದ ಸಮಕ್ಕೆ ತಂದು ನಿಲ್ಲಿಸಿದ್ದಾರೆ. ಅಂಥವರೇ ಈಗ ಚುನಾವಣಾ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಪರಿಸ್ಥಿತಿ ಇರುವಾಗ ನಾನು ಯಾವ ರೀತಿ ಚುನಾವಣೆ ಎದುರಿಸಲಿ? ಭ್ರಷ್ಟಾಚಾರದ ಬಗ್ಗೆ ಅವರೇ ಯೋಚನೆ ಮಾಡಬೇಕಾದರೆ ನನ್ನಂತವನ ಸ್ಥಿತಿ ಏನಾಗಬೇಕು? ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶಕ್ತಿ ಯೋಜನೆಗೆ ಕಾಂಗ್ರೆಸ್ ಚಾಲನೆ ಕೊಟ್ಟಿದೆ. ಆದರೆ, ಇದ್ಯಾವ ಯೋಜನೆಗಳಿಗೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಕೆ ಇನ್ನೂ ಸಮಯ ಇದೆ. ನನಗೆ ಆತುರ ಇಲ್ಲ, ಮುಂದೆ ಚರ್ಚೆ ಮಾಡೋಣ. ಇನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ವಿದ್ಯುತ್ ದರ ಏರಿಕೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಮುಂದೆ ಆಗುವ ಅನಾಹುತಗಳ ಬಗ್ಗೆ ಹೇಳಿದ್ದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್: ಏನಿದು ಸರ್ಕಾರದ 53 ಯುನಿಟ್ ಸೂತ್ರ?
ಕಾಂಗ್ರೆಸ್ ವಿರುದ್ಧ 640 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ತಾವು ಮಾಡಿರುವ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಹೇಳಿಕೆ ನೀಡಿರುವ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ, ನೀವು ಬಿಜೆಪಿ ವಿರುದ್ಧ 40 ಪರ್ಸೆಂಟ್ ಸರ್ಕಾರ ಅಂತ ಡಂಗುರ ಹೊಡೆದಿರಲಿಲ್ಲವೇ? ಯಾವ ಸಾಕ್ಷಿ ಇಟ್ಟುಕೊಂಡಿದ್ದಿರಿ? ಅವನ್ಯಾರೋ ಗುತ್ತಿಗೆದಾರ ದೂರು ಕೊಟ್ಟನಲ್ಲ? ಅವರು ಸಾಕ್ಷಿ ಇಟ್ಟಿದ್ದರಾ? ನೀವು 40% ಬಗ್ಗೆ ಆರೋಪಿಸಿದ್ದಿರಲ್ಲ, ಅದರ ಬಗ್ಗೆ ಯಾಕೆ ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ? ಹೋಗಲಿ ಈಗ ನೀವೇ ಅಧಿಕಾರದಲ್ಲಿದ್ದೀರಲ್ಲ ಅದರ ಬಗ್ಗೆ ತನಿಖೆ ಮಾಡಿಸಿ ಎಂದು ತಿರುಗೇಟು ನೀಡಿದ್ದಾರೆ.